ADVERTISEMENT

ಸೈಕಲ್‌ ಜಾಥಾ ಬಳಿಕ ಬೆಂಜ್ ಕಾರ್ ಹತ್ತುವ ‘ಕೈ’ ನಾಯಕರು: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 21:43 IST
Last Updated 20 ಸೆಪ್ಟೆಂಬರ್ 2021, 21:43 IST
ವಿಧಾನಸಭಾ ಅಧಿವೇಶನದಲ್ಲಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿವಿಧ ಭಂಗಿಗಳು
ವಿಧಾನಸಭಾ ಅಧಿವೇಶನದಲ್ಲಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿವಿಧ ಭಂಗಿಗಳು   

ಬೆಂಗಳೂರು: ‘ಗೇರ್‌ ಸೈಕಲ್‌ನಲ್ಲಿ ಬಂದು ಪ್ರತಿಭಟನೆ ಮಾಡಿ ನಂತರ ಬೆಂಜ್‌ ಕಾರಿನಲ್ಲಿ ಹೋಗುವ ನಿಮ್ಮ ಬಗ್ಗೆ ಜನರಿಗೆ ಚೆನ್ನಾಗಿ ಗೊತ್ತಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ನಾಯಕರನ್ನು ಛೇಡಿಸಿದರು.

ವಿಧಾನಸಭೆಯಲ್ಲಿ ಸೋಮವಾರ ಕಾಂಗ್ರೆಸ್‌ ನಾಯಕರ ಸೈಕಲ್‌ ಜಾಥಾ ಬಗ್ಗೆ ಲೇವಡಿ ಮಾಡಿದ ಬೊಮ್ಮಾಯಿ, ‘ನೀವು ಎಷ್ಟು ಸೈಕಲ್‌ ಹೊಡೆದರೂ ಏನೂ ಆಗಲ್ಲ. ನಿಮ್ಮ ಸೈಕಲ್‌ ಜಾಥಾವನ್ನು ನಾನೂ ನೋಡಿದೆ. ಸೈಕಲ್‌ ಮತ್ತು ಚಕ್ಕಡಿ ಹೊಡೆಯುವ ಅನುಭವ ನಿಮಗಿಲ್ಲ’ ಎಂದರು.

‘ಚಕ್ಕಡಿಯ ನೊಗ ಸಿದ್ದರಾಮಯ್ಯ ಅವರ ಕೈಯಲ್ಲಿದ್ದರೆ, ಬಾರು ಕೋಲು ಡಿ.ಕೆ.ಶಿವಕುಮಾರ್‌ ಕೈಯಲ್ಲಿತ್ತು. ಒಬ್ಬರು ಬಾರು ಕೋಲಿನಿಂದ ಬಾರಿಸಿದರೆ, ಮತ್ತೊಬ್ಬರು ನೊಗ ಹಿಡಿದೆಳೆಯುತ್ತಿದ್ದರು. ಎತ್ತಿಗೆ ಏನು ಮಾಡಬೇಕೆಂದು ತೋಚದೆ ಗಾಬರಿಗೊಂಡು ಓಡಿತು. ಇದರಿಂದ ಮೂರು ಜನ ಚಕ್ಕಡಿಯ ಹಿಂದೆ ಬಿದ್ದು ಹೋದರು’ ಎಂದು ಬೊಮ್ಮಾಯಿ ಕಾಲೆಳೆದರು.

ADVERTISEMENT

‘ನಾಲ್ಕೈದು ಗೇರ್‌ ಇರುವ ಸೈಕಲ್‌ ಹತ್ತಿದರೆ ತನ್ನಿಂತಾನೆ ಮುಂದೆ ಹೋಗುತ್ತದೆ. ಸಿದ್ದರಾಮಯ್ಯ ಸೈಕಲ್ ಮುಂದೆ ಹೋದರೆ, ಡಿ.ಕೆ ಸೈಕಲ್‌ ಹಿಂದಕ್ಕೆ ಉಳಿಯಿತು. ಇದೊಂದು ಮನರಂಜನೆ ಎಂಬುದು ಜನರಿಗೂ ಗೊತ್ತಿದೆ. ಎಲ್ಲ ಮುಗಿದ ಮೇಲೆ ಸೈಕಲ್‌ನಿಂದ ಇಳಿದು ಬೆಂಜ್‌ ಕಾರು ಹತ್ತಿಕೊಂಡು ಹೋಗುತ್ತೀರಿ’ ಎಂದರು.

ಕಡತದಿಂದ ತೆಗೆದ ಆಕ್ಷೇಪಾರ್ಹ ಪದ: ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತು ಸಿದ್ದರಾಮಯ್ಯ ಅವರು ಬಳಸಿದ ಪದವೊಂದರ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ, ಸಚಿವ ಕೆ.ಎಸ್‌.ಈಶ್ವರಪ್ಪ ಮತ್ತಿತರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಅದನ್ನು ಕಡತದಿಂದ ತೆಗೆದು ಹಾಕಲಾಯಿತು.

ಯಾವ ರೀತಿ ರಾಜ್ಯವನ್ನಾಳಬೇಕು?
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕುಮಾರವ್ಯಾಸನ ಭಾಮಿನಿ ಷಟ್ಪದಿಯಿಂದ ಆಯ್ದ ಸಾಲುಗಳನ್ನು ಉಲ್ಲೇಖಿಸಿ ರಾಜ ಹೇಗಿರಬಾರದು ಎಂದು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಇದಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರು, ರಾಜ ಯಾವ ರೀತಿ ರಾಜ್ಯವನ್ನಾಳಬೇಕು ಎಂಬುದನ್ನು ಕುಮಾರವ್ಯಾಸನ ಕಾವ್ಯದ ಸಾಲುಗಳನ್ನೇ ಉಲ್ಲೇಖಿಸಿ ತಿರುಗೇಟು ನೀಡಿದರು.

‘‘ಮಾಲೆಗಾರ ಸಿಳೀಮುಖನ ಪಶು
ಪಾಲಕನವೋಲ್ ಪ್ರಜೆಯ ರಕ್ಷಿಸಿ
ಮೇಲೆ ತೆಗೆವೈ ಧನವನುಳಿದಂಗಾರಕಾರಕನ
ವೋಲು ಕಡದುರು ವ್ಯಾಘ್ರನಂತೆ ವಿ
ತಾಳಿಸಲು ಪ್ರಜೆ ನಸಿಯಲರಸಿನ
ಬಾಳಿಕೆಗೆ ಸಂದೇಹವರಿಯಾ ರಾಯ ಕೇಳೆಂದ’’

ಇದರ ತಾತ್ಪರ್ಯ: ವಿದುರನು ಮೂರು ಉದಾಹರಣೆಗಳನ್ನು ನೀಡಿ ಧೃತರಾಷ್ಟ್ರನಿಗೆ ವಿವರಣೆ ನೀಡುತ್ತಾನೆ. ಯಾವ ರೀತಿ ಹೂವಾಡಿಗನು ಹೂವನ್ನು ಬಿಡಿಸಿ ಗಿಡವನ್ನು ರಕ್ಷಿಸುತ್ತಾನೋ, ದುಂಬಿಯು ಹೂವಿಗೆ ತೊಂದರೆ ಕೊಡದೆ ಹೂವಿನ ರಸವನ್ನು ಮಾತ್ರ ಹೀರುತ್ತದೆಯೋ, ಪಶುಪಾಲಕನು ಗೋವನ್ನು ರಕ್ಷಿಸಿ ಅದರಿಂದ ಹಾಲನ್ನು ಮಾತ್ರ ಕರೆದುಕೊಳ್ಳುತ್ತಾನೆಯೋ, ಹಾಗೆಯೇ ಪ್ರಜೆಗಳನ್ನು ರಕ್ಷಿಸಿ ತೆರಿಗೆಯನ್ನು ಸಂಗ್ರಹಿಸಬೇಕು. ಇದ್ದಿಲು ಮಾರುವವನು ಗಿಡವನ್ನೇ ಕಡಿದು ಸುಡುವಂತೆ, ಕಡಿಜೀರಗೆ ಹುಳವು ಛಿದ್ರಿಸುವಂತೆ, ಹುಲಿಯು ಹಸುವನ್ನೇ ಕೊಲ್ಲುವಂತೆ ಪ್ರಜೆಗಳನ್ನು ನಡೆಸಿಕೊಳ್ಳುವೆಯಾ? ಉತ್ತರಾರ್ಧದಲ್ಲಿ ಹೇಳಿರುವ ರೀತಿ ನೀನು ಪ್ರಜೆಗಳನ್ನು ನಡೆಸಿಕೊಂಡರೆ ಪ್ರಜೆಗಳು ನಶಿಸಿ ಹೋಗಿ ರಾಜನ ಉಳಿವೇ ಸಂಶಯಕ್ಕೆ ಒಳಗಾಗುತ್ತದೆ.

ಭೇಷ್‌ ಎಂದ ಬಿಎಸ್‌ವೈ
ಮುಖ್ಯಮಂತ್ರಿ ಬೊಮ್ಮಾಯಿ ಅವರು ಸದನದಲ್ಲಿ ಉತ್ತರ ನೀಡಿದ ಪರಿಗೆ ಖುಷಿಯಾದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮುಕ್ತ ಕಂಠದಿಂದ ಹೊಗಳಿದರು. ‘ಇಷ್ಟು ಉತ್ತಮ ರೀತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಯಾವುದೇ ಮುಖ್ಯಮಂತ್ರಿ ಉತ್ತರ ನೀಡಿರಲಿಲ್ಲ’ ಎಂದು ಹೇಳಿದರು.

ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ವಿರೋಧ ಪಕ್ಷವನ್ನು ಎದುರಿಸಿದ ಅವರು, ಬೀಡು ಬೀಸಾಗಿ ವಿರೋಧಿ ಪಕ್ಷಗಳ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ಕೆಲವೊಮ್ಮೆ ಹಾಸ್ಯ, ಇನ್ನೂ ಕೆಲವೊಮ್ಮೆ ಲೇವಡಿ, ತೀಕ್ಷ್ಣ ಉತ್ತರಗಳ ಮೂಲಕ ವಿರೋಧಿ ಸದಸ್ಯರನ್ನು ಕಾಡಿದರು. ಇದರಿಂದಾಗಿ ಕಾಂಗ್ರೆಸ್‌ ಸದಸ್ಯರಿಂದ ಪದೇ ಪದೇ ಪ್ರತಿರೋಧ ಎದುರಿಸಬೇಕಾಯಿತು.

ಮುಖ್ಯಮಂತ್ರಿಯವರ ಭಾಷಣಕ್ಕೆ ಆಡಳಿತ ಪಕ್ಷದ ಶಾಸಕರು ಮೇಜು ಕುಟ್ಟಿ ಸ್ವಾಗತಿಸಿದರು. ಮೋದಿಯವರ ಸಾಧನೆಯನ್ನು ಪದೇ ಪದೇ ಉಲ್ಲೇಖಿಸಿದರು. ‘ಮೋದಿ ಸಮ ನಿಲ್ಲ ಬಲ್ಲ ಒಬ್ಬ ನಾಯಕರ ನಿಮ್ಮಲ್ಲಿ ಇದ್ದರೆ ತೋರಿಸಿ’ ಎಂದು ಬೊಮ್ಮಾಯಿ ಹೇಳಿದ್ದು, ಕಾಂಗ್ರೆಸ್‌ ಸದಸ್ಯರನ್ನು ಕೆರಳಿಸಿತು.

ಬೊಮ್ಮಾಯಿಯವರ ಮಾತಿನ ವರಸೆಯನ್ನು ಯಡಿಯೂರಪ್ಪ ನಗುತ್ತಾ ಆಸ್ವಾದಿಸಿದರು. ಇದನ್ನು ನೋಡಿದ ಸಿದ್ದರಾಮಯ್ಯ, ‘ಯಡಿಯೂರಪ್ಪ ನಗುತ್ತಿದ್ದಾರೆ. ಅವರು ನಗುವುದೇ ಅಪರೂಪ. ಬೊಮ್ಮಾಯಿ ಉತ್ತರ ಕೇಳಿ ಅವರಿಗೆ ನಗು ಬರುತ್ತಿರಬೇಕು’ ಎಂದು ಕಾಲೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ಸಾಮಾನ್ಯವಾಗಿ ನಾನು ಮಾತನಾಡಲ್ಲ. ಇತ್ತೀಚಿನ ವರ್ಷಗಳಲ್ಲಿ ಮುಖ್ಯಮಂತ್ರಿಯೊಬ್ಬರು ಇಷ್ಟು ಚೆನ್ನಾಗಿ ಮಾತನಾಡಿದ್ದು ನಾನು ಕೇಳಿಲ್ಲ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.