ADVERTISEMENT

‘ಎರಡನೇ ಡೋಸ್‌ನಿಂದ ಸಂಪೂರ್ಣ ಸುರಕ್ಷೆ’

ಲಸಿಕೆ ಪಡೆಯಲು ಆರೋಗ್ಯ ಇಲಾಖೆ ಮನವಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 17:37 IST
Last Updated 14 ಸೆಪ್ಟೆಂಬರ್ 2021, 17:37 IST
   

ಬೆಂಗಳೂರು: ‘ಕೊರೊನಾ ಸೋಂಕಿನಿಂದ ಸಂಪೂರ್ಣ ಸುರಕ್ಷತೆ ಪಡೆಯಲು 18 ವರ್ಷದ ಮೇಲಿನವರೆಲ್ಲರೂ ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆಯುವುದು ಅವಶ್ಯಕ’ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

‘ಸಂಭಾವ್ಯ ಕೋವಿಡ್ ಮೂರನೇ ಅಲೆಯ ಮುನ್ನೆಚ್ಚರಿಕಾ ಕ್ರಮವಾಗಿ ಅರ್ಹ ಫಲಾನುಭವಿಗಳು ಆದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳಬೇಕು‌. ಎರಡನೇ ಡೋಸ್ ಪಡೆಯದಿದ್ದರೆ ರೋಗನಿರೋಧಕ ಶಕ್ತಿ ಅಷ್ಟಾಗಿ ವೃದ್ಧಿಯಾಗುವುದಿಲ್ಲ. ಹಾಗಾಗಿ, ಯಾವುದೇ ಕಾರಣಕ್ಕೂ ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳದೆ ಇರಬಾರದು’ ಎಂದು ಇಲಾಖೆ ತಿಳಿಸಿದೆ.

‘ಸದ್ಯ ದೇಶದಲ್ಲಿ ‘ಕೋವ್ಯಾಕ್ಸಿನ್’, ‘ಕೋವಿಶೀಲ್ಡ್‌’ ಹಾಗೂ ‘ಸ್ಪುಟ್ನಿಕ್–ವಿ’ ಲಸಿಕೆ ಲಭ್ಯ. ಈ ಮೂರು ಲಸಿಕೆಗಳು ಎರಡು ಡೋಸ್‌ಗಳನ್ನು ಹೊಂದಿವೆ. ಮೊದಲ ಎರಡು ಲಸಿಕೆಗಳು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯ ಇವೆ. ‘ಸ್ಪುಟ್ನಿಕ್–ವಿ’ ಲಸಿಕೆ ಆಯ್ದ ಖಾಸಗಿ ಕೇಂದ್ರಗಳಲ್ಲಿ ಮಾತ್ರ ದೊರೆಯುತ್ತವೆ. ಎರಡೂ ಡೋಸ್‌ಗಳನ್ನು ಪಡೆದಲ್ಲಿ ತೀವ್ರ ಅನಾರೋಗ್ಯ ಸಮಸ್ಯೆಯನ್ನು ತಡೆಯಲು ಸಾಧ್ಯ’ ಎಂದು ಇಲಾಖೆ ಹೇಳಿದೆ.

ADVERTISEMENT

‘ಕೋವಿಡ್ ಲಸಿಕೆ ಪಡೆದ ಬಳಿಕ ಸೋಂಕು ತಗಲುವುದೇ ಇಲ್ಲ ಎಂದು ಹೇಳಲಾಗದು. ಆದರೆ, ಸೋಂಕಿನ ಪರಿಣಾಮದ ತೀವ್ರತೆ ಕಡಿಮೆ ಇರುತ್ತದೆ. ಲಸಿಕೆ ಪಡೆದ ಬಳಿಕವೂ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಬೇಕು’ ಎಂದು ಪ್ರಕಟಣೆ ತಿಳಿಸಿದೆ.

ರಾಜ್ಯದಲ್ಲಿ ಈವರೆಗೆ ಲಸಿಕೆಯ 4.80 ಕೋಟಿಗೂ ಅಧಿಕ ಡೋಸ್‌ಗಳನ್ನು ವಿತರಿಸಲಾಗಿದೆ. 3.54 ಕೋಟಿ ಮಂದಿ ಈವರೆಗೆ ಮೊದಲ ಡೋಸ್ ಹಾಗೂ 1.25 ಕೋಟಿ ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ.

ಸದ್ಯ 5,175 ಸರ್ಕಾರಿ ಕೇಂದ್ರಗಳು ಹಾಗೂ 409 ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ವಿತರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.