ADVERTISEMENT

ಮುಂದಿನ ವಾರ ಪ್ರವಾಸೋದ್ಯಮ ತಾಣಗಳು ಸಾರ್ವಜನಿಕರಿಗೆ ಮುಕ್ತ: ಸಿ.ಪಿ.ಯೋಗೇಶ್ವರ್‌

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 11:18 IST
Last Updated 25 ಜೂನ್ 2021, 11:18 IST
ಸಚಿವ ಸಿ.ಪಿ.ಯೋಗೇಶ್ವರ್‌
ಸಚಿವ ಸಿ.ಪಿ.ಯೋಗೇಶ್ವರ್‌   

ಬೆಂಗಳೂರು: ಕೋವಿಡ್‌ ಲಾಕ್‌ಡೌನ್‌ನಿಂದ ಮುಚ್ಚಿರುವ ಪ್ರವಾಸೋದ್ಯಮ ತಾಣಗಳನ್ನು ಮುಂದಿನ ವಾರದಿಂದ ಸಾರ್ವಜನಿಕರಿಗಾಗಿ ತೆರೆಯಲಾಗುವುದು ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಸಚಿವಸಿ.ಪಿ.ಯೋಗೇಶ್ವರ್‌ ಹೇಳಿದರು.

ಖನಿಜ ಭವನದಲ್ಲಿ ಶುಕ್ರವಾರ ನಡೆದ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಜೋಗ ಜಲಪಾತದಲ್ಲಿ ₹ 185 ಕೋಟಿ ವೆಚ್ಚದಲ್ಲಿ ಪ್ರವಾಸಿ ಸೌಲಭ್ಯಗಳನ್ನು ಕಲ್ಪಿಸಲು ಟೆಂಡರ್‌ ಅಂತಿಮವಾಗಿದ್ದು, ಆದಷ್ಟು ಬೇಗ ಕಾಮಗಾರಿ ಆರಂಭವಾಗಲಿದೆ. ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ ಸಂಸ್ಥೆಯಿಂದ ಈ ಬೃಹತ್‌ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಕೇರಳ ಹಾಗೂ ಗೋವಾ ರಾಜ್ಯಗಳಿಂದ ಜೋಗ ಜಲಪಾತಕ್ಕೆ 35 ಕಿ.ಮೀ ಉದ್ದದ ಜಲಮಾರ್ಗದಲ್ಲಿ ಪ್ರವಾಸಿಗರು ಬರಲು ವ್ಯವಸ್ಥೆ ಮಾಡಲು ರೂಪಿಸಲಾಗಿದೆ. ಸರ್ಕಾರಿ ರಜಾ ದಿನಗಳಂದು ಲಿಂಗನಮಕ್ಕಿ ಜಲಾಶಯದಿಂದ ಪ್ರಥಮ ಹಂತವಾಗಿ 200 ಕ್ಯೂಸೆಕ್‌ ನೀರನ್ನು ಹರಿಸಿ ಜೋಗದ ಸೊಬಗನ್ನು ಪ್ರವಾಸಿಗರಿಗೆ ಉಣಿಸಲಾಗುವುದು. ಮುಂದಿನ ದಿನಗಳಲ್ಲಿ ನೀರಿನ ಪ್ರಮಾಣವನ್ನು 300 ಕ್ಯೂಸೆಕ್ಸ್‌ಗೆ ಹೆಚ್ಚಿಸಲು ನಿರ್ಧಾರಿಸಲಾಗಿದೆ ಎಂದರು.

ಪ್ರವಾಸಿಗರ ವಾಸ್ತವ್ಯ ಮಾಡಲು ಎರಡು ಹೋಟೆಲ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.ರಾಜ್ಯದ ಪತ್ರಿಷ್ಠಿತ ಯೋಜನೆಯಾಗಿರುವ ಹೆಲಿ ಟೂರಿಸಂ ಸರ್ಕೀಟ್‌ಗೆ ಜೋಗ ಜಲಪಾತವನ್ನು ಸೇರ್ಪಡೆ ಮಾಡಲಾಗಿದೆ. ಒಟ್ಟಾರೆ ವರ್ಷದ 365 ದಿನಗಳು ಜೋಗದ ಸೊಬಗನ್ನು ರಾಜ್ಯ, ಹೊರ ರಾಜ್ಯಗಳು ಹಾಗೂ ದೇಶ ವಿದೇಶಗಳ ಪ್ರವಾಸಿಗರ ಕಣ್ತುಂಬಿಕೊಳ್ಳಬಹುದು ಎಂದು ಯೋಗೇಶ್ವರ್‌ ಹೇಳಿದರು.

**

* ಜೋಗ ಜಲಪಾತಕ್ಕೆ ಕೇರಳ ಹಾಗೂ ಗೋವಾದಿಂದ ಆಗಮಿಸುವ ಪ್ರವಾಸಿಗರಿಗೆ ಸ್ಪೀಡ್ ಬೋಟ್ ಸೌಕರ್ಯ
* ವರ್ಷದ 365 ದಿನವು ಜೋಗ್ ಮೈದುಂಬಿ ಹರಿಯಲು ಲಿಂಗನಮಕ್ಕಿ ಜಲಾಶಯದಿಂದ 200 ಕ್ಯೂಸೆಕ್ಸ್ ನೀರು ಬಿಡುಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.