ADVERTISEMENT

ಅನುದಾನ ಬಿಡುಗಡೆ: ಜೆಡಿಎಸ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ

ಆರ್ಥಿಕ ಸಂಕಷ್ಟದಿಂದ ತಡೆ ಹಿಡಿಯಲಾಗಿತ್ತು, ಹಂತ ಹಂತವಾಗಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 22:37 IST
Last Updated 21 ಸೆಪ್ಟೆಂಬರ್ 2021, 22:37 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ    

ಬೆಂಗಳೂರು: ಜೆಡಿಎಸ್‌– ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಆಡಳಿತಾತ್ಮಕ ಮಂಜೂರಾತಿ ಪಡೆದ ಎಲ್ಲ ಯೋಜನೆಗಳನ್ನು ಹಂತ ಹಂತವಾಗಿ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಭರವಸೆ ನೀಡಿದರು.

ನಿಯಮ 69 ರಡಿ ಜೆಡಿಎಸ್‌ನ ಎಚ್‌.ಡಿ.ರೇವಣ್ಣ ಮತ್ತು ಇತರ ಸದಸ್ಯರ ಪ್ರಸ್ತಾವಕ್ಕೆ ಉತ್ತರ ನೀಡಿದ ಅವರು, ಯಾವುದೇ ಕಾಮಗಾರಿಗಳನ್ನು ತಡೆ ಹಿಡಿದಿಲ್ಲ. ಪ್ರವಾಹ, ಕೋವಿಡ್‌ ಸಂಕಷ್ಟದಿಂದಾಗಿ ಕಾಮಗಾರಿಗಳು ಕುಂಠಿತ ಆಗಿದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಹಣಕಾಸು ನಿರ್ವಹಣೆ ಅತಿ ಮುಖ್ಯ ಎಂದು ಹೇಳಿದರು.

ಈಗಾಗಲೇ ಆಡಳಿತಾತ್ಮಕ ಒಪ್ಪಿಗೆ ಪಡೆದು ಕಾರ್ಯದೇಶ ಆಗಿರುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಟೆಂಡರ್‌ ಹಂತದಲ್ಲಿ ಸ್ಥಗಿತವಾಗಿರುವ ಮತ್ತು ಟೆಂಡರ್‌ ಆಗಬೇಕಾಗಿರುವ ಕಾಮಗಾರಿಗಳು ನಂತರದ ಹಂತದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಈ ಪೈಕಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯ ₹940 ಕೋಟಿ, ನಗರಾಭಿವೃದ್ಧಿ ಇಲಾಖೆಯ ₹232 ಕೋಟಿ ಮತ್ತು ಲೋಕೋಪಯೋಗಿ ಇಲಾಖೆ ₹4,007 ಕೋಟಿ ಮೊತ್ತದ ಕಾಮಗಾರಿಗಳಿವೆ. ಕೇವಲ ಜೆಡಿಎಸ್ ಶಾಸಕರ ಕ್ಷೇತ್ರ ಮಾತ್ರವಲ್ಲ ಬಿಜೆಪಿ ಶಾಸಕ ಕ್ಷೇತ್ರಗಳಲ್ಲೂ ಇದೇ ಕಾರಣಗಳಿಗೆ ಅನುದಾನ ತಡೆ ಹಿಡಿಯಲಾಗಿದೆ ಎಂದು ಹೇಳಿದರು.

ವಿಷಯ ಪ್ರಸ್ತಾಪಿಸಿದ ಎಚ್‌.ಡಿ.ರೇವಣ್ಣ, ರಾಜಕೀಯ ಕಾರಣಗಳಿಗಾಗಿ ಎಚ್‌.ಡಿ.ಕುಮಾರಸ್ವಾಮಿ ಅವರ ಅವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿಗಳಿಗೆ ತಡೆ ನೀಡಲಾಗಿದೆ. ಕಳೆದ ಅಧಿವೇಶನದಲ್ಲಿ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ನೀಡಿದ ಭರವಸೆಯನ್ನು ಈಡೇರಿಸಿ ಎಂದು ಒತ್ತಾಯಿಸಿದರು. ಇದಕ್ಕೆ ಜೆಡಿಎಸ್‌ನ ರಾಜಾ ವೆಂಕಟಪ್ಪ ನಾಯಕ, ರವೀಂದ್ರ ಶ್ರೀಕಂಠಯ್ಯ, ಡಾ.ಕೆ. ಅನ್ನದಾನಿ, ಮಾಗಡಿ ಮಂಜುನಾಥ್, ಸಿ.ಎನ್.ಬಾಲಕೃಷ್ಣ, ಡಿ.ಸಿ. ತಮ್ಮಣ್ಣ, ಲಿಂಗೇಶ್, ಸುರೇಶ್ ಗೌಡ ಮತ್ತು ದಾಸರಹಳ್ಳಿ ಮಂಜುನಾಥ್ ಧ್ವನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಯೋಜನೆ ಮತ್ತು ಆದ್ಯತೆಗೆ ಅನುಗುಣವಾಗಿ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅನುದಾನ ಹಂಚಿಕೆ ಮಾಡಬೇಕು. ಆದರೆ ಆ ಸಂಪ್ರದಾಯವನ್ನು ಮುರಿದವರು ಯಾರು ಎಂದು ರೇವಣ್ಣ ಅವರನ್ನು ಪ್ರಶ್ನಿಸಿದರು.

ಆಯವ್ಯಯದಲ್ಲಿ ತೆಗೆದಿರಿಸಿದ್ದಕ್ಕಿಂತ ಹೆಚ್ಚುವರಿ ಅನುದಾನ ಹಂಚಿಕೆ ಮಾಡಲಾಯಿತು. ಸಮ್ಮಿಶ್ರ ಸರ್ಕಾರದ ಪತನದ ಸುಳಿವು ಸಿಗುತ್ತಿದ್ದಂತೆ ಯದ್ವಾತದ್ವಾ ಅನುದಾನ ಹಂಚಿಕೆ ಮಾಡಿದ್ದೇ ಈ ಎಲ್ಲ ಸಮಸ್ಯೆಗೆ ಮೂಲಕ ಕಾರಣ ಎಂದರು.

‘ನಿಮ್ಮ ಸರ್ಕಾರ ಇದ್ದಾಗ 2018–19 ರ ಸಾಲಿನಲ್ಲಿ 105 ಶಾಸಕರಿದ್ದ ಬಿಜೆಪಿ ಸದಸ್ಯರಿಗೆ ತಲಾ ₹28 ಕೋಟಿಯಂತೆ ಒಟ್ಟು ₹2,986 ಕೋಟಿ ಅನುದಾನ ನೀಡಿದರೆ, 37 ಶಾಸಕರನ್ನು ಹೊಂದಿದ್ದ ಜೆಡಿಎಸ್‌ಗೆ ತಲಾ ₹80 ಕೋಟಿಯಂತೆ ₹2,974 ಕೋಟಿ ಮಂಜೂರು ಮಾಡಿದ್ದಿರಿ. ಇದು ತಾರತಮ್ಯ ಅಲ್ಲವೇ ಎಂದು ಮಾಧುಸ್ವಾಮಿ ಪ್ರಶ್ನಿಸಿದರು.

‘ಕಬ್ಬು ಕಡಿದು ಎಸೆಯುತ್ತಿದ್ದಾರೆ’
‘ಮಂಡ್ಯ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ತೆಗೆದುಕೊಳ್ಳದ ಪರಿಣಾಮ ರೈತರು ಕಬ್ಬನ್ನು ಕಡಿದು ರಸ್ತೆಗೆ ಎಸೆಯುತ್ತಿದ್ದಾರೆ’ ಎಂದು ಜೆಡಿಎಸ್‌ನ ರವೀಂದ್ರ ಶ್ರೀಕಂಠಯ್ಯ ಗಮನ ಸೆಳೆದರು.

‘ಬೆಳೆದ ಕಬ್ಬನ್ನು ಎಲ್ಲಿಗೆ ಸಾಗಿಸಬೇಕು ಎಂಬುದು ಗೊತ್ತಾಗದೇ ರೈತರು ಕಂಗಾಲಾಗಿದ್ದಾರೆ. ಪಾಂಡವಪುರ ಸಕ್ಕರೆ ಕಾರ್ಖಾನೆಯವರು ನಮ್ಮ ಕಬ್ಬು ತೆಗೆದುಕೊಳ್ಳುತ್ತಿಲ್ಲ. ಮಂಡ್ಯ ಸಕ್ಕರೆ ಕಾರ್ಖಾನೆ ಬಗ್ಗೆ ಸರ್ಕಾರ ಇನ್ನೂ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಈ ಸಮಸ್ಯೆಯ ಪರಿಹಾರ ಒದಗಿಸಬೇಕಾದ ಅಧಿಕಾರಿಗಳು ಝೂಮ್‌ ಮೀಟಿಂಗ್‌ನಲ್ಲೇ ಮುಳುಗಿರುತ್ತಾರೆ’ ಎಂದು ತರಾಟೆಗೆ ತೆಗೆದುಕೊಂಡರು.

‘ಹಣ್ಣು ತರಕಾರಿ ಕೊಡುವ ನಮಗೆ ಕಸ ಕೊಡ್ತಾರೆ’
‘ನಾವು ಬೆಂಗಳೂರು ನಗರಕ್ಕೆ ಹಾಲು, ಹಣ್ಣು–ತರಕಾರಿ ಕೊಡ್ತೇವೆ. ಅದಕ್ಕೆ ಬದಲು ನಮ್ಮ ಕ್ಷೇತ್ರಕ್ಕೆ ನಗರದ ಕಸ ತಂದು ಸುರಿಯುತ್ತಾರೆ’ ಎಂದು ಜೆಡಿಎಸ್‌ನ ಮಾಗಡಿ ಶಾಸಕ ಮಂಜುನಾಥ್‌ ಆಕ್ರೋಶ ವ್ಯಕ್ತಪಡಿಸಿದರು.

‘ಘನ ತ್ಯಾಜ್ಯ ವಿಲೇವಾರಿಗೆಂದು ₹30 ಕೋಟಿ ನಿಗದಿ ಮಾಡಲಾಗಿತ್ತು. ಆದರೆ, ಅದನ್ನು ತಡೆ ಹಿಡಿದು ಬಿಬಿಎಂಪಿಗೆ ನೀಡಲಾಯಿತು’ ಎಂದರು.

*

ದೊಡ್ಡವರು, ಶ್ರೀಮಂತರು, ಸಾಹಿತಿಗಳ ಮಕ್ಕಳು ಖಾಸಗಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಬೇಕೆ ?<br/>ಬಡವರು ಮತ್ತು ಹಳ್ಳಿ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ಬೇಡವೆ?
-ಎಚ್‌.ಡಿ.ರೇವಣ್ಣ, ಜೆಡಿಎಸ್ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.