ADVERTISEMENT

ಇಬ್ರಾಹಿಂ ಮಾತುಗಳನ್ನು ಮುಂದಿಟ್ಟು ಕಾಂಗ್ರೆಸ್‌ನ ಬದ್ಧತೆ ಪ್ರಶ್ನಿಸಿದ ಬಿಜೆಪಿ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಅಕ್ಟೋಬರ್ 2021, 7:43 IST
Last Updated 12 ಅಕ್ಟೋಬರ್ 2021, 7:43 IST
   

ಬೆಂಗಳೂರು: ಅಲ್ಪಸಂಖ್ಯಾತರನ್ನು ಕಾಂಗ್ರೆಸ್‌ ಮತಬ್ಯಾಂಕ್‌ಗಷ್ಟೇ ಸೀಮಿತಗೊಳಿಸಿದೆ ಎಂದು ಆರೋಪಿಸಿರುವ ರಾಜ್ಯ ಬಿಜೆಪಿ, ಅದಕ್ಕೆ ವಿಧಾನ ಪರಿಷತ್‌ ಸದಸ್ಯ ಸಿ.ಎಂ ಇಬ್ರಾಹಿಂ ಅವರ ಹೇಳಿಕೆಯನ್ನು ಉದಾಹರಣೆಯಾಗಿ ನೀಡಿದೆ.

‘ಸೋತ ಪರಮೇಶ್ವರ್ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ, ಉಪ ಮುಖ್ಯಮಂತ್ರಿ ಮಾಡಲಾಗುತ್ತದೆ. ಆದರೆ, ಯಾವುದೇ ಮುಸ್ಲಿಮರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿಲ್ಲ, ಡಿಸಿಎಂ ಮಾಡಿಲ್ಲ. ಕಾಂಗ್ರೆಸ್‌ನಲ್ಲಿ ಈಗ ನಾಯಕರೆಂದು ಇರುವವರು ಡಿ.ಕೆ ಶಿವಕುಮಾರ್‌, ಸಿದ್ದರಾಮಯ್ಯ, ಖರ್ಗೆ ಮಾತ್ರ. ಅಲ್ಪಸಂಖ್ಯಾತರು ಯಾರೂ ಇಲ್ಲವೇ?’ ಎಂದು ಸಿಎಂ ಇಬ್ರಾಹಿಂ ಅವರು ಕಾಂಗ್ರೆಸ್‌ ಅನ್ನು ಪ್ರಶ್ನೆ ಮಾಡುತ್ತಿರುವ ವಿಡಿಯೊವನ್ನು ಸಾಮಾಜಿಕ ತಾಣಗಳಲ್ಲಿ ಬಿಜೆಪಿ ಹಂಚಿಕೊಂಡಿದೆ.

ಇಬ್ರಾಹಿಂ ಅವರ ಟೀಕೆಯ ವಿಡಿಯೊಗಳ ಮೂಲಕ ಕಾಂಗ್ರೆಸ್‌ ಅನ್ನು ಹಣಿದಿರುವ ಬಿಜೆಪಿ ಹಲವು ಪ್ರಶ್ನೆಗಳನ್ನೂ ಹಾಕಿದೆ. ’ದಶಕಗಳಿಂದ ಅಲ್ಪಸಂಖ್ಯಾತರ ಮುಂಗೈಗೆ ಬೆಲ್ಲ ಸವರುತ್ತಲೇ ಬಂದ ಕಾಂಗ್ರೆಸ್ಸಿಗರೇ, ಸಿ.ಎಂ.ಇಬ್ರಾಹಿಂ ಅವರ ಈ ಪ್ರಶ್ನೆಗೆ ನಿಮ್ಮ ಉತ್ತರವೇನು?’ ಎಂದು ಕೇಳಿದೆ.

ADVERTISEMENT

‘ಕಾಂಗ್ರೆಸ್‌ ಪಕ್ಷ ಅಲ್ಪಸಂಖ್ಯಾತರ ಮೇಲೆ ಹೊಂದಿರುವ ಪ್ರೀತಿಯ ನಿಜಬಣ್ಣವನ್ನು ಇಬ್ರಾಹಿಂ ಬೆತ್ತಲಾಗಿಸಿದ್ದಾರೆ. ಅಲ್ಪಸಂಖ್ಯಾತರನ್ನು ಮತಬ್ಯಾಂಕ್‌ಗಷ್ಟೇ ಸೀಮಿತಗೊಳಿಸಿದ ಕಾಂಗ್ರೆಸ್‌ ಪಕ್ಷಕ್ಕೆ, ಕಾಂಗ್ರೆಸ್‌ ನಾಯಕ ಸಿ. ಎಂ. ಇಬ್ರಾಹಿಂ ಅವರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವೆ?’ ಎಂದಿದೆ.

ಗಾಜಿನ ಮನೆಯಲ್ಲಿ ಕುಳಿತಿರುವ ಕಾಂಗ್ರೆಸ್ಸಿಗರು ಇಬ್ರಾಹಿಂ ಅವರ ಪ್ರಶ್ನೆಗೆ ಮೊದಲು ಉತ್ತರ ನೀಡುವರೇ? - ಸೋತ ಸಿದ್ದರಾಮಯ್ಯ ವಿಪಕ್ಷ ನಾಯಕ,ಸೋತ ಪರಮೇಶ್ವರ ಸಚಿವ,ಸೋತ ಖರ್ಗೆಗೆ ರಾಜ್ಯಸಭಾ ಸ್ಥಾನ ಆದರೆ ಮುಸ್ಲಿಮರಿಗೆ ಏನು? ನೆರೆಮನೆಯ ದುಃಖಕ್ಕೆ ಅಳುವವರನ್ನು ಜಗತ್ತು ಮೆಚ್ಚುವುದೇ? ಎಂದು ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.