ADVERTISEMENT

ಮೋದಿ ಸುಳ್ಳುಗಳನ್ನೇ ಇಲ್ಲಿ ಬಾಯಿಪಾಠ ಒಪ್ಪಿಸುತ್ತಿರುವ ಬಿಜೆಪಿ: ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಸೆಪ್ಟೆಂಬರ್ 2021, 14:53 IST
Last Updated 20 ಸೆಪ್ಟೆಂಬರ್ 2021, 14:53 IST
ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸೈಕಲ್ ಜಾಥಾದಲ್ಲಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ – ಪ್ರಜಾವಾಣಿ ಚಿತ್ರ
ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸೈಕಲ್ ಜಾಥಾದಲ್ಲಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ – ಪ್ರಜಾವಾಣಿ ಚಿತ್ರ   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಹೇಳುವ ಸುಳ್ಳುಗಳನ್ನೇ ರಾಜ್ಯ ಬಿಜೆಪಿ ಸರ್ಕಾರ ಇಲ್ಲಿ ಬಾಯಿಪಾಠ ಒಪ್ಪಿಸುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಬೆಲೆ ಏರಿಕೆ ವಿಚಾರವಾಗಿ ಅವರು ಸರಣಿ ಟ್ವೀಟ್‌ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಬೆಲೆ ನಿಯಂತ್ರಣ ಮಾಡಲಾಗದ ವೈಫಲ್ಯವನ್ನು ಮುಚ್ಚಿಹಾಕಲು ಸುಳ್ಳು ಲೆಕ್ಕದ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ರಾಜ್ಯದ ಬಿಜೆಪಿ ಸರ್ಕಾರ ಕೂಡ ಮೋದಿಯವರ ಸುಳ್ಳುಗಳನ್ನೇ ಇಲ್ಲಿ ಬಾಯಿಪಾಠ ಒಪ್ಪಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 120 ಡಾಲರ್‌ ಗಿಂತ ಹೆಚ್ಚಿದ್ದರೂ ದೇಶದಲ್ಲಿ ಡೀಸೆಲ್ ಬೆಲೆ ₹47, ಪೆಟ್ರೋಲ್ ಬೆಲೆ ₹75ರ ಗಡಿಯೊಳಗೆ ಇತ್ತು, ಹಾಗಾಗಿ ಅಗತ್ಯ ವಸ್ತುಗಳ ಬೆಲೆ ಕಡಿಮೆಯಿತ್ತು. 2014ರಿಂದ ಈ ವರೆಗೆ ಕಚ್ಚಾತೈಲ ದರ ಸುಮಾರು 50 ಡಾಲರ್ ಆಸುಪಾಸಿನಲ್ಲಿದ್ದರೂ ಇದರ ಲಾಭ ಗ್ರಾಹಕರಿಗೆ ಸಿಗಲಿಲ್ಲ. ಕೇಂದ್ರದ ಬಿಜೆಪಿ ಸರ್ಕಾರ ಅಬಕಾರಿ ಸುಂಕ ಏರಿಕೆ ಮಾಡಿದ್ದ ಕಾರಣ ಪೆಟ್ರೋಲಿಯಂ ಉತ್ಪನ್ನಗಳ ಜೊತೆ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಡೀಸೆಲ್ ಮೇಲೆ ₹3.45 ಹಾಗೂ ಪೆಟ್ರೋಲ್ ಮೇಲೆ ₹9.20 ಅಬಕಾರಿ ಸುಂಕ ಇತ್ತು. ಮೋದಿ ಆಡಳಿತದಲ್ಲಿ ಅಬಕಾರಿ ಸುಂಕ ಡೀಸೆಲ್ ಮೇಲೆ ₹31.84 ಹಾಗೂ ಪೆಟ್ರೋಲ್ ಮೇಲೆ ₹32.98 ಆಗಿದೆ. ಇದರಲ್ಲಿ ಶೇ 50 ಕಡಿಮೆ ಮಾಡಲಿ’ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಮೋದಿ ಸರ್ಕಾರ ಡೀಸೆಲ್, ಪೆಟ್ರೋಲ್ ಅಬಕಾರಿ ಸುಂಕದ ಮೂಲಕ ₹23 ಲಕ್ಷ ಕೋಟಿ ಸಂಗ್ರಹಿಸಿದೆ. 2020-21ರಲ್ಲಿ ಸಂಗ್ರಹಿಸಿದ ಅಬಕಾರಿ ಸುಂಕ ₹3.35 ಲಕ್ಷ ಕೋಟಿ. ಕಳೆದ ಏಳು ವರ್ಷಗಳಲ್ಲಿ ಕರ್ನಾಟಕದಿಂದ ₹1.20 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ ಎಂದು ಟ್ವೀಟ್‌ನಲ್ಲಿ ಅವರು ಉಲ್ಲೇಖಿಸಿದ್ದಾರೆ.

ಪೆಟ್ರೋಲ್ ಬೆಲೆಏರಿಕೆಗೆ ತೈಲ ಬಾಂಡ್ ಕಾರಣ ಎನ್ನುವುದು ಶುದ್ದ ಸುಳ್ಳು. 2006 ರಿಂದ 2010 ರವರೆಗೆ ಖರೀದಿಸಿದ್ದು ₹1.40 ಲಕ್ಷ ಕೋಟಿ ಮೌಲ್ಯದ ತೈಲಬಾಂಡ್. ಮನಮೋಹನ್ ಸಿಂಗ್ ಸರ್ಕಾರ ₹5,762 ಕೋಟಿ ತೈಲಬಾಂಡ್ ಮರುಪಾವತಿಸಿತ್ತು. ಮೋದಿ ಸರ್ಕಾರ ₹30,923 ಕೋಟಿ ಬೆಲೆಯ ತೈಲ ಬಾಂಡ್‌ಗಳನ್ನಷ್ಟೇ ಮರುಪಾವತಿಸಬೇಕಾಗಿದೆ. ಬಿಜೆಪಿ ಸರ್ಕಾರ ಒಂದೇ ವರ್ಷದಲ್ಲಿ ಸಂಗ್ರಹಿಸಿರುವ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕದಲ್ಲಿ ಒಟ್ಟು ಸಾಲವೇ ತೀರಿಹೋಗುತ್ತದೆ. ಹಾಗಾಗಿ ತೆರಿಗೆಯನ್ನು ಶೇ 50 ಕಡಿತಗೊಳಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯಲ್ಲಿ ₹3 ಕಡಿಮೆ ಮಾಡಿದ್ದಾರೆ. ರಾಜ್ಯ ಸರ್ಕಾರ ಯಾಕೆ ತೆರಿಗೆ ಕಡಿತಗೊಳಿಸಬಾರದು? ಆಗ ಪೆಟ್ರೋಲ್, ಡೀಸೆಲ್ ಬೆಲೆ ಇಳಿಯುವ ಜೊತೆಗೆ ಅಗತ್ಯ ವಸ್ತುಗಳ ಬೆಲೆಯೂ ಇಳಿಯುತ್ತದೆ ಎಂದು ಅವರು ಹೇಳಿದ್ದಾರೆ.

ಜಿಎಸ್‌ಟಿ ಬಂದಮೇಲೆ ರಾಜ್ಯಗಳಿಗಿದ್ದ ತೆರಿಗೆ ಸಂಗ್ರಹದ ಅವಕಾಶ ಇಲ್ಲದಂತಾಗಿ ಆದಾಯ ಇಳಿಮುಖವಾಗಿದೆ. ಈ ಕೊರತೆ ನೀಗಿಸಲು ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಹಾರ ನೀಡಬೇಕಾಗಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈ ಪರಿಹಾರವನ್ನೂ ಕೊಡದೆ ನೀವೇ ಸಾಲ ತಗೊಳ್ಳಿ ಎಂದು ಹೇಳುತ್ತಿರುವುದು ಯಾವ ನ್ಯಾಯ? 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ, ರಾಜ್ಯದ ಪಾಲನ್ನು ಶೇ 4.71 ರಿಂದ ಶೇ 3.64ಗೆ ಇಳಿಸಲಾಗಿದೆ. ಹಿಂದೆ ರಾಜ್ಯದ ಪಾಲು, ವಿಶೇಷ ಅನುದಾನ ಸೇರಿ ಒಟ್ಟು ₹80,000 ಕೋಟಿ ರಾಜ್ಯಕ್ಕೆ ಬರುತ್ತಿತ್ತು, ಆದರೆ ಈಗ ₹38,000 ಮಾತ್ರ ಬರುತ್ತಿದೆ. ಇದಕ್ಕೆ ಯಾರು ಹೊಣೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

15ನೇ ಹಣಕಾಸು ಆಯೋಗ ರಾಜ್ಯಕ್ಕೆ ಶಿಫಾರಸು ಮಾಡಿದ್ದ ₹5,495 ವಿಶೇಷ ಅನುದಾನವನ್ನು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರಸ್ಕರಿಸಿದರು. ಅದನ್ನು ಕೇಳುವ ಧೈರ್ಯ ಪುಕ್ಕಲು ಬಿಜೆಪಿ ಸರ್ಕಾರಕ್ಕೆ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡುತ್ತಾರೆ ಎಂಬ ನಿರೀಕ್ಷೆ ಇಲ್ಲ. ಭಂಡ ಸರ್ಕಾರ ಇದು. ಇವತ್ತು ಆಟೋ ಚಾಲಕರು, ಕ್ಯಾಬ್ ಚಾಲಕರು, ಟ್ರ್ಯಾಕ್ಟರ್ ಇರುವ ರೈತರು, ಬಸ್ ಮಾಲೀಕರು, ಲಾರಿ ಮಾಲೀಕರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಗೋಳನ್ನಾಗಲೀ, ವಿರೋಧ ಪಕ್ಷಗಳ ಹೋರಾಟವನ್ನಾಗಲೀ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಗಣನೆಗೆ ತೆಗೆದುಕೊಳ್ಳದಷ್ಟು ಭಂಡತನವನ್ನು ಬೆಳೆಸಿಕೊಂಡಿದೆ. ಮಾಧ್ಯಮಗಳು ಜನರ ಬವಣೆಗೆ ದನಿಯಾದರೆ ಸರ್ಕಾರಗಳು ಎಚ್ಚೆತ್ತುಕೊಳ್ಳಬಹುದೇನೋ? ಎಂದು ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.