ADVERTISEMENT

ಬಸ್‌ ಕೊರತೆ ಊರಿನ ಹುಡುಗಿಗೆ 20 ಚಿನ್ನದ ಪದಕ ಹಾಗೂ 4 ದತ್ತಿ ಬಹುಮಾನ

20 ಚಿನ್ನದ ಪದಕ, 4 ಬಹುಮಾನ– ಶಿರಸಿ ತಾಲ್ಲೂಕಿನ ಶೀಗೆಹಳ್ಳಿಯ ಚೈತ್ರಾ

ಕೆ.ಓಂಕಾರ ಮೂರ್ತಿ
Published 6 ಸೆಪ್ಟೆಂಬರ್ 2021, 20:22 IST
Last Updated 6 ಸೆಪ್ಟೆಂಬರ್ 2021, 20:22 IST
ಚೈತ್ರಾ ನಾರಾಯಣ ಹೆಗಡೆ
ಚೈತ್ರಾ ನಾರಾಯಣ ಹೆಗಡೆ   

ಮೈಸೂರು: ‘ನಮ್ಮೂರು ಶೀಗೆಹಳ್ಳಿಗೆ ಸರಿಯಾಗಿ ಬಸ್‌ ಬರುವುದಿಲ್ಲ. ಕಾಲೇಜು ಕೂಡಾ ದೂರ. ಹೀಗಾಗಿ, ಬೇರೆ ಊರಿನಲ್ಲಿ ಇದ್ದುಕೊಂಡೇ ವ್ಯಾಸಂಗ ಮಾಡಿದೆ. ಅಡಿಕೆ ಕೃಷಿಕರಾದ ಅಪ್ಪ–ಅಮ್ಮ ನೀಡಿದ ಉತ್ತೇಜನವೂ ಕೈಹಿಡಿಯಿತು’.

ಮಂಗಳವಾರ ನಡೆಯುವ ಮೈಸೂರು ವಿಶ್ವವಿದ್ಯಾಲಯದ 101ನೇ ಘಟಿಕೋತ್ಸವದಲ್ಲಿ 20 ಚಿನ್ನದ ಪದಕ ಹಾಗೂ 4 ದತ್ತಿ ಬಹುಮಾನ ಪಡೆಯಲಿರುವ, ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಚೈತ್ರಾ ನಾರಾಯಣ ಹೆಗಡೆ ಹೆಮ್ಮೆಯಿಂದ ಹೀಗೆ ಹೇಳಿದರು. ಈ ಬಾರಿ ಅತಿ ಹೆಚ್ಚು ಚಿನ್ನದ ಪದಕ ಪಡೆಯುವ ಶ್ರೇಯ ಅವರದು.

ಎಂ.ಎಸ್ಸಿ ರಸಾಯನ ವಿಜ್ಞಾನ ವಿಷಯದಲ್ಲಿ ಸಾಧನೆ ಮಾಡಿರುವ ಅವರಿಗೆ ಇಲ್ಲಿನ ಕ್ರಾಫರ್ಡ್‌ ಭವನದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಪದಕ ಪ್ರದಾನ ಮಾಡಲಿದ್ದಾರೆ. ಯುವರಾಜ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿರುವ ಅವರಿಗೆ ಮೆಡಿಸಿನ್‌ ಕೆಮಿಸ್ಟ್ರಿಯಲ್ಲಿ ಸಂಶೋಧನೆ ಮಾಡುವ ಆಸಕ್ತಿ ಇದೆ.

ADVERTISEMENT

‘ಪಿಜಿಯಲ್ಲಿ ಇದ್ದುಕೊಂಡೇ ಓದಿದೆ. ಹೆಚ್ಚು ಪದಕಗಳನ್ನು ಪಡೆಯಬೇಕೆಂಬ ಮಹದಾಸೆಯೂ ಇತ್ತು. ಆದರೆ, ಇಪ್ಪತ್ತು ಪದಕಗಳನ್ನು ಗಳಿಸುವೆ ಎಂದುಕೊಂಡಿರಲಿಲ್ಲ. ಈಗ ಅನಿರೀಕ್ಷಿತ ಫಲಿತಾಂಶದಿಂದ ಏಕಕಾಲಕ್ಕೆ ಅಚ್ಚರಿಯೂ ಸಂತೋಷವೂ ಆಗಿದೆ’ ಎಂದರು.

‘ಅಪ್ಪ ನಾರಾಯಣ ಹೆಗಡೆ ಹಾಗೂ ಅಮ್ಮ ಸುಮಂಗಳಾ ಹೆಗಡೆ ಅವರಿಗೆ ಈ ಎಲ್ಲ ಪದಕಗಳು ಸಮರ್ಪಿತ. ಅವರು ಯಾವತ್ತೂ ನನ್ನ ಮೇಲೆ ಒತ್ತಡ ಹಾಕಲಿಲ್ಲ. ಬದಲಾಗಿ ನಾನು ಇಷ್ಟಪಟ್ಟ ವಿಷಯ ಆಯ್ಕೆ ಮಾಡಿಕೊಂಡು ಓದಲು ಅವಕಾಶ ಮಾಡಿಕೊಟ್ಟರು. ಬೋಧಕರಿಗೂ ಧನ್ಯವಾದ ಅರ್ಪಿಸುವೆ’ ಎಂದು ಅವರು ‘ಪ್ರಜಾವಾಣಿ’‍ಗೆ ಪ್ರತಿಕ್ರಿಯಿಸಿದರು.

‘ಪಿಯು ಓದುತ್ತಿದ್ದಾಗ ನಮ್ಮೂರಿಗೆ ಬೆಳಿಗ್ಗೆ, ಸಂಜೆ ಮಾತ್ರ ಬಸ್‌ ಬರುತಿತ್ತು. ಅದು ತಪ್ಪಿದರೆ ಪೋಷಕರೇ ಕರೆದುಕೊಂಡು ಹೋಗಬೇಕಿತ್ತು. ಈಗಲೂ ಈ ಪರಿಸ್ಥಿತಿ ಸುಧಾರಿಸಿಲ್ಲ. ವರ್ಕ್‌ ಫ್ರಂ ಹೋಂಗೆ ಸರಿಯಾಗಿ ನೆಟ್‌ವರ್ಕ್‌ ಸಿಗುವುದಿಲ್ಲ’ ಎಂದು
ನುಡಿದರು.

‘ಶಿರಸಿಯ ಚೈತನ್ಯ ಕಾಲೇಜಿನಲ್ಲಿ ಪಿಯುಸಿ ಓದಿದೆ. ಬಳಿಕ ಮೈಸೂರಿಗೆ ಬಂದು ಯುವರಾಜ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪೂರೈಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.