ADVERTISEMENT

ಅಪಾಯ ಭತ್ಯೆ: ಶುಶ್ರೂಷಕರ ಅಸಮಾಧಾನ

ಯಡಿಯೂರಪ್ಪ ನೀಡಿದ ಭರವಸೆಯಂತೆ ಪರಿಷ್ಕೃತ ಆದೇಶ ಹೊರಡಿಸಲಿ: ಶುಶ್ರೂಷಕರ ಸಂಘ ಆಗ್ರಹ

ನಾಗರಾಜ್ ಬಿ.ಎನ್‌.
Published 29 ಜೂನ್ 2021, 21:51 IST
Last Updated 29 ಜೂನ್ 2021, 21:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹುಬ್ಬಳ್ಳಿ: ಕೋವಿಡ್ ಸೇನಾನಿಗಳಾಗಿ ಮುಂಚೂಣಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಶುಶ್ರೂಷಕರಿಗೆ ಸರ್ಕಾರ ಆರು ತಿಂಗಳವರೆಗೆ ಕೋವಿಡ್ ‘ಅಪಾಯ ಭತ್ಯೆ’ಯಾಗಿ ₹ 8 ಸಾವಿರ ನೀಡಲು ಆದೇಶಿಸಿದೆ. ಆದರೆ, ಪಿಪಿಇ ಕಿಟ್ ಧರಿಸಿ ಕೋವಿಡ್‌ ಕೇಂದ್ರದಲ್ಲಿ ಕೆಲಸ ನಿರ್ವಹಿಸಿದವರಿಗಷ್ಟೇ ಈ ಭತ್ಯೆ ಎಂದು ಆದೇಶದಲ್ಲಿ ಉಲ್ಲೇಖಿಸಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಅಂದಾಜು 20 ಸಾವಿರ ಶುಶ್ರೂಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಮತ್ತು‌ ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಅಂದಾಜು 11 ಸಾವಿರ, ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 4,500 ಹಾಗೂ ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ 4,500 ಮಂದಿ ಇದ್ದಾರೆ. ಕೋವಿಡ್ ನಿರ್ವಹಣೆಯಲ್ಲಿ ಇವರ ಪಾತ್ರ ಗಣನೀಯವಾಗಿದೆ ಎಂದು ಸರ್ಕಾರ, ಪ್ರೋತ್ಸಾಹ ಧನವಾಗಿ ಅಪಾಯ ಭತ್ಯೆ ನೀಡಲು ನಿರ್ಧರಿಸಿದೆ. ಇದು ಆಸ್ಪತ್ರೆಯ ಇತರ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶುಶ್ರೂಷಕರ ಅಸಮಾಧಾನಕ್ಕೂ ಎಡೆಮಾಡಿಕೊಟ್ಟಿದೆ.

‘ಕೊರೊನಾ ಸೋಂಕಿನ ಎರಡನೇ ಅಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಶುಶ್ರೂಷಕರು ಕೋವಿಡ್‌ ಕರ್ತವ್ಯದ ಒಂದಿಲ್ಲೊಂದು ಕಾರ್ಯದಲ್ಲಿ ನಿರತರಾಗಿದ್ದರು. ತುರ್ತು ಚಿಕಿತ್ಸಾ ವಿಭಾಗದಲ್ಲಿ ದಾಖಲಾದ ರೋಗಿಗಳಿಗೆ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಅವರಿಗೆಲ್ಲ ಸೋಂಕು ತಗುಲಿದೆಯೇ, ಇಲ್ಲವೇ ಎಂದು ಗೊತ್ತಿರುವುದಿಲ್ಲ. ರೋಗಿಗಳ ಮತ್ತು ಸಾರ್ವಜನಿಕರ ನೇರ ಸಂಪರ್ಕದಲ್ಲಿರುವ ಇವರಿಗೂ ಅಪಾಯ ಭತ್ಯೆ ನೀಡಬೇಕು’ ಎಂದು ಶುಶ್ರೂಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಜಕುಮಾರ ಮಳಗಿ ಆಗ್ರಹಿಸಿದ್ದಾರೆ.

ADVERTISEMENT

‘ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲ ಶುಶ್ರೂಷಕರಿಗೆ ಈ ಭತ್ಯೆ ನೀಡಲಾಗುವುದು ಎಂದಿದ್ದರು. ಈಗ ಹೊಸ ನಿಯಮ ಹೇಳುತ್ತಿದ್ದಾರೆ. ಗೊಂದಲಗಳಿದ್ದರೆ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿ ಬಗೆಹರಿಸಿಕೊಳ್ಳಲಿ’ ಎಂದರು.

‘ಕೋವಿಡ್‌ ಕೇಂದ್ರದಲ್ಲಿ ಪಿಪಿಇ ಕಿಟ್‌ ಧರಿಸಿ ಕರ್ತವ್ಯ ನಿರ್ವಹಿಸುವವರಿಗಿಂತ ಹೆಚ್ಚು ಅಪಾಯ, ತುರ್ತು ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಶುಶ್ರೂಷಕರಿಗೆ ಇರುತ್ತದೆ. ಎಲ್ಲ ಶುಶ್ರೂಷಕರಿಗೂ ಅಪಾಯ ಭತ್ಯೆ ನೀಡಬೇಕು’ ಎಂದು ಶುಶ್ರೂಷಕರ ಸಂಘದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷೆ ಸುನಿತಾ ನಾಯ್ಕ ಆಗ್ರಹಿಸಿದರು.

‘ಪಿಪಿಇ ಕಿಟ್‌ ಧರಿಸಿ ಎಷ್ಟು ಮಂದಿ ಶುಶ್ರೂಷಕರು ಕೋವಿಡ್‌ ವಾರ್ಡ್‌ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ ಎಂಬ ಲೆಕ್ಕ ಎಲ್ಲಿಯೂ ಇಲ್ಲ. ಕೆಲವು ಆಸ್ಪತ್ರೆಗಳನ್ನು ಕೋವಿಡ್‌ ಆಸ್ಪತ್ರೆ ಎಂದು ಘೋಷಿಸಲಾಗಿತ್ತು. ಹೀಗಾಗಿ ಅಪಾಯ ಭತ್ಯೆಗೆ ಯಾರ್‍ಯಾರ ಹೆಸರು ಸೂಚಿಸಬೇಕೆನ್ನುವ ಗೊಂದಲ ಸಹ ಆರೋಗ್ಯ ಇಲಾಖೆ ಅಧಿಕಾರಿಗಳಲ್ಲಿದೆ. ಅಲ್ಲದೆ, ತಮಗೆ ಆಪ್ತರಾದ ಶುಶ್ರೂಷಕರ ಹೆಸರನ್ನು ಸಹ ಶಿಫಾರಸ್ಸು ಮಾಡುವ ಸಾಧ್ಯತೆಯಿದೆ’ ಎಂದು ತಿಳಿಸಿದರು.

‘ಪಟ್ಟಿ ತಿರಸ್ಕಾರ, ತಾರತಮ್ಯ ಏಕೆ?’
‘ಕೋವಿಡ್‌ ಮೊದಲ ಅಲೆಯಲ್ಲಿ ಶುಶ್ರೂಷಕರಿಗೆ ಸರ್ಕಾರ ₹ 5ಸಾವಿರ ಅಪಾಯ ಭತ್ಯೆ ಘೋಷಿಸಿತ್ತು. ಆಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಅಪಾಯ ಭತ್ಯೆ ಪಡೆಯಲು ಅರ್ಹರಾದ ಶುಶ್ರೂಷಕರ ಪಟ್ಟಿಯನ್ನು ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಿಗೆ ನೀಡಿತ್ತು. ಕೋವಿಡ್‌ ಕೇಂದ್ರದ ಹೊರತಾಗಿ, ಇತರೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದವರ ಹೆಸರನ್ನೂ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಅದನ್ನು ತಿರಸ್ಕರಿಸಲಾಗಿತ್ತು. ಪರಿಷ್ಕೃತ ಪಟ್ಟಿ ನೀಡಲು ಅಧೀಕ್ಷಕರಿಗೆ ಸೂಚಿಸಲಾಗಿತ್ತು. ಇತರೆ ವಿಭಾಗದಲ್ಲಿ ಕೆಲಸ ಮಾಡುವ ಶುಶ್ರೂಷಕರಿಗೆ ಕೋವಿಡ್‌ ಅಪಾಯವಿಲ್ಲವೇ? ಈ ತಾರತಮ್ಯ ಯಾಕೆ’ ಎಂದು ಹೆಸರು ಹೇಳಲಿಚ್ಛಿಸದ ಶುಶ್ರೂಷಕರೊಬ್ಬರು ಪ್ರಶ್ನಿಸಿದರು.

_

ವಿಡಿಯೊ ಸಂವಾದದಲ್ಲಿ ಸಿ.ಎಂ. ನೀಡಿದ ಭರವಸೆಯಂತೆ ಎಲ್ಲರಿಗೂ ‘ಅಪಾಯ ಭತ್ಯೆ‘ ನೀಡಬೇಕು. ಈಗಾಗಲೇ ಹೊರಡಿಸಿರುವ ಆದೇಶ ಹಿಂಪಡೆದು, ಪರಿಷ್ಕೃತ ಆದೇಶ ಹೊರಡಿಸಬೇಕು.
-ರಾಜಕುಮಾರ ಮಳಗಿ, ಅಧ್ಯಕ್ಷ, ಶುಶ್ರೂಷಕರ ಸಂಘದ ರಾಜ್ಯ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.