ADVERTISEMENT

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಒಪ್ಪದವರಿಗೆ ಆಗಸ್ಟ್ 19ರಿಂದ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 11:47 IST
Last Updated 20 ಜುಲೈ 2021, 11:47 IST
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್ ಫಲಿತಾಂಶ ಪ್ರಕಟಿಸಿದರು - ಚಿತ್ರ ಕೃಪೆ: ಸಚಿವರ ಫೇಸ್‌ಬುಕ್‌ ಲೈವ್‌ ಸ್ಕ್ರೀನ್‌ಗ್ರ್ಯಾಬ್
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್ ಫಲಿತಾಂಶ ಪ್ರಕಟಿಸಿದರು - ಚಿತ್ರ ಕೃಪೆ: ಸಚಿವರ ಫೇಸ್‌ಬುಕ್‌ ಲೈವ್‌ ಸ್ಕ್ರೀನ್‌ಗ್ರ್ಯಾಬ್   

ಬೆಂಗಳೂರು: 2020–21ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್ ಮಂಗಳವಾರ ಪ್ರಕಟಿಸಿದ್ದಾರೆ.

ಕೋವಿಡ್–19 ಸಾಂಕ್ರಾಮಿಕದ ಕಾರಣ ಈ ಬಾರಿ ಪರೀಕ್ಷೆ ನಡೆಸದೇ ಫಲಿತಾಂಶ ಪ್ರಕಟಿಸಲಾಗಿದೆ. ಎಸ್ಸೆಸ್ಸೆಲ್ಸಿಯ ಶೇ 45, ಪ್ರಥಮ ಪಿಯುಸಿಯ ಶೇ 45 ಮತ್ತು ದ್ವಿತೀಯ ಪಿಯುಸಿಯ ಶೇ 10ರಷ್ಟು ಶೈಕ್ಷಣಿಕ ಚಟುವಟಿಕೆ ಅಂಕಗಳನ್ನು ಪರಿಗಣಿಸಿ ಈ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಫಲಿತಾಂಶದ ಬಗ್ಗೆ ಅಸಮಾಧಾನ ಇದ್ದವರಿಗೆ ಪರೀಕ್ಷೆ ಬರೆಯಲು ಅವಕಾಶವಿದೆ. ಆಗಸ್ಟ್ 19ರಿಂದ ಸೆಪ್ಟೆಂಬರ್ 3ರವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಜುಲೈ 30 ಕಡೇ ದಿನಾಂಕ. ಫಲಿತಾಂಶ ತಿರಸ್ಕರಿಸಿ ಮತ್ತೆ ಪರೀಕ್ಷೆ ತೆಗೆದುಕೊಂಡ ಫ್ರೆಶರ್ಸ್‌ಗಳನ್ನು ಫ್ರೆಶರ್ಸ್ ಎಂದೇ ಪರಿಗಣಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ಪಿಯುಸಿ ಫಲಿತಾಂಶವನ್ನು ಸಿಇಟಿಗೆ ಪರಿಗಣಿಸಲಾಗುವುದಿಲ್ಲ. ಎಲ್ಲ ರಿಪೀಟರ್ಸ್‌ಗಳನ್ನೂ ತೇರ್ಗಡೆಗೊಳಿಸಲಾಗಿದ್ದು, ಅವರಿಗೆ ಕನಿಷ್ಠ ಉತ್ತೀರ್ಣ ಅಂಕ ನೀಡಲಾಗಿದೆ ಎಂದೂ ಸಚಿವರು ಹೇಳಿದ್ದಾರೆ.

4,50,706 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು ಮೊದಲ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಗ್ರಾಮೀಣ ಭಾಗದಿಂದ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ 1,47,594. ಇದರಲ್ಲಿ 14,243 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ. ಒಟ್ಟು 2,239 ವಿದ್ಯಾರ್ಥಿಗಳು 600ಕ್ಕೆ 600 ಅಂಕ ಪಡೆದಿದ್ದಾರೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಫಲಿತಾಂಶವನ್ನು https://karresults.nic.in/ ತಾಣದಲ್ಲಿಯೂ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.