ADVERTISEMENT

ನಾನೂ ಪ್ರಾಮಾಣಿಕ ಚಾಲಕನ ಮಗ: ಸಾರಿಗೆ ನೌಕರರಿಗೆ ನಟ ಯಶ್ ಬರೆದ ಪತ್ರದಲ್ಲೇನಿದೆ?

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 12:36 IST
Last Updated 15 ಏಪ್ರಿಲ್ 2021, 12:36 IST
   

ಬೆಂಗಳೂರು: ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಸಂಬಂಧಿಸಿದಂತೆ ಚಿತ್ರನಟ ಯಶ್ ಅವರು‌ ಕರ್ನಾಟಕ ರಾಜ್ಯ ಸಾರಿಗೆ ನೌಕರರ ಒಕ್ಕೂಟಕ್ಕೆ ಪತ್ರ ಬರೆದಿದ್ದಾರೆ.ನಾನೂ ಚಾಲಕನ ಮಗನಾಗಿದ್ದು, ಸಾರಿಗೆ ನೌಕರರ ಸಮಸ್ಯೆ ಬಗ್ಗೆ ಅರಿವಿದೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿಅವರೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.

ಯಶ್‌‌ ತಮ್ಮ ಪತ್ರದಲ್ಲಿ, ʼಇಂದು ನಿಮ್ಮ ಯಶ್‌ ಏನೇ ಆಗಿರಬಹುದು. ಆದರೆ ಅದಕ್ಕೂ ಮೊದಲುನಾನು ನಿಮ್ಮ ಸಂಸ್ಥೆಯ ಪ್ರಮಾಣಿಕ ಚಾಲಕನ ಮಗ. ಹಾಗಾಗಿ ಸಾರಿಗೆ ನೌಕರರ ಕಷ್ಟ ಎನೆಂಬುದು ನನಗೆ ತಿಳಿದಿದೆ. ನ್ಯಾಯಕ್ಕಾಗಿ ಆಗ್ರಹಿಸುತ್ತಿರುವ ನೌಕರರ ಕೂಗು ಮತ್ತು ಸಾರಿಗೆ ಬಸ್ಸುಗಳ ಮೇಲೆಯೇ ಅವಲಂಬಿತವಾಗಿರುವ ಮಧ್ಯಮ ವರ್ಗದ ಜನರ ಅಳಲು ನನ್ನನ್ನು ಬಹುವಾಗಿ ಕಾಡುತ್ತಿವೆʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದುವರಿದು, ʼದೊಡ್ಡ ಸಮಸ್ಯೆಯೊಂದರ ಪರಿಹಾರಕ್ಕೆಚಿಕ್ಕಪ್ರಯತ್ನ ಎಂಬಂತೆ ಸಾರಿಗೆ ಸಚಿವರಾದಲಕ್ಷ್ಮಣ ಸವದಿ ಅವರೊಂದಿಗೆ ಮಾತುಕತೆ ನಡೆಸಿ, ಸಮಸ್ಯೆಗಳನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇನೆ. ನೌಕರರ ಬೇಡಿಕೆಗಳ ಬಗ್ಗೆ ಅವರು ಹೊಂದಿರುವ ಅರಿವು ಮತ್ತು ಕಳಕಳಿ ಸಮಾಧಾನ ನೀಡಿದೆʼಎಂದಿದ್ದಾರೆ.

ADVERTISEMENT

ಅದೇರೀತಿ, ಮುಖ್ಯಮಂತ್ರಿಗಳೊಂದಿಗೂ ಚರ್ಚಿಸಿದ್ದೇನೆ. ಅವರು ನೌಕರರ ಬಹುಮುಖ್ಯ ಬೇಡಿಕೆಯಾದ ವೇತನ ತಾರತಮ್ಯವನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಅಂತಿಮವಾಗಿ, ಸಮಸ್ಯೆಗೆ ಮತ್ತೊಂದು ಸಮಸ್ಯೆ ಪರಿಹಾರವಾಗುವುದಿಲ್ಲ. ಬದಲಿಗೆ ಮುಕ್ತವಾಗಿ ಮಾತುಕತೆ ನಡೆಸುವುದು ಪರಿಹಾರವಾಗಬಲ್ಲದು. ವಿರಸ ಬಿಟ್ಟು ಸಾಮರಸ್ಯದಿಂದ ಮುನ್ನಡೆಯೋಣ ಎಂದು ಕಿವಿ ಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.