ADVERTISEMENT

ಪೆಟ್ರೋಲ್, ಡೀಸೆಲ್ ಎಕ್ಸೈಸ್‌ ಸುಂಕ ಕಡಿತ: ನಿರೀಕ್ಷೆ ಹುಸಿ ಎಂದ ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಮೇ 2022, 1:51 IST
Last Updated 22 ಮೇ 2022, 1:51 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ಎಕ್ಸೈಸ್‌ ಸುಂಕ ಇಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಆದರೆ ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಮೊದಲಿದ್ದ ಎಕ್ಸೈಸ್‌ ಸುಂಕಕ್ಕೆ ಸಮನಾಗಿ ಕಡಿತ ಮಾಡಬಹುದು ಎಂಬ ನನ್ನ ನಿರೀಕ್ಷೆ ಹುಸಿಯಾಗಿದೆ’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಎಕ್ಸೈಸ್‌ ಸುಂಕ ಇಳಿಕೆ ನಿರ್ಧಾರದ ಕುರಿತು ಟ್ವೀಟ್ ಮಾಡಿರುವ ಅವರು, ‘ಯುಪಿಎ ಸರ್ಕಾರದ ಕೊನೆ ಅವಧಿಯಲ್ಲಿ (2014ರ ಆರಂಭದಲ್ಲಿ) ಡೀಸೆಲ್ ಮೇಲೆ ₹3.45 ಹಾಗೂ ಪೆಟ್ರೋಲ್ ಮೇಲೆ ₹9.20 ಎಕ್ಸೈಸ್‌ ಸುಂಕ ಇತ್ತು. ಮೋದಿ ಅವರು ಪ್ರಧಾನಿಯಾದ ಮೇಲೆ ಡೀಸೆಲ್ ಮೇಲೆ ₹31.84 ಹಾಗೂ ಪೆಟ್ರೋಲ್ ಮೇಲೆ ₹32.98 ಗೆ ತೆರಿಗೆ ಏರಿಸಲಾಗಿತ್ತು’ ಎಂದು ಉಲ್ಲೇಖಿಸಿದ್ದಾರೆ.

‘ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಒಂದರಲ್ಲೇ ಕಳೆದ ಎಂಟು ವರ್ಷಗಳಲ್ಲಿ ಕೇಂದ್ರ ಸರ್ಕಾರ ₹23 ಲಕ್ಷ ಕೋಟಿ ಸಂಗ್ರಹಿಸಿದೆ. ಕೊರೊನಾ ಆರ್ಭಟದ ನಂತರ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಜನ ಸಾಮಾನ್ಯರಿಗೆ ಈ ತೆರಿಗೆ ಕಡಿತ ಕೊಂಚ ನಿರಾಳತೆ ಉಂಟುಮಾಡಿದೆ, ಪೂರ್ಣ ಪ್ರಮಾಣದ್ದಲ್ಲ’ ಎಂದು ಅವರು ಉಲ್ಲೇಖಿಸಿದ್ದಾರೆ.

ಹಣದುಬ್ಬರ ನಿಯಂತ್ರಿಸಲು ಮತ್ತು ಅಗತ್ಯ ವಸ್ತುಗಳ ದರ ಏರಿಕೆ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕವನ್ನು ಶನಿವಾರ ಪ್ರತಿ ಲೀಟರಿಗೆ ಕ್ರಮವಾಗಿ ₹8 ಮತ್ತು ₹6 ಕಡಿತ ಮಾಡಿತ್ತು. ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ ₹ 200 ಸಬ್ಸಿಡಿಯನ್ನು ನೀಡಲಾಗುವುದು ಎಂದು ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.