ADVERTISEMENT

ಸಿದ್ಧವಿರುವ ಹಾಸಿಗೆ ವಿಳಂಬವೇಕೆ? ರಾಜ್ಯ ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 12 ಮೇ 2021, 20:05 IST
Last Updated 12 ಮೇ 2021, 20:05 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ರೈಲ್ವೆ ಇಲಾಖೆ ಮತ್ತು ಭಾರತೀಯ ವಾಯುಪಡೆ (ಐಎಎಫ್) ಒದಗಿಸಲು ಮುಂದಾಗಿರುವ ಹಾಸಿಗೆ ಸೌಲಭ್ಯಗಳನ್ನು ಬಳಸಿಕೊಳ್ಳಲು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಸೌಲಭ್ಯಗಳನ್ನು ಬಳಸಿಕೊಳ್ಳಲು ಮೇ 4ರಂದೇ ನೈರುತ್ಯ ರೈಲ್ವೆ ಮತ್ತು ಭಾರತೀಯ ವಾಯುಪಡೆ ಸೂಚನೆ ನೀಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬುದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದಕುಮಾರ್ ಅವರನ್ನು ಒಳಗೊಂಡ ವಿಶೇಷ ವಿಭಾಗೀಯ ಪೀಠ, ‘ವಿಳಂಬಕ್ಕೆ ಕಾರಣ ಏನು ಎಂಬುದರ ವಿವರ ಸಲ್ಲಿಸಬೇಕು’ ಎಂದು ಈ ಆದೇಶ ನೀಡಿತು.

ರಾಜ್ಯದಲ್ಲಿ ಆಮ್ಲಜನಕ ಸಹಿತ 45,754 ಹಾಸಿಗೆ, 5,305 ಐಸಿಯು ಹಾಸಿಗೆ, 4,109 ವೆಂಟಿಲೇಟರ್ ಸಹಿತ ಹಾಸಿಗೆಗಳು ಲಭ್ಯ ಇವೆ ಎಂದು ರಾಜ್ಯ ಸರ್ಕಾರ ವಿವರ ಸಲ್ಲಿಸಿತು.

ADVERTISEMENT

‘ಅಗತ್ಯಕ್ಕೆ ತಕ್ಕಷ್ಟು ಹಾಸಿಗೆ ಸೌಲಭ್ಯ ಇಲ್ಲ ಎಂಬುದನ್ನು ಈ ಅಂಕಿ– ಅಂಶ ತೋರಿಸುತ್ತದೆ. ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ಸಿದ್ಧಪಡಿಸಿರುವ ಹಾಸಿಗೆಗಳನ್ನು ಕೂಡಲೇ ಬಳಸಿಕೊಳ್ಳಬೇಕು’ ಎಂದು ಸರ್ಕಾರಕ್ಕೆ ಪೀಠ ನಿರ್ದೇಶನ
ನೀಡಿತು.

‘ಜಾಲಹಳ್ಳಿಯಲ್ಲಿ ಐಎಎಫ್ ಸಿದ್ಧಪಡಿಸಿರುವ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿ ಸಹಿತ ಹಾಸಿಗೆ ಸೌಲಭ್ಯವನ್ನು 24 ಗಂಟೆಯೊಳಗೆ ಸ್ವಾಧೀನಕ್ಕೆ ಪಡೆಯಬೇಕು ಎಂದು ಪಾಲಿಕೆ ಮುಖ್ಯ ಆಯುಕ್ತರಿಗೆ ಸೂಚನೆ ನೀಡಲಾಗುತ್ತಿದೆ’ ಎಂದು ಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.