ADVERTISEMENT

Iphone| ಬೆಂಗಳೂರಿಗೆ ಐಫೋನ್‌ ಕಂಪನಿ: 1 ಲಕ್ಷ ಉದ್ಯೋಗ ಸೃಷ್ಟಿಯ ನಿರೀಕ್ಷೆ

1 ಲಕ್ಷ ಉದ್ಯೋಗ ಸೃಷ್ಟಿಯ ನಿರೀಕ್ಷೆ l ರಾಜ್ಯ ಸರ್ಕಾರದ ಜತೆ ಒಪ್ಪಂದಕ್ಕೆ ಸಹಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 2:15 IST
Last Updated 4 ಮಾರ್ಚ್ 2023, 2:15 IST
ತೈವಾನ್‌ನ ಫಾಕ್ಸ್‌ಕಾನ್‌ ಅಧ್ಯಕ್ಷ ಯಂಗ್‌ ಲಿಯು ಅವರು ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸ್ಮರಣಿಕೆ ನೀಡಿದರು
ತೈವಾನ್‌ನ ಫಾಕ್ಸ್‌ಕಾನ್‌ ಅಧ್ಯಕ್ಷ ಯಂಗ್‌ ಲಿಯು ಅವರು ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸ್ಮರಣಿಕೆ ನೀಡಿದರು   

ಬೆಂಗಳೂರು: ಆ್ಯಪಲ್‌ ಐಫೋನ್‌ಗಳ ಉತ್ಪಾದನೆ ರಾಜ್ಯದಲ್ಲಿ ಶೀಘ್ರವೇ ಆರಂಭಗೊಳ್ಳಲಿದ್ದು, ಇದರಿಂದ ಸುಮಾರು ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಆ್ಯಪಲ್‌ ಐಫೋನ್‌ ಸೇರಿದಂತೆ ಇತರ ಹಲವು ಎಲೆಕ್ರ್ಟಾನಿಕ್‌ ಸಾಧನಗಳ ತಯಾರಿಕಾ ಕಂಪನಿ ಹಾಯ್‌ ಟೆಕ್ನಾಲಜಿ ಗ್ರೂಪ್‌ (ಫಾಕ್ಸ್‌ಕಾನ್‌) ಕಂಪನಿಯು ರಾಜ್ಯದಲ್ಲಿ ಗಣನೀಯ ಪ್ರಮಾಣದ ಬಂಡವಾಳ ಹೂಡಿಕೆ ಮಾಡುವ ಸಂಬಂಧ ಮುಖ್ಯಮಂತ್ರಿ ಬೊಮ್ಮಾಯಿ ಸಮ್ಮುಖದಲ್ಲಿ ಶುಕ್ರವಾರ ಒಪ್ಪಂದಕ್ಕೆ ಸಹಿ ಹಾಕಲಾಯಿತು.

‘ಈ ಉದ್ಯಮ ಸ್ಥಾಪನೆಗಾಗಿ ಬೆಂಗಳೂರು ವಿಮಾನ ನಿಲ್ದಾಣದ ಸಮೀಪ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲ್ಲೂಕುಗಳಲ್ಲಿ 300 ಎಕರೆ ಭೂಮಿ ಗುರುತಿಸಲಾಗಿದೆ. ರಾಜ್ಯ ಸರ್ಕಾರವು ಫಾಕ್ಸ್‌ಕಾನ್‌ಗೆ ಎಲ್ಲ ರೀತಿಯ ಸಹಕಾರ ನೀಡಲಿದೆ. ಅತ್ಯಾಧುನಿಕ ತಂತ್ರಜ್ಞಾನಗಳ ಪರಿಣತಿಗೆ ಹೆಸರಾದ ಕಂಪನಿ ಫಾಕ್ಸ್‌ಕಾನ್‌ ರಾಜ್ಯದಲ್ಲಿ ಹೂಡಿಕೆ ಮಾಡುತ್ತಿರುವುದು ಸಂತಸ ತಂದಿದೆ’ ಎಂದು ಬೊಮ್ಮಾಯಿ ತಿಳಿಸಿದರು.

ADVERTISEMENT

ಫಾಕ್ಸ್‌ಕಾನ್‌ ಸಮೂಹದ ಸಿಇಒ ಮತ್ತು ಅಧ್ಯಕ್ಷ ಯಂಗ್‌ ಲಿಯು ನೇತೃತ್ವದ ಉನ್ನತ ಮಟ್ಟದ ನಿಯೋಗವು ಮುಖ್ಯಮಂತ್ರಿಯವರ ಜತೆ ಹೂಡಿಕೆ ಸಂಬಂಧ ಸಮಾಲೋಚನೆ ನಡೆಸಿತು. ಫಾಕ್ಸ್‌ಕಾನ್‌ ಹೊಸ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಸುಮಾರು ₹5,700 ಕೋಟಿ ಹೂಡಿಕೆ ಮಾಡಲಿದೆ.

ಯಂಗ್‌ ಲಿಯು ನೇತೃತ್ವದ ನಿಯೋಗವು ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹಾಗೂ ಐಟಿ–ಬಿಟಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರನ್ನು ಬೆಳಿಗ್ಗೆ ಭೇಟಿ ಮಾಡಿತು. ಬಳಿಕ, ದೊಡ್ಡಬಳ್ಳಾಪುರದಲ್ಲಿರುವ ಕೆಐಎಡಿಬಿಯ 300 ಎಕರೆ ಕೈಗಾರಿಕಾ ಪ್ರದೇಶವನ್ನೂ ವೀಕ್ಷಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.