ADVERTISEMENT

ಐಟಿ ದಾಳಿ: ಉಪಚುನಾವಣೆ ಮೇಲೆ ಪರಿಣಾಮ?

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 19:51 IST
Last Updated 7 ಅಕ್ಟೋಬರ್ 2021, 19:51 IST
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ಶಾಸಕ ಬಿ.ಎಸ್‌.ಯಡಿಯೂರಪ್ಪ ಅವರ ಆಪ್ತರ ಮೇಲೆ ಗುರುವಾರ ಆದಾಯ ತೆರಿಗೆ ದಾಳಿ ನಡೆದಿರುವುದು ಮುಂಬರುವ ಹಾನಗಲ್‌ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮೇಲೆ ಪ್ರಭಾವ ಬೀರುವುದೇ ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ಆರಂಭವಾಗಿದೆ.

ಈ ಬೆಳವಣಿಗೆಗಳಿಂದ ಯಡಿಯೂರಪ್ಪ ಮುನಿಸಿಕೊಂಡು ಚುನಾವಣಾ ಪ್ರಚಾರಕ್ಕೆ ಹೋಗದೇ ಇದ್ದರೆ, ನಿಶ್ಚಿತವಾಗಿಯೂ ಚುನಾವಣೆ ಮೇಲೆ ಪ್ರಭಾವ ಬೀರಬಲ್ಲದು. ಈಗಲೂ ಪ್ರಭಾವಿಯಾಗಿರುವುದರಿಂದ ಲಿಂಗಾಯಿತ ಸಮುದಾಯದ ಮತದಾರರು ಬಿಜೆಪಿಗೆ ಕೈಕೊಡುವ ಸಾಧ್ಯತೆ ಇದೆ ಎಂಬ ವ್ಯಾಖ್ಯಾನವೂ ನಡೆದಿದೆ.

ಉಪಚುನಾವಣೆಯಲ್ಲಿ ಪ್ರಚಾರ ನಡೆಸಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವುದಾಗಿ ಯಡಿಯೂರಪ್ಪ ಹೇಳಿದ್ದು, ಅದಕ್ಕಾಗಿ ಸಿದ್ಧತೆಯನ್ನೂ ನಡೆಸಿಕೊಂಡಿದ್ದರು. ದಿಢೀರ್‌ ಬೆಳವಣಿಗೆಯಿಂದ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ. ವಿಜಯೇಂದ್ರ ಒತ್ತಡಕ್ಕೆ ಒಳಗಾಗುವುದು ಸಹಜ.ತಮಗೆ ಆಗಿರುವ ಆಘಾತವನ್ನು ಬಹಿರಂಗಪಡಿಸದೇ ಇರಲು ಯಡಿಯೂರಪ್ಪ ಒಮ್ಮೆ ಕ್ಷೇತ್ರಗಳಲ್ಲಿ ಮುಖ ತೋರಿಸಲು ಹೋಗಬಹುದು. ಆದರೆ, ವಿರೋಧ ಪಕ್ಷಗಳು ಈ ದಾಳಿಯನ್ನು ಚುನಾವಣಾ ಅಸ್ತ್ರವಾಗಿ ಬಳಸುವ ಸಾಧ್ಯತೆ ಇದೆ. ಇದರಿಂದ ಬಿಜೆಪಿಗೆ ಕಠಿಣ ಎನಿಸಿರುವ ಈ ಕ್ಷೇತ್ರಗಳಲ್ಲಿ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಮೂಲಗಳು ಹೇಳಿವೆ.

ADVERTISEMENT

ಈ ಎರಡೂ ಕ್ಷೇತ್ರಗಳ ಉಸ್ತುವಾರಿಗಳ ಪಟ್ಟಿಯಲ್ಲಿ ಆರಂಭದಲ್ಲಿ ಬಿ.ವೈ.ವಿಜಯೇಂದ್ರ ಅವರ ಹೆಸರು ಇರಲಿಲ್ಲ. ಆದರೆ, ಅವರ ಬೆಂಬಲಿಗರಿಂದ ಟೀಕೆಗಳು ಕೇಳಿ ಬಂದಿದ್ದರಿಂದ ಬಳಿಕ ಹೆಸರು ಸೇರಿಸಲಾಗಿತ್ತು. ಚುನಾವಣಾ ಪ್ರಚಾರದ ಪಟ್ಟಿ ಸಿದ್ಧವಾಗ ಬೇಕಿದೆ. ಅದರಲ್ಲಿ ಬಿಎಸ್‌ವೈ ಅವರ ಹೆಸರಿಲ್ಲದಿದ್ದರೆ ಅವರು ಪ್ರಚಾರಕ್ಕೆ ಹೋಗುವ ಸಾಧ್ಯತೆ ಕಡಿಮೆ ಎಂದೂ ತಿಳಿಸಿವೆ.

ಉಪಚುನಾವಣಾ ಪ್ರಚಾರ ಸಮಯದ ನಿರ್ಬಂಧ

ಸಿಂದಗಿ ಮತ್ತು ಹಾನಗಲ್‌ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಪ್ರಚಾರದ ಸಮಯವನ್ನು ಕೋವಿಡ್‌ ಕಾರಣದಿಂದಾಗಿ ರಾತ್ರಿ 7 ರಿಂದ ಬೆಳಿಗ್ಗೆ 10 ಗಂಟೆಯವರೆಗೆ ನಿರ್ಬಂಧಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಅಲ್ಲದೆ, ಮತಎಣಿಕೆಯ ದಿನ ಎಣಿಕೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಚುನಾವಣಾ ಅಧಿಕಾರಿಗಳು, ಸಿಬ್ಬಂದಿ ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಎರಡು ಡೋಸ್‌ ಕೋವಿಡ್‌ ಲಸಿಕೆಯನ್ನು ಪಡೆದಿರಬೇಕು ಎಂದು ತಿಳಿಸಿದೆ. ಒಂದು ಡೋಸ್‌ ಲಸಿಕೆ ಪಡೆದವರು ಮತ ಎಣಿಕೆಯ ದಿನಕ್ಕೆ 72 ಗಂಟೆ ಮುಂಚಿತವಾಗಿ ಆರ್‌ಟಿಪಿಸಿಆರ್‌ ಪ್ರಮಾಣ ಪತ್ರ ಪಡೆಯಬೇಕು. ಒಂದೂ ಡೋಸ್‌ ಲಸಿಕೆ ಪಡೆಯದವರು 48 ಗಂಟೆಯೊಳಗಿನ ಆರ್‌ಟಿಪಿಸಿಆರ್‌ ಪ್ರಮಾಣಪತ್ರವನ್ನು ಸಂಬಂಧಿಸಿದ ಮತ ಎಣಿಕೆ ಕೇಂದ್ರದ ಅಧಿಕಾರಿಗೆ ಸಲ್ಲಿಸಬೇಕು ಎಂದು ಆಯೋಗ ತಿಳಿಸಿದೆ.

ಉಪಚುನಾವಣೆಯಲ್ಲಿ ಅಭ್ಯರ್ಥಿಗಳ ಚುನಾವಣಾ ಒಟ್ಟು ಖರ್ಚನ್ನು ₹ 30.80 ಲಕ್ಷಕ್ಕೆ ಮಿತಿಗೊಳಿಸಲಾಗಿದೆ ಎಂದೂ ಆಯೋಗ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.