ADVERTISEMENT

ಮೋದಿ ವಿರುದ್ಧ ಏಕವಚನ ಬಳಕೆ: ಸಿದ್ದರಾಮಯ್ಯಗೆ ಸಂಸ್ಕೃತಿಯ ಅರಿವಿಲ್ಲವೆಂದ ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಅಕ್ಟೋಬರ್ 2021, 10:52 IST
Last Updated 17 ಅಕ್ಟೋಬರ್ 2021, 10:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಾತೆತ್ತಿದರೆ ನಾನು ಹಳ್ಳಿಯವನು, ನಾನು ಮಾತನಾಡುವ ಶೈಲಿ ಹೀಗೆ ಎನ್ನುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಗ್ರಾಮೀಣ ಸಂಸ್ಕೃತಿಯ ಅರಿವೇ ಇಲ್ಲ ಎಂದು ಬಿಜೆಪಿ ಟೀಕಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಿದ್ದರಾಮಯ್ಯ ಏಕವಚನದಲ್ಲಿ ಟೀಕಿಸಿರುವ ವರದಿ ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

‘ಮಾತೆತ್ತಿದರೆ ನಾನು ಹಳ್ಳಿಯವನು, ನಾನು ಮಾತನಾಡುವ ಶೈಲಿ ಹೀಗೆ ಎನ್ನುವ ನಿಮಗೆ ಗ್ರಾಮೀಣ ಸಂಸ್ಕೃತಿಯ ಅರಿವೇ ಇಲ್ಲ. ಅನ್ಯರನ್ನು ಪ್ರೀತಿ, ಬಹುವಚನ, ಆದರದಿಂದ ಮಾತನಾಡುವುದು ಗ್ರಾಮೀಣ ಸಂಸ್ಕೃತಿ. ಆದರೆ ನಿಮ್ಮಂಥ 'ಮನೆಮುರುಕರು' ಏಕವಚನ ಪ್ರಯೋಗವನ್ನೇ ಗ್ರಾಮೀಣ ಸಂಸ್ಕಾರ ಎಂದುಕೊಂಡಿದ್ದಾರೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಜತೆಗೆ, ‘ಜನರಿಂದ ನಿರಂತರ ಎರಡನೇ ಅವಧಿಗೆ ಆಯ್ಕೆಯಾಗಿ ಪ್ರಧಾನ ಸೇವಕನ ಸ್ಥಾನ ಅಲಂಕರಿಸಿರುವ ಪ್ರಧಾನಿ ಹುದ್ದೆಯ ಕುರಿತು ಕೀಳು ಮಟ್ಟದಲ್ಲಿ ಮಾತನಾಡಿ ನಿಮ್ಮ ಕೀಳು ಸಂಸ್ಕಾರ ಅನಾವರಣ ಮಾಡಿಕೊಂಡಿದ್ದೀರಿ. ಸರ್ಕಾರಿ ಬಂಗಲೆಯಲ್ಲೇ ಉಳಿಯಬೇಕೆಂಬ ಹಟಕ್ಕೆ ಪ್ರತಿಪಕ್ಷ ಸ್ಥಾನ ಪಟ್ಟು ಹಿಡಿದು ಉಳಿಸಿಕೊಂಡ ನಿಮ್ಮಂತವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ನಿರಂತರ 20 ವರ್ಷಗಳಿಂದ ಜನರಿಂದ ಆಯ್ಕೆಯಾಗಿ ಸಾಂವಿಧಾನಿಕ ಹುದ್ದೆಯಲ್ಲಿರುವ ಮೋದಿ ಅವರ ಕುರಿತು ಏಕವಚನದಲ್ಲಿ ಮಾತನಾಡುವ ಮುನ್ನ ಎಚ್ಚರವಹಿಸಿ. ನಿಮ್ಮ ದುರಹಂಕಾರ, ದಾರ್ಷ್ಟ್ಯಕ್ಕಾಗಿ ಮಾಜಿ ಮುಖ್ಯಮಂತ್ರಿಯೊಬ್ಬರಿಂದ ನಿಮ್ಮ ಸಾಂವಿಧಾನಿಕ ಹುದ್ದೆಯ ಮೇಲೆ ಪ್ರಯೋಗವಾದ ಪದವನ್ನು ಹೇಗೆ ಅರಗಿಸಿಕೊಂಡಿರಿ’ ಎಂದು ಟ್ವೀಟ್‌ನಲ್ಲಿ ಬಿಜೆಪಿ ಪ್ರಶ್ನಿಸಿದೆ.

‘ಅಪ್ಪ, ಅಜ್ಜಿ, ಮುತ್ತಾತ ಪ್ರಧಾನಿಯಾಗಿದ್ದರೆಂಬ ಕಾರಣಕ್ಕೆ ತಾನು ಪ್ರಧಾನಿಯಾಗಬೇಕೆಂದು ಓರ್ವ ಹೆಬ್ಬೆಟ್ಟು ಗಿರಾಕಿ ಕನಸು ಕಾಣುತ್ತಿದ್ದಾನೆ. ಸಿದ್ದರಾಮಯ್ಯನವರೇ, ಆತನ ಯೋಗ್ಯತೆ, ಅರ್ಹತೆ ಏನು ಎಂದು ವಿಚಾರಿಸಿ. ನಿಮ್ಮ ಶಾಶ್ವತ ಪ್ರಧಾನಿ ಅಭ್ಯರ್ಥಿಯ ಬಗ್ಗೆಯೂ ಹೀಗೇ ಮಾತನಾಡುತ್ತೀರಾ ನೀವು’ ಎಂದು ಬಿಜೆಪಿ ಕುಹಕವಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.