ADVERTISEMENT

ಚಿತ್ರಮಂದಿರಗಳ ನಿರ್ಬಂಧ ತೆರವಿಗೆ ಚಿಂತನೆ: ಡಾ.ಕೆ. ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 22:31 IST
Last Updated 21 ಸೆಪ್ಟೆಂಬರ್ 2021, 22:31 IST
ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌
ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌   

ಬೆಂಗಳೂರು: ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವುದರಿಂದ ಚಿತ್ರಮಂದಿರಗಳ ಮೇಲಿನ ನಿರ್ಬಂಧ ತೆರವುಗೊಳಿಸಿ, ಶೇಕಡ 100ರಷ್ಟು ಆಸನಗಳ ಭರ್ತಿಗೆ ಅವಕಾಶ ಕಲ್ಪಿಸುವ ಚಿಂತನೆ ನಡೆದಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಚಿತ್ರರಂಗದ ಪ್ರಮುಖರು ಮಂಗಳವಾರ ವಿಧಾನಸೌಧದಲ್ಲಿ ಸಚಿವರನ್ನು ಭೇಟಿಮಾಡಿ, ಚಿತ್ರಮಂದಿರಗಳ ಮೇಲಿನ ನಿರ್ಬಂಧ ತೆರವುಗೊಳಿಸುವಂತೆ ಒತ್ತಾಯಿಸಿದರು. ಶೇ 50ರಷ್ಟು ಆಸನಗಳ ಬದಲಿಗೆ ಎಲ್ಲ ಆಸನಗಳನ್ನೂ ಭರ್ತಿ ಮಾಡಲು ಅವಕಾಶ ನೀಡುವಂತೆ ಆಗ್ರಹಿಸಿದರು.

‘ಕೋವಿಡ್‌ನಿಂದಾಗಿ ಚಿತ್ರೋದ್ಯಮ ಹೆಚ್ಚು ನಷ್ಟ ಅನುಭವಿಸಿದೆ. ಚಿತ್ರರಂಗಕ್ಕೆ ಪೂರ್ಣ ಬೆಂಬಲ ನೀಡಲು ಸರ್ಕಾರ ಸಿದ್ಧವಾಗಿದೆ. ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಎರಡರಿಂದ ಮೂರು ದಿನಗಳಲ್ಲಿ ಸಭೆ ಸೇರಲಿದೆ. ಸಮಿತಿಯ ಸಲಹೆ ಆಧರಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಸಚಿವರು ಹೇಳಿದರು.

ADVERTISEMENT

ಈಗ ಪತ್ತೆಯಾಗುತ್ತಿರುವ ಕೋವಿಡ್‌ ಹೊಸ ‍ಪ್ರಕರಣಗಳು, ಇತರ ರಾಜ್ಯಗಳು ಕೈಗೊಂಡಿರುವ ನಿರ್ಧಾರಗಳು ಮತ್ತು ಸಂಭವನೀಯ ಪರಿಸ್ಥಿತಿ ಕುರಿತ ಮುನ್ನೆಚ್ಚರಿಕೆಗಳನ್ನು ಆಧರಿಸಿ ನಿರ್ಧಾರಕ್ಕೆ ಬರಲಾಗುವುದು ಎಂದರು.

‘ಈಗ ರಾಜ್ಯದಲ್ಲಿ ನಿತ್ಯವೂ 600ರಿಂದ 800 ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಕೋವಿಡ್‌ ಪ್ರಕರಣಗಳ ದೃಢಪ್ರಮಾಣ ದರ ಶೇಕಡ 1ಕ್ಕಿಂತ ಕಡಿಮೆ ಇದೆ. ಸಾವಿನ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ. ಸದ್ಯ, ಚಿತ್ರಮಂದಿರಗಳಲ್ಲಿ ಪೂರ್ಣ ಆಸನ ಭರ್ತಿಗೆ ಅವಕಾಶ ನೀಡಲು ಪೂರಕವಾದ ಸನ್ನಿವೇಶವಿದೆ’ ಎಂದು ಹೇಳಿದರು.

ಸರ್ಕಾರ ಅತ್ಯಂತ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಲಿದೆ. ಯಾವುದೇ ಒಂದು ತೀರ್ಮಾನವೂ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗಲು ಕಾರಣವಾಗಬಾರದು ಎಂಬುದು ಸರ್ಕಾರದ ಕಾಳಜಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.