ADVERTISEMENT

ವಿಜಯೇಂದ್ರ ಸಹಪಾಠಿ ಸೇರಿ ಹಲವರ ಮನೆಗಳಲ್ಲಿ ಶೋಧ: ಅಪಾರ ದಾಖಲೆಗಳ ವಶ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 22:24 IST
Last Updated 8 ಅಕ್ಟೋಬರ್ 2021, 22:24 IST
ವಿಜಯೇಂದ್ರ
ವಿಜಯೇಂದ್ರ   

ಬೆಂಗಳೂರು: ಸರ್ಕಾರಿ ಕಾಮಗಾರಿಗಳ ಭ್ರಷ್ಟಾಚಾರ, ತೆರಿಗೆ ವಂಚನೆ ಮತ್ತು ಅಕ್ರಮ ಹಣದ ವಹಿವಾಟು ಕುರಿತು ಶುಕ್ರವಾರವೂ ಶೋಧ ಮುಂದುವರಿಸಿರುವ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು, ಮುಖ್ಯಮಂತ್ರಿ ಸಚಿವಾಲಯ ಸಿಬ್ಬಂದಿಯಾಗಿದ್ದ ಆಯನೂರು ಉಮೇಶ್‌ ನಿವಾಸದಿಂದ ಜಲ ಸಂಪನ್ಮೂಲ ಇಲಾಖೆಯ ಅಧೀನದ ನೀರಾವರಿ ನಿಗಮಗಳ ಕಾಮಗಾರಿಗಳ ಟೆಂಡರ್‌ಗಳಿಗೆ ಸಂಬಂಧಿಸಿದ ಅಪಾರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ ಕುಟುಂಬದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಉಮೇಶ್‌, ದೀರ್ಘಕಾಲದಿಂದ ಮುಖ್ಯಮಂತ್ರಿಯವರ ಸಚಿವಾಲಯದಲ್ಲಿ ನಿಯೋಜನೆ ಮೇಲೆ ಕೆಲಸ ಮಾಡುತ್ತಿದ್ದರು.

ಬಿ.ವೈ. ವಿಜಯೇಂದ್ರ ಸೂಚನೆಯಂತೆ ಸರ್ಕಾರದ ಪ್ರಮುಖ ಇಲಾಖೆಗಳ ಟೆಂಡರ್‌ ಪ್ರಕ್ರಿಯೆ, ಬಿಲ್‌ ಪಾವತಿಯಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದ ಆರೋಪವಿದೆ. ಈ ಸಂದರ್ಭದಲ್ಲಿ ಹಣದ ಅಕ್ರಮ ವಹಿವಾಟು ನಡೆಸಿರುವ ದೂರನ್ನು ಆಧರಿಸಿ ಐ.ಟಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ADVERTISEMENT

ಉಮೇಶ್‌, ಅವರ ನಿಕಟವರ್ತಿಗಳು, 31 ಗುತ್ತಿಗೆದಾರರು ಮತ್ತು ಲೆಕ್ಕಪರಿಶೋಧಕರ ಮೇಲೆ ಗುರುವಾರ ಐ.ಟಿ ದಾಳಿ ನಡೆದಿತ್ತು. ಶುಕ್ರವಾರವೂ ಕಾರ್ಯಾಚರಣೆ ಮುಂದುವರಿದಿದ್ದು, ರಾಜ್ಯದ ಹಲವೆಡೆ ಶೋಧ ನಡೆಸಲಾಗಿದೆ. ಗುತ್ತಿಗೆದಾರರನ್ನು ಮನೆಗೆ ಕರೆಸಿಕೊಂಡು ‘ವ್ಯವಹಾರ’ ನಡೆಸುತ್ತಿದ್ದ ಆರೋಪದ ಕುರಿತು ಐ.ಟಿ ಅಧಿಕಾರಿಗಳು ಉಮೇಶ್‌ ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜಾಜಿನಗರ ಭಾಷ್ಯಂ ವೃತ್ತದಲ್ಲಿರುವ ಉಮೇಶ್‌ ಮನೆಯಿಂದ ಗುರುವಾರ ಎರಡು ಮೂಟೆಗಳಿಗೂ ಹೆಚ್ಚು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಶುಕ್ರವಾರವೂ ಶೋಧ ಮುಂದುವರಿಸಿದ ತನಿಖಾ ತಂಡ, ಮತ್ತಷ್ಟು ದಾಖಲೆಗಳನ್ನು ವಶಕ್ಕೆ ಪಡೆದಿದೆ. ಕೃಷ್ಣ ಭಾಗ್ಯ ಜಲ ನಿಗಮ, ಕಾವೇರಿ ನೀರಾವರಿ ನಿಗಮ, ವಿಶ್ವೇಶ್ವರಯ್ಯ ಜಲ ನಿಗಮಗಳ ಕಾಮಗಾರಿಗಳಿಗೆ ಸಂಬಂಧಿಸಿದ ಟೆಂಡರ್‌ ಪ್ರಕ್ರಿಯೆ ನೂರಾರು ಕಡತಗಳನ್ನು ವಶಕ್ಕೆ ಪಡೆಯ
ಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮತ್ತಷ್ಟು ಕಡೆ ದಾಳಿ: ಯಡಿಯೂರಪ್ಪ ಅವರ ಮಗ ಬಿ.ವೈ. ವಿಜಯೇಂದ್ರ ಅವರ ಸಹಪಾಠಿ ಅರವಿಂದ್‌ ಮನೆಯ ಮೇಲೆ ಶುಕ್ರವಾರ ದಾಳಿ ಮಾಡಿದ ಆದಾಯ ತೆರಿಗೆ ಅಧಿಕಾರಿಗಳು ಇಡೀ ದಿನ ಶೋಧ ನಡೆಸಿದರು. ಅರವಿಂದ್‌ ವಿದೇಶ ಪ್ರವಾಸದಲ್ಲಿದ್ದು, ತನಿಖಾ ತಂಡದ ಎದುರು ಹಾಜರಾಗುವಂತೆ ಸೂಚಿಸಲಾಗಿದೆ.

ಗುತ್ತಿಗೆದಾರ ಡಿ.ವೈ. ಉಪ್ಪಾರ್‌ ಅವರ ಸದಾಶಿವನಗರದ ಮನೆ ಹಾಗೂ ಕಚೇರಿಯಲ್ಲಿ ಎರಡನೇ ದಿನವೂ ಶೋಧ ನಡೆದಿದೆ. ಸಹಕಾರ ನಗರದ ರಾಹುಲ್‌ ಎಂಟರ್‌ಪ್ರೈಸಸ್‌ನಲ್ಲಿ ಗುರುವಾರ ತಡರಾತ್ರಿಯವರೆಗೂ ಶೋಧ ನಡೆಸಿದ್ದ ಐ.ಟಿ ಅಧಿಕಾರಿಗಳು, ಬಾಗಿಲಿಗೆ ಬೀಗ ಹಾಕಿಕೊಂಡು ತೆರಳಿದ್ದರು. ಶುಕ್ರವಾರ ಬೆಳಿಗ್ಗೆಯಿಂದ ಪುನಃ ತಪಾಸಣೆ ನಡೆಸಿದ್ದು, ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ವಿದ್ಯಾರಣ್ಯಪುರದಲ್ಲಿರುವ ಲೆಕ್ಕಪರಿಶೋಧಕ ಲಕ್ಷ್ಮೀಕಾಂತ್‌ ಮನೆ, ತುಮಕೂರಿನ ಸಿಂಗರೇಹಳ್ಳಿಯಲ್ಲಿರುವ ಶಂಕರನಾರಾಯಣ ಕನ್‌ಸ್ಟ್ರಕ್ಷನ್‌ನ ಎತ್ತಿನಹೊಳೆ ಕಾಮಗಾರಿ ನಿರ್ವಹಣಾ ಕಚೇರಿಯ ಮೇಲೂ ದಾಳಿಮಾಡಿದ ತನಿಖಾ ತಂಡ, ಶೋಧ ನಡೆಸಿದೆ.

ಶೋಧದಲ್ಲಿ ಪತ್ತೆಯಾದ ಸುಳಿವು

*ಮುಖ್ಯಮಂತ್ರಿ ಸಚಿವಾಲಯದ ಸಿಬ್ಬಂದಿಯಾದಉಮೇಶ್‌ ನೀರಾವರಿ ನಿಗಮಗಳ ಆಡಳಿತ ಮಂಡಳಿ ಸಭೆಗಳಲ್ಲಿ ಭಾಗಿ

*ಕಾಮಗಾರಿಗಳ ಕಾರ್ಯಾದೇಶ ನೀಡುವ ಮೊದಲೇ ಗುತ್ತಿಗೆದಾರರಿಗೆ ಮುಂಗಡ ಹಣ ಬಿಡುಗಡೆ

* ಹಳೆಯ ದಿನಾಂಕಕ್ಕೆ ಕಾರ್ಯಾದೇಶ ಹೊರಡಿಸಿದಂತೆ ದಾಖಲೆಗಳ ಸೃಷ್ಟಿ

* ಕಾಮಗಾರಿ ಮುಗಿಯುವ ಮೊದಲೇ ಪೂರ್ಣ ಬಿಲ್‌ ಪಾವತಿ

* ಕಳಪೆ ಕಾಮಗಾರಿಗೆ ಅವಕಾಶ

* ಶೇಕಡ 75ರಷ್ಟೇ ಕೆಲಸವಾಗಿದ್ದರೂ ಪೂರ್ಣ ಬಿಲ್‌ ಪಾವತಿ

ಮುಖ್ಯಮಂತ್ರಿ ಸಚಿವಾಲಯದಿಂದ ವಾಪಸ್‌

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪುಟ್ಟೇನಹಳ್ಳಿ ಡಿಪೋದ ಚಾಲಕ ಕಂ ನಿರ್ವಾಹಕರಾದ ಎಂ.ಆರ್‌. ಉಮೇಶ್‌ ಹಲವು ಮುಖ್ಯಮಂತ್ರಿಯವರ ಸಚಿವಾಲಯದಲ್ಲಿ ಅನ್ಯ ಕಾರ್ಯನಿಮಿತ್ತ ನಿಯೋಜನೆ (ಒಒಡಿ) ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆದ ಬಳಿಕ ಅವರ ನಿಯೋಜನೆಯನ್ನು ಹಿಂಪಡೆಯಲಾಗಿದೆ. ಬಿಎಂಟಿಸಿಯ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಗುರುವಾರ ಸಂಜೆ ಆದೇಶ ಹೊರಡಿಸಿದ್ದಾರೆ. ತಕ್ಷಣವೇ ಅವರನ್ನು ಮುಖ್ಯಮಂತ್ರಿಯವರ ಸಚಿವಾಲಯದಿಂದ ಬಿಡುಗಡೆ ಮಾಡಲಾಗಿದೆ.

ವಾಟ್ಸ್‌ ಆ್ಯಪ್‌ ಸಂಭಾಷಣೆ ಸಂಗ್ರಹ

ಉಮೇಶ್‌ ಜಲ ಸಂಪನ್ಮೂಲ, ಲೋಕೋಪಯೋಗಿ ಇಲಾಖೆ ಮತ್ತು ಮುಖ್ಯಮಂತ್ರಿ ಸಚಿವಾಲಯದ ಕೆಲವು ಹಿರಿಯ ಅಧಿಕಾರಿಗಳ ಜತೆ ನಡೆಸಿರುವ ವಾಟ್ಸ್‌ ಆ್ಯಪ್‌ ಸಂಭಾಷಣೆಯ ಮಾಹಿತಿಯನ್ನು ಐ.ಟಿ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಸುಮಾರು 1,300 ಪುಟಗಳಷ್ಟು ಸಂಭಾಷಣೆಯ ಮುದ್ರಿತ ಪ್ರತಿಯನ್ನು ಕಲೆಹಾಕಿರುವ ಅಧಿಕಾರಿಗಳು, ಈ ಕುರಿತು ಪ್ರಶ್ನಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

₹20 ಸಾವಿರ ಕೋಟಿ ಮೊತ್ತದ ಕಾಮಗಾರಿ ದಾಖಲೆ ಪರಿಶೀಲನೆ

2019ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಜಲ ಸಂಪನ್ಮೂಲ, ಲೋಕೋಪಯೋಗಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ನಡೆದಿರುವ ಒಟ್ಟಾರೆ ₹ 20,000 ಕೋಟಿ ವೆಚ್ಚದ ಕಾಮಗಾರಿಗಳನ್ನು ಐ.ಟಿ ದಾಳಿಗೊಳಗಾದ 31 ಗುತ್ತಿಗೆದಾರರೇ ನಿರ್ವಹಿಸಿದ್ದಾರೆ. ಈ ಸಂದರ್ಭದಲ್ಲಿ ನಡೆದಿರುವ ತೆರಿಗೆ ವಂಚನೆ, ಭ್ರಷ್ಟಾಚಾರ ಮತ್ತು ಹಣದ ಅಕ್ರಮ ವಹಿವಾಟಿನ ಕುರಿತು ತನಿಖೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.

ಮಲಪ್ರಭಾ ಮತ್ತು ಘಟಪ್ರಭಾ ಕಾಲುವೆಗಳು, ನಾರಾಯಣಪುರ ಬಲದಂಡೆ ಕಾಲುವೆ, ಕೆ.ಆರ್‌.ಎಸ್‌. ಕಾಲುವೆಗಳು, ಹೇಮಾವತಿ ಕಾಲುವೆಗಳ ಆಧುನೀಕರಣ, ಕಾಲುವೆಗಳ ಮರುವಿನ್ಯಾಸ, ಹೆದ್ದಾರಿ ಕಾಮಗಾರಿಗಳು, ಬೀದರ್‌ ವಿಮಾನ ನಿಲ್ದಾಣ ಕಾಮಗಾರಿ, ಪ್ರಧಾನಮಂತ್ರಿ ಗ್ರಾಮ ಸಡಕ್‌ ಮತ್ತು ಗ್ರಾಮೀಣ ಕುಡಿಯುವ ನೀರು ಕಾಮಗಾರಿಗಳನ್ನು ನಿರ್ದಿಷ್ಟ ಗುತ್ತಿಗೆದಾರರಿಗೇ ವಹಿಸಿರುವ ಕುರಿತು ಆದಾಯ ತೆರಿಗೆ ಇಲಾಖೆ ತನಿಖೆ ನಡೆಸುತ್ತಿದೆ ಎಂಬ ಮಾಹಿತಿ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.