ADVERTISEMENT

ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಟಿಕೆಟ್‌ಗೆ 28 ಅರ್ಜಿ ಸಲ್ಲಿಕೆ

ಕುಮಟಾ ಕ್ಷೇತ್ರದಲ್ಲಿ ಸ್ಪರ್ಧೆಗೆ 14 ಆಕಾಂಕ್ಷಿಗಳ ಬಯಕೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 15:24 IST
Last Updated 22 ನವೆಂಬರ್ 2022, 15:24 IST
   

ಕಾರವಾರ: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಸಿದ್ಧತೆಯನ್ನು ಚುರುಕುಗೊಳಿಸಿದ್ದು, ಜಿಲ್ಲೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. ಜಿಲ್ಲೆಯಿಂದ ಒಟ್ಟು 28 ಅರ್ಜಿಗಳು ಸಲ್ಲಿಕೆಯಾಗಿದ್ದು, ಕುಮಟಾ ಮತ್ತು ಭಟ್ಕಳ ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್ ಪಡೆಯಲು ತೀವ್ರ ಪೈಪೋಟಿ ಎದುರಾಗಿದೆ.

ಕುಮಟಾ– ಹೊನ್ನಾವರ ಕ್ಷೇತ್ರದಿಂದ ಸ್ಪರ್ಧಿಸಲು ಒಟ್ಟು 14 ಆಕಾಂಕ್ಷಿಗಳು ಕೆ.ಪಿ.ಸಿ.ಸಿ.ಗೆ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಶಾಸಕಿ ಶಾರದಾ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಶಿವಾನಂದ ಹೆಗಡೆ ಕಡತೋಕಾ, ರತ್ನಾಕರ ನಾಯ್ಕ, ಪ್ರಮುಖರಾದ ಸಾಯಿ ಗಾಂವ್ಕರ್, ಭಾಸ್ಕರ ಪಟಗಾರ, ಹೊನ್ನಪ್ಪ ನಾಯ್ಕ, ಆರ್.ಎಚ್.ನಾಯ್ಕ, ರವಿಶೆಟ್ಟಿ ಕವಲಕ್ಕಿ, ಕೃಷ್ಣ ಗೌಡ, ಭುವನ್ ಭಾಗ್ವತ್, ಪ್ರದೀಪ ನಾಯಕ, ಗಾಯತ್ರಿ ಗೌಡ, ಮಂಜುನಾಥ ನಾಯ್ಕ, ಯಶೋಧರ ನಾಯ್ಕ ಸ್ಪರ್ಧಿಸಲು ಬಯಸಿದ್ದಾರೆ.

ಭಟ್ಕಳ– ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಏಳು ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಶಾಸಕ ಮಂಕಾಳ ವೈದ್ಯ, ಜೆ.ಡಿ.ನಾಯ್ಕ, ಆರ್.ಎನ್.ನಾಯ್ಕ, ಸಂತೋಷ ನಾಯ್ಕ, ದೀಪಕ್ ನಾಯ್ಕ, ಅಯ್ಯಪ್ಪ ನಾಯ್ಕ, ಶ್ರೀಧರ ನಾಯ್ಕ ಬೇಡಿಕೆ ಮಂಡಿಸಿರುವ ಪ್ರಮುಖರು.

ADVERTISEMENT

ಶಿರಸಿ ಕ್ಷೇತ್ರದಿಂದ ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ, ಶ್ರೀಪಾದ ಹೆಗಡೆ ಹಾಗೂ ವಸಂತ ನಾಯ್ಕ, ಕಾರವಾರ ಕ್ಷೇತ್ರದಿಂದ ಮಾಜಿ ಶಾಸಕ ಸತೀಶ ಸೈಲ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಚೈತ್ರಾ ಕೊಠಾರಕರ್ ಸ್ಪರ್ಧಿಸಲು ಬಯಸಿದ್ದಾರೆ.

ಉಳಿದಂತೆ, ಹಳಿಯಾಳದಿಂದ ಶಾಸಕ ಆರ್.ವಿ.ದೇಶಪಾಂಡೆ ಮತ್ತು ಯಲ್ಲಾಪುರದಿಂದ ಲಕ್ಷ್ಮಣ ಬನ್ಸೋಡೆ ಮಾತ್ರ ಕಾಂಗ್ರೆಸ್ ಪಕ್ಷದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.

ಸಮಾವೇಶ ನ.24ಕ್ಕೆ:

ಕುಮಟಾ: ಪಟ್ಟಣದ ಮಹಾತ್ಮ ಗಾಂಧಿ ಮೈದಾನದಲ್ಲಿ ನ. 24ರಂದು ಬೆಳಿಗ್ಗೆ 11ಕ್ಕೆ ನಡೆಯುವ ರಾಜ್ಯಮಟ್ಟದ ಕಾಂಗ್ರೆಸ್ ಸಮಾವೇಶದಲ್ಲಿ ಕರಾವಳಿ ಕರ್ನಾಟಕ ಭಾಗದ ಸುಮಾರು 1,500 ಬೂತ್‌ಗಳಿಂದ 50 ಸಾವಿರಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮುಖಂಡ ಐವನ್ ಡಿಸೋಜ ಹೇಳಿದರು.

ಸಮಾವೇಶದ ತಯಾರಿ ಕುರಿತು ಮಾತನಾಡಿದ ಅವರು, ‘ಸಮಾವೇಶದಲ್ಲಿ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ, ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜಿಲ್ಲೆಯ ಮಾಜಿ ಸಚಿವ ಆರ್.ವಿ. ದೇಶಪಾಂಡೆ, 25ಕ್ಕೂ ಹೆಚ್ಚು ಮಾಜಿ ಸಚಿವರು, 20 ವಿಧಾನ ಪರಿಷತ್ ಸದಸ್ಯರು, 25ಕ್ಕೂ ಹೆಚ್ಚು ಶಾಸಕರು ಪಾಲ್ಗೊಳ್ಳಲಿದ್ದಾರೆ. ಸಮಾವೇಶಕ್ಕೆ ಬರುವ ಕಾರ್ಯಕರ್ತರಿಗೆ ಹಾಗೂ ಇತರರಿಗೆ ಊಟ, ನೀರು, ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.

‘ಐದು ವರ್ಷಗಳ ಹಿಂದೆ ಪರೇಶ ಮೇಸ್ತ ಸಾವಿನ ಪ್ರಕರಣವನ್ನು ಜನರಿಗೆ ಅಪಪ್ರಚಾರ ಮಾಡಿ ರಾಜ್ಯದ ಕರಾವಳಿಯ ತಮ್ಮ ಪಕ್ಷದ ಹೆಚ್ಚಿನ ಶಾಸಕರು ಗೆಲ್ಲುವಂತೆ ಬಿ.ಜೆ.ಪಿ ತಂತ್ರ ರೂಪಿಸಿತ್ತು. ಈ ಸಮಾವೇಶದ ಮೂಲಕ ಕಾಂಗ್ರೆಸ್ ಪರೇಶ ಮೇಸ್ತ ಸಾವಿನ ಸತ್ಯವನ್ನು ಜನತೆಯ ಮುಂದೆ ಬಿಚ್ಚಿಡುತ್ತಿದ್ದು, ಇದರಿಂದ ಬಿಜೆಪಿಯ ಬಣ್ಣ ಬಯಲಾಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್. ನಾಯ್ಕ, ಮುಖಂಡರಾದ ಮಂಜುನಾಥ ನಾಯ್ಕ, ಹೊನ್ನಪ್ಪ ನಾಯಕ, ಮೋಹಿನಿ ಗೌಡ, ಮಧುಸೂದನ್ ಶೇಟ್, ರವಿಕುಮಾರ ಶೆಟ್ಟಿ, ಭುವನ ಭಾಗ್ವತ, ಆರ್.ಎಚ್. ನಾಯ್ಕ, ಅನಿತಾ ಮಾಫಾರಿ, ಮೋಹಿನಿ ವಾರೇಕರ್, ಸಚಿನ್ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.