ADVERTISEMENT

ಖಾರದಪುಡಿ ಮಹೇಶ್‌ ಪ್ರಕರಣ: ₹ 54.18 ಕೋಟಿ ಆಸ್ತಿ ಮುಟ್ಟುಗೋಲು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 19:45 IST
Last Updated 30 ಮಾರ್ಚ್ 2023, 19:45 IST
   

ಬೆಂಗಳೂರು: ಅಕ್ರಮ ಗಣಿಗಾರಿಕೆ, ಅದಿರು ಕಳ್ಳಸಾಗಣೆ ಮತ್ತು ಗಣಿ ಉದ್ಯಮಿಗಳಿಂದ ಹಫ್ತಾ ವಸೂಲಿ ಆರೋಪ ಎದುರಿಸುತ್ತಿರುವ ವಿಜಯನಗರ ಜಿಲ್ಲೆ ಹೊಸಪೇಟೆ ನಿವಾಸಿ ಖಾರದಪುಡಿ ಮಹೇಶ್‌ ಮತ್ತು ಅವರ ನಿಕಟವರ್ತಿಗಳಿಗೆ ಸೇರಿದ ₹ 54.18 ಕೋಟಿ ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.

ಖಾರದಪುಡಿ ಮಹೇಶ್‌ ಮತ್ತು ಅವರ ಸಹಚರರ ವಿರುದ್ಧ ಲೋಕಾಯುಕ್ತದ ವಿಶೇಷ ತನಿಖಾ ತಂಡ (ಎಸ್‌ಐಟಿ) ಭಾರತೀಯ ದಂಡ ಸಂಹಿತೆ, ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದರು. ಎಸ್‌ಐಟಿ ಸಲ್ಲಿಸಿದ್ದ ತನಿಖಾ ವರದಿ ಆಧರಿಸಿ ಜಾರಿ ನಿರ್ದೇಶನಾಲಯವು ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿತ್ತು.

‘ಖಾರದಪುಡಿ ಮಹೇಶ್‌ ಮತ್ತು ಅವರ ಸಹೋದರರಾದ ಕೆ. ಗೋವಿಂದರಾಜ್‌, ಕೆ. ಸದಾಶಿವ, ಕೆ. ಕುಮಾರ್‌ ಮತ್ತು ಸಹಚರರು ಸೇರಿಕೊಂಡು ನಕಲಿ ಪರವಾನಗಿಗಳನ್ನು ಬಳಸಿ ಕಬ್ಬಿಣದ ಅದಿರು ಸಾಗಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ₹ 62.92 ಕೋಟಿ ನಷ್ಟ ಉಂಟುಮಾಡಿದ್ದರು. ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಇತರರಿಗೆ ಅದಿರು ಕಳ್ಳಸಾಗಣೆಗೆ ನೆರವು ನೀಡಲು ‘ರಿಸ್ಕ್‌ ಮನಿ’ ಹೆಸರಿನಲ್ಲಿ ₹ 40.93 ಕೋಟಿ ಹಫ್ತಾ ವಸೂಲಿ ಮಾಡಿದ್ದರು ಎಂಬುದು ತನಿಖೆಯಲ್ಲಿ ಪ್ತತೆಯಾಗಿತ್ತು. ಇವರಿಂದ ಸರ್ಕಾರದ ಬೊಕ್ಕಸಕ್ಕೆ ಒಟ್ಟು ₹ 103.85 ಕೋಟಿ ನಷ್ಟ ಉಂಟಾಗಿತ್ತು’ ಎಂದು ಇ.ಡಿ ತಿಳಿಸಿದೆ.

ADVERTISEMENT

ಆರೋಪಿಗಳು ಬಹುತೇಕ ಹಣವನ್ನು ನಗದು ರೂಪದಲ್ಲಿ ಪಡೆಯುತ್ತಿದ್ದರು. ಅದನ್ನು ತಮ್ಮ ಹಾಗೂ ಕುಟುಂಬದ ಸದಸ್ಯರ ಹೆಸರಿನಲ್ಲಿ ಸ್ಥಿರಾಸ್ತಿ ಖರೀದಿಗೆ ಬಳಸುತ್ತಿದ್ದರು ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ಖಾಲಿ ಜಮೀನು, ವಸತಿ ಕಟ್ಟಡಗಳು, ವಾಣಿಜ್ಯ ಕಟ್ಟಡಗಳು ಸೇರಿದಂತೆ 30 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇ.ಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.