ADVERTISEMENT

ಕೋವಿಡ್‌-19: ಇನ್ನೆರಡು ದಿನಗಳಲ್ಲಿ ₹1 ಲಕ್ಷ ಪರಿಹಾರ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 21:38 IST
Last Updated 20 ಸೆಪ್ಟೆಂಬರ್ 2021, 21:38 IST
   

ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟ ಬಡ ಕುಟುಂಬದವರಿಗೆ ಮುಂದಿನ ಎರಡು– ಮೂರು ದಿನಗಳಲ್ಲಿ ತಲಾ ₹1 ಲಕ್ಷ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ತಿಳಿಸಿದರು.

ಬೆಲೆ ಏರಿಕೆ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಈವರೆಗೆ ಒಟ್ಟು 7 ರಿಂದ 8 ಸಾವಿರ ಬಿಪಿಎಲ್‌ ಕುಟುಂಬಗಳು ನೋಂದಣಿ ಮಾಡಿವೆ. ನೇರವಾಗಿ ಅವರ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ಹೇಳಿದರು.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ವಿಷಯ ಪ್ರಸ್ತಾಪಿಸಿ, ಮೃತಪಟ್ಟವರಿಗೆ ತಲಾ ₹1 ಲಕ್ಷ ನೀಡುವುದಾಗಿ ಸರ್ಕಾರ ಪ್ರಕಟಿಸಿತ್ತು. ಆದರೆ, ಈವರೆಗೂ ಪರಿಹಾರ ಮೊತ್ತವನ್ನು ನೀಡಿಲ್ಲ ಎಂದರು.

ADVERTISEMENT

ಕೋವಿಡ್‌ 2ನೇ ಅಲೆ ಕೊನೆ ಹಂತಕ್ಕೆ ಬಂದಿದೆ. ಮೂರನೇ ಅಲೆಯ ಬಗ್ಗೆ ಚರ್ಚೆ ನಡೆದಿದೆ. ಈಗಾಗಲೇ ಶಾಲೆಯನ್ನು ಹಂತ ಹಂತವಾಗಿ ಆರಂಭಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಆರ್ಥಿಕ ಚಟುವಟಿಕೆಗೆ ಚುರುಕು ನೀಡಬೇಕಾಗಿದೆ ಎಂದು ಬೊಮ್ಮಾಯಿ ಹೇಳಿದರು.

‘ಕೆಲವು ವರ್ಗಗಳಿಗೆ ಸಹಾಯ ಮಾಡುವ ಉದ್ದೇಶವಿದ್ದು, ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ. ಬಡ ವರ್ಗಕ್ಕೆ ನೆರವು ನೀಡುವ ಮೂಲಕ ಮತ್ತು ಹೊಸ ಯೋಜನೆಗಳನ್ನು ರೂಪಿಸುವ ಮೂಲಕ ಆರ್ಥಿಕ ಚಟುವಟಿಕೆಗಳಿಗೆ ಚೇತರಿಕೆ ನೀಡಬೇಕಾಗಿದೆ’ ಎಂದರು.

‘ಕೋವಿಡ್‌: ಸಿಗದ ₹1 ಲಕ್ಷ ಪರಿಹಾರ’ ಎಂಬ ಶೀರ್ಷಿಕೆಯಡಿ ಈ ಬಗ್ಗೆ ‘ಪ್ರಜಾವಾಣಿ’ಯು ವಿಶೇಷ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.