ADVERTISEMENT

ಕಲ್ಯಾಣ ಮಂಟಪಗಳಿಗೆ ಮತ್ತೆ ಕಳೆ: ಸಡಗರಕ್ಕೆ ಸಿದ್ಧವಾಗುತ್ತಿರುವ ಪಾರ್ಟಿ ಹಾಲ್‌ಗಳು

ಕೆಲಸ ಸಿಗುವ ನಿರೀಕ್ಷೆಯಲ್ಲಿ ಸಾವಿರಾರು ಮಂದಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 19:31 IST
Last Updated 31 ಆಗಸ್ಟ್ 2021, 19:31 IST
ಬೆಂಗಳೂರಿನ ಸ್ವಾತಂತ್ರ್ಯಯೋಧರ ನಗರದಲ್ಲಿರುವ ಮಂಜುಶ್ರೀ ಕಲ್ಯಾಣಮಂಟಪವು ಮದುವೆ ಸಮಾರಂಭಕ್ಕೆ ಸಿದ್ಧವಾಗಿರುವುದು -– ಪ್ರಜಾವಾಣಿ ಚಿತ್ರ
ಬೆಂಗಳೂರಿನ ಸ್ವಾತಂತ್ರ್ಯಯೋಧರ ನಗರದಲ್ಲಿರುವ ಮಂಜುಶ್ರೀ ಕಲ್ಯಾಣಮಂಟಪವು ಮದುವೆ ಸಮಾರಂಭಕ್ಕೆ ಸಿದ್ಧವಾಗಿರುವುದು -– ಪ್ರಜಾವಾಣಿ ಚಿತ್ರ   

ಬೆಂಗಳೂರು: ವಿವಾಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯನ್ನು 400ಕ್ಕೆ ಏರಿಸಿರುವುದು ಮತ್ತು ಪುನರಾರಂಭಕ್ಕೆ ಸರ್ಕಾರದಿಂದ ಸ್ಪಷ್ಟ ನಿರ್ದೇಶನ ಹೊರಬಿದ್ದಿರುವುದರಿಂದ ಕಲ್ಯಾಣಮಂಟಪಗಳು ಮತ್ತೆ ಕಳೆಗಟ್ಟತೊಡಗಿವೆ. ವಿವಾಹ ಕಾರ್ಯಕ್ರಮಗಳನ್ನು ಅವಲಂಬಿಸಿರುವ ಸುಮಾರು ಲಕ್ಷಾಂತರ ಜನರ ಮೊಗದಲ್ಲಿಯೂ ಮಂದಹಾಸ ಕಾಣಿಸಲಿದೆ.

ಕೋವಿಡ್‌ ಬಿಕ್ಕಟ್ಟಿನ ಕಾರಣ, ಒಂದು ಮದುವೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಮೊದಲು 50ಕ್ಕೆ, ನಂತರ 100ಕ್ಕೆ ಮಿತಿಗೊಳಿಸಲಾಗಿತ್ತು. ಈಗ 400 ಜನ ಅಥವಾ ಸಭಾಂಗಣ ಸಾಮರ್ಥ್ಯದ ಶೇ 50ರಷ್ಟು ಜನರ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡಲಾಗಿದೆ.

ಪ‍ರೋಕ್ಷವಾಗಿ ರೈತರು ಅಂದರೆ, ಹೂವು–ದಿನಸಿ–ತರಕಾರಿ ಮಾರುವವರು ವ್ಯಾಪಾರ ಚುರುಕುಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಜೊತೆಗೆ, ಪುರೋಹಿತರು, ಕಾರ್ಯಕ್ರಮ ಆಯೋಜಕರು, ಪೀಠೋಪಕರಣ ಸರಬರಾಜುದಾರರು, ಕಲ್ಯಾಣ ಮಂಟಪ ಅಲಂಕಾರ ಮಾಡುವವರು ಹಾಗೂ ಪಾರ್ಟಿ ಹಾಲ್‌ಗಳ ಮಾಲೀಕರ ನಿರೀಕ್ಷೆಯೂ ಗರಿಗೆದರಿದೆ.

ADVERTISEMENT

ನಿಯಮ ಪಾಲನೆ: ‘ಕೋವಿಡ್ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆ, ಮದುವೆಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿರುವಂತೆ ನೋಡಿಕೊಳ್ಳಬೇಕು ಎಂದು ವಧು–ವರರ ಕುಟುಂಬದವರಿಗೆ ಹೇಳುತ್ತಿದ್ದೇವೆ. ಎಲ್ಲ ಕಡೆ ಸ್ಯಾನಿಟೈಸ್ ವ್ಯವಸ್ಥೆ ಮಾಡಲಿದ್ದೇವೆ’ ಎಂದು ಕಲ್ಯಾಣ ಮಂಟಪಗಳ ಮಾಲೀಕರು ಹೇಳಿದರು.

2020ರ ಮಾರ್ಚ್‌–ಏಪ್ರಿಲ್‌ನಿಂದಲೂ ಕಲ್ಯಾಣ ಮಂಟಪಗಳಲ್ಲಿ ಹೆಚ್ಚು ಮದುವೆ ಸಮಾರಂಭಗಳು ನಡೆದಿಲ್ಲ. ಅಕ್ಟೋಬರ್‌ನಲ್ಲಿ ಕೆಲವು ದಿನಗಳವರೆಗೆ ಅವಕಾಶ ನೀಡಲಾಗಿದ್ದರೂ, ಮತ್ತೆ ಹಲವು ನಿರ್ಬಂಧಗಳನ್ನು ಹೇರಲಾಗಿತ್ತು. ಆಗ, ಮದುವೆ ದಿನಾಂಕ ಮುಂದೂಡಿದ್ದವರು ಈಗ ಮತ್ತೆ ಕಲ್ಯಾಣ ಮಂಟಪಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

ಕಾಲಾವಕಾಶ: ಮುಂದಿನ ವರ್ಷ ನೋಡಿದರಾಯಿತು, ಮೂರನೇ ಅಲೆ ಮುಗಿದ ನಂತರ ಬರುತ್ತೇವೆ ಎಂದು ಹೋಗಿದ್ದವರು ಈಗ ಕಲ್ಯಾಣಮಂಟಪಗಳಿಗೆ ಕರೆ ಮಾಡುತ್ತಿದ್ದಾರೆ.

‘ಕಲ್ಯಾಣಮಂಟಪ ಕಾಯ್ದಿರಿಸಿ, ನಂತರ ಮುಂದೂಡಿದ್ದರೆ ಮತ್ತೆ ವಿವಾಹ ಕಾರ್ಯಕ್ರಮ ನಿಗದಿ ಮಾಡುತ್ತಿದ್ದವರಿಗೆ ಮೊದಲು ಮೂರು ತಿಂಗಳವರೆಗೆ ಅವಕಾಶ ಇರುತ್ತಿತ್ತು. ಈಗ ಈ ಅವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಿದ್ದೇವೆ. ಕಲ್ಯಾಣ ಮಂಟಪ ಕಾಯ್ದಿರಿಸಿ, ಕೋವಿಡ್‌ ನಿರ್ಬಂಧದ ಕಾರಣ ಮದುವೆಯಾಗದವರಿಗೆ ಅವಕಾಶ ನೀಡುತ್ತಿದ್ದೇವೆ. ನಾಲ್ಕೈದು ದಿನಾಂಕಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಲು ಹೇಳುತ್ತಿದ್ದೇವೆ’ ಎಂದು ಯಲಹಂಕದ ಕಲ್ಯಾಣಮಂಟಪವೊಂದರ ಮಾಲೀಕ ಸುಮತೀಂದ್ರ ಹೇಳಿದರು.

ಆರತಕ್ಷತೆಗೆ ಕಡಿಮೆ ಬಾಡಿಗೆ: ಈ ಹಿಂದೆ ಮದುವೆ ನಿಶ್ಚಯ ಮಾಡಿಕೊಂಡಿದ್ದ ಅನೇಕರು ಕಲ್ಯಾಣಮಂಟಪಗಳನ್ನು ಕಾಯ್ದಿರಿಸಿದ್ದರು. ಆದರೆ, ಇವರಲ್ಲಿ ಬಹುತೇಕರು ದೇವಸ್ಥಾನದಲ್ಲಿ ಅಥವಾ ಮನೆಗಳಲ್ಲಿಯೇ ದಂಪತಿಗಳಾಗಿದ್ದಾರೆ. ಈಗ ಪಾರ್ಟಿಹಾಲ್‌ ಅಥವಾ ಕಲ್ಯಾಣಮಂಟಪದಲ್ಲಿಯೇ ಆರತಕ್ಷತೆ ಮಾಡಿಕೊಳ್ಳಲು ಯೋಚಿಸುತ್ತಿದ್ದಾರೆ.

‘ಕಲ್ಯಾಣ ಮಂಟಪ ಕಾಯ್ದಿರಿಸಿ, ಬೇರೆ ಕಡೆಗೆ ಮದುವೆ ಮಾಡಿಕೊಂಡಿರುವ ಜೋಡಿಗಳಿಗೆ, ಆರತಕ್ಷತೆಗಾಗಿ ಅರ್ಧ ಶುಲ್ಕ ತೆಗೆದುಕೊಂಡು ಕಲ್ಯಾಣ ಮಂಟಪವನ್ನು ಬಾಡಿಗೆಗೆ ನೀಡುತ್ತಿದ್ದೇವೆ’ ಎಂದು ಕರ್ನಾಟಕ ಮ್ಯಾರೇಜ್ ಹಾಲ್ಸ್‌ ಅಸೋಸಿಯೇಷನ್‌ನ ಅಧ್ಯಕ್ಷ ರಮೇಶ್‌ ರೆಡ್ಡಿ ‌‌ಹೇಳಿದರು.

ಒಂದೊಂದು ಕಲ್ಯಾಣಮಂಟಪಗಳಿಗೆ ದಿನದ ಬಾಡಿಗೆ ₹1 ಲಕ್ಷದಿಂದ ₹7 ಲಕ್ಷದವರೆಗೆ ಇರುತ್ತದೆ. ಈಗ ಈ ಬಾಡಿಗೆಯಲ್ಲಿ ಶೇ 30ರಿಂದ ಶೇ 40ರಷ್ಟು ಕಡಿಮೆ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.

‘ತೆರಿಗೆ ವಿನಾಯಿತಿ ನೀಡಿ’
‘ಕಲ್ಯಾಣ ಮಂಟಪಗಳೂ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದಡಿ (ಎಂಎಸ್‌ಎಂಇ) ನೋಂದಣಿಯಾಗಿವೆ. ಆದರೆ, ಆ ಉದ್ಯಮಗಳಿಗೆ ಸಿಗುತ್ತಿರುವ ಯಾವುದೇ ಸೌಲಭ್ಯಗಳು ಕಲ್ಯಾಣ ಮಂಟಪಗಳಿಗೆ ಸಿಗುತ್ತಿಲ್ಲ’ ಎಂದು ರಮೇಶ್ ರೆಡ್ಡಿ ಹೇಳಿದರು.

‘ಕೋವಿಡ್ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಕಲ್ಯಾಣ ಮಂಟಪಗಳಿಗೆ ವಿದ್ಯುತ್‌ ನಿಶ್ಚಿತ ಶುಲ್ಕ (ಫಿಕ್ಸ್ಡ್‌ ಚಾರ್ಜಸ್‌), ಬಿಬಿಎಂಪಿ ಉದ್ದಿಮೆ ಪರವಾನಗಿ ಶುಲ್ಕ ಮನ್ನಾ ಮಾಡಬೇಕು. ಜಿಎಸ್‌ಟಿ ಹಾಗೂ ಆದಾಯ ತೆರಿಗೆಯಿಂದ ವಿನಾಯಿತಿ ನೀಡಬೇಕು. ಕಲ್ಯಾಣ ಮಂಟಪಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಆರ್ಥಿಕ ನೆರವು ನೀಡಬೇಕು’ ಎಂದು ಒತ್ತಾಯಿಸಿದರು.

*
ಕಲ್ಯಾಣ ಮಂಟಪಗಳೂ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದಡಿ ನೋಂದಣಿಯಾಗಿವೆ. ಆದರೆ, ಆ ಉದ್ಯಮಗಳಿಗೆ ಸಿಗುತ್ತಿರುವ ಸೌಲಭ್ಯಗಳು ಸಿಗುತ್ತಿಲ್ಲ.
-ರಮೇಶ್ ರೆಡ್ಡಿ, ಕರ್ನಾಟಕ ಮ್ಯಾರೇಜ್ ಹಾಲ್ಸ್‌ ಅಸೋಸಿಯೇಷನ್‌ನ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.