ADVERTISEMENT

ಬಿಎಸ್‌ವೈ ಸುತ್ತ ಐಟಿ ಬಲೆ: ವಿಜಯೇಂದ್ರ ಆಪ್ತ ಉಮೇಶ್ ಮನೆಯಿಂದ ದಾಖಲೆ ವಶ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 21:41 IST
Last Updated 7 ಅಕ್ಟೋಬರ್ 2021, 21:41 IST
ಬಿ.ಎಸ್‌. ಯಡಿಯೂರಪ್ಪ
ಬಿ.ಎಸ್‌. ಯಡಿಯೂರಪ್ಪ    

ಬೆಂಗಳೂರು: ಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ, ಮುಖ್ಯಮಂತ್ರಿ ಸಚಿವಾಲಯದ ಸಿಬ್ಬಂದಿಯೂ ಆಗಿರುವ ಆಯನೂರು ಉಮೇಶ್, 31 ಗುತ್ತಿಗೆದಾರರು ಹಾಗೂ ಐವರು ಲೆಕ್ಕ ಪರಿಶೋಧಕರ ಕಚೇರಿ, ಮನೆ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ (ಐ.ಟಿ) ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಲ ಸಂಪನ್ಮೂಲ ಮತ್ತು ಲೋಕೋಪಯೋಗಿ ಇಲಾಖೆಗಳ ಬೃಹತ್‌ ಕಾಮಗಾರಿಗಳ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ತೆರಿಗೆ ವಂಚನೆ, ಅಕ್ರಮ ಹಣದ ವಹಿವಾಟು ನಡೆಸಿರುವ ಆರೋಪದ ಮೇಲೆ ಐ.ಟಿ ಇಲಾಖೆ ತನಿಖೆ ಆರಂಭಿಸಿದೆ. ಗುರುವಾರ ನಸುಕಿನಲ್ಲಿ ಕಾರ್ಯಾಚರಣೆ ಆರಂಭಿಸಿದ್ದ ಐ.ಟಿ ಇಲಾಖೆಯ ಬೆಂಗಳೂರು ಮತ್ತು ಗೋವಾ ಇಲಾಖೆಯ ಅಧಿಕಾರಿಗಳು, ತಡರಾತ್ರಿಯವರೆಗೂ ಶೋಧ ಮುಂದುವರಿಸಿದ್ದರು.

ಬೆಂಗಳೂರು ನಗರ, ಬೀದರ್‌, ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಐ.ಟಿ. ಅಧಿಕಾರಿಗಳಿಂದ ಶೋಧ ನಡೆದಿದೆ.

ADVERTISEMENT

ದಾಳಿಗೊಳಗಾಗಿರುವ ಗುತ್ತಿಗೆದಾರರ ಪೈಕಿ ಹಲವರು ಯಡಿಯೂರಪ್ಪ ಅವರ ಮಗ ಬಿ.ವೈ. ವಿಜಯೇಂದ್ರ ಮತ್ತು ಕೆಲವು ಸಚಿವರಿಗೆ ನಿಕಟವರ್ತಿಗಳು. ಉಮೇಶ್‌, ಅರವಿಂದ್‌, ಪ್ರಸನ್ನ ಸೇರಿದಂತೆ ಯಡಿಯೂರಪ್ಪ ಕುಟುಂಬದ ಜತೆ ನಿಕಟವಾಗಿದ್ದ ಹಲವರ ಮನೆ, ಕಚೇರಿಗಳಲ್ಲಿ ಶೋಧ ನಡೆದಿದೆ. 2019ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಜಲ ಸಂಪನ್ಮೂಲ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ನಡೆದಿರುವ ₹ 25 ಕೋಟಿಗಿಂತ ಹೆಚ್ಚು ಮೊತ್ತದ ಕಾಮಗಾರಿಗಳಿಗೆ ಸಂಬಂಧಿಸಿದ ವಹಿವಾಟುಗಳ ಪರಿಶೀಲನೆಗಾಗಿ ಈ ಶೋಧ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೃಹತ್‌ ಕಾಲುವೆಗಳು, ಸೇತುವೆಗಳು, ರಸ್ತೆಗಳ ಕಾಮಗಾರಿಗಳು ಮತ್ತು ಒಂದು ವಿಮಾನ ನಿಲ್ದಾಣ ನಿರ್ಮಾಣದ ಕಾಮಗಾರಿ ಗುತ್ತಿಗೆ ಪಡೆದಿರುವ ವ್ಯಕ್ತಿಗಳನ್ನೇ ಕೇಂದ್ರೀಕರಿಸಿ ಶೋಧ ನಡೆಸಲಾಗಿದೆ. ದಾಳಿಗೊಳಗಾದ ಗುತ್ತಿಗೆದಾರರ ಪೈಕಿ ಕೆಲವರು ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿಗಳಿಗೆ ನಿಕಟವರ್ತಿಗಳಾಗಿದ್ದಾರೆ.

ಉಮೇಶ್‌ ಈ ಕಾಮಗಾರಿಗಳ ಗುತ್ತಿಗೆ ಪಡೆಯಲು ಗುತ್ತಿಗೆದಾರರು ಮತ್ತು ಅವರ ನಿಕಟವರ್ತಿಗಳಿಗೆ ನೆರವಾಗಿರುವ ಆರೋಪದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಉಮೇಶ್‌ ದಾಳಿಯ ಕೇಂದ್ರ: ಐ.ಟಿ ಅಧಿಕಾರಿಗಳ ಕಾರ್ಯಾಚರಣೆಯು ನಿಯೋಜನೆ ಮೇರೆಗೆ ಮುಖ್ಯಮಂತ್ರಿ ಸಚಿವಾಲಯದಲ್ಲಿ ಕೆಲಸ ಮಾಡುತ್ತಿರುವ ಬಿಎಂಟಿಸಿ ಚಾಲಕ ಕಂ ನಿರ್ವಾಹಕ ಉಮೇಶ್‌ ಸುತ್ತವೇ ಕೇಂದ್ರೀಕರಿಸಿತ್ತು. ರಾಜಾಜಿನಗರದ ಭಾಷ್ಯಂ ವೃತ್ತದಲ್ಲಿರುವ ಅವರ ಬಾಡಿಗೆ ಮನೆ, ನಾಗಸಂದ್ರದಲ್ಲಿರುವ ಉಮೇಶ್‌ ಮನೆ ‘ಧವಳಗಿರಿ’, ಅವರೊಂದಿಗೆ ನಿಕಟವಾಗಿದ್ದ ಅರವಿಂದ್‌ ನೆಲೆಸಿರುವ ಎಂಬೆಸಿ ಅಪಾರ್ಟ್‌ಮೆಂಟ್‌, ಪ್ರಸನ್ನ ಅವರ ಮನೆಗಳಲ್ಲಿ ಶೋಧ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದೀರ್ಘಕಾಲದಿಂದ ಉಮೇಶ್‌, ಯಡಿಯೂರಪ್ಪ ಆಪ್ತ ಸಹಾಯಕನ ಹುದ್ದೆಯಲ್ಲಿದ್ದರು.

ಜಲ ಸಂಪನ್ಮೂಲ, ಲೋಕೋಪಯೋಗಿ ಸೇರಿದಂತೆ ಪ್ರಮುಖ ಇಲಾಖೆಗಳ ಮೇಲೆ ಹಿಡಿತ ಸಾಧಿಸಿದ್ದರು. ಬೃಹತ್‌ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ, ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸಿಕೊಳ್ಳುತ್ತಿದ್ದ
ದೂರುಗಳಿದ್ದವು.

ಮುಖ್ಯಮಂತ್ರಿ ಸಚಿವಾಲಯದ ಸಿಬ್ಬಂದಿಯಾಗಿದ್ದರೂ ವಿಜಯೇಂದ್ರ ಅವರ ಪ್ರತಿನಿಧಿಯಾಗಿ ಸರ್ಕಾರಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಜತೆ ಉಮೇಶ್‌ ವ್ಯವಹರಿಸುತ್ತಿದ್ದರು ಎಂಬ ದೂರುಗಳಿದ್ದವು. ಈ ಕಾರಣಕ್ಕಾಗಿಯೇ ಅವರ ಮೇಲೆ ದಾಳಿ ನಡೆದಿದೆ ಎಂಬ ಮಾಹಿತಿ ಲಭಿಸಿದೆ.

ಉಮೇಶ್‌ ಮನೆಯಿಂದ ಎರಡು ಮೂಟೆ ಮತ್ತು ಒಂದು ಸೂಟ್‌ಕೇಸ್‌ಗಳಷ್ಟು ದಾಖಲೆಗಳನ್ನು ಐ.ಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಗುತ್ತಿಗೆದಾರರ ಜತೆಗಿನ ಒಡನಾಟ, ಸರ್ಕಾರದ ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳು, ಆಸ್ತಿ ಒಡೆತನಕ್ಕೆ ಸಂಬಂಧಿಸಿದ ದಾಖಲೆಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ. ಮನೆಯಲ್ಲೇ ಅವರನ್ನು ವಿಚಾರಣೆ ನಡೆಸಿದ ಅಧಿಕಾರಿಗಳು, ಕೆಲವು ಮಾಹಿತಿ ಸಂಗ್ರಹಿಸಿದ್ದಾರೆ.

ಅರವಿಂದ್‌ ಮತ್ತು ಪ್ರಸನ್ನ ಕೂಡ ಯಡಿಯೂರಪ್ಪ ಕುಟುಂಬದ ಆಪ್ತ ವಲಯದಲ್ಲಿದ್ದರು. ಈ ಇಬ್ಬರ ಮನೆಗಳಲ್ಲೂ ಶೋಧ ನಡೆದಿದ್ದು, ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂಜೆಯ ವೇಳೆಗೆ ಅರವಿಂದ್‌ ಅವರನ್ನು ವಶಕ್ಕೆ ಪಡೆದ ಅಧಿಕಾರಿಗಳು, ವಿಚಾರಣೆಗಾಗಿ ಕರೆದೊಯ್ದಿದ್ದಾರೆ.

ಜಲ ಸಂಪನ್ಮೂಲ ಇಲಾಖೆಯ ಅಧೀನದಲ್ಲಿರುವ ಕೃಷ್ಣ ಭಾಗ್ಯ ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ ಮತ್ತು ವಿಶ್ವೇಶ್ವರಯ್ಯ ನೀರಾವರಿ ನಿಗಮದಲ್ಲಿ ಬೃಹತ್‌ ಮೊತ್ತದ ಕಾಮಗಾರಿಗಳ ಗುತ್ತಿಗೆ ಪಡೆದಿರುವವರನ್ನೇ ಗುರಿಯಾಗಿಸಿ ದಾಳಿ ನಡೆದಿದೆ. ಗುತ್ತಿಗೆದಾರರ ಮನೆ, ಕಚೇರಿಗಳು ಮತ್ತು ಅವರ ಜತೆ ವ್ಯಾವಹಾರಿಕ ನಂಟು ಹೊಂದಿರುವ ವ್ಯಕ್ತಿಗಳ ಮನೆ, ಕಚೇರಿಗಳಲ್ಲಿ ಶೋಧ ನಡೆದಿದೆ.

ಬೃಹತ್‌ ಕಾಮಗಾರಿಗಳಿಗೆ ಸಿಮೆಂಟ್‌, ಕಬ್ಬಿಣ ಮತ್ತಿತರ ಸಾಮಗ್ರಿಗಳ ಸಗಟು ಪೂರೈಕೆ ಮಾಡುವ ಬೆಂಗಳೂರಿನ ಸಹಕಾರ ನಗರದ ರಾಹುಲ್‌ ಎಂಟರ್‌ಪ್ರೈಸಸ್‌ ಮೇಲೂ ದಾಳಿ ನಡೆಸಲಾಗಿದೆ. ತಡ ರಾತ್ರಿಯವರೆಗೂ ಶೋಧ ನಡೆಸಿದ್ದು, ಬೃಹತ್‌ ಪ್ರಮಾಣದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಎಂಜಿನಿಯರ್‌ಗೆ ಹಂಚಿಕೆಯಾಗಿದ್ದ ಕಾರು ಬಳಕೆ

ಉಮೇಶ್ ಅವರು ಸಚಿವಾಲಯದ ಸಾಮಾನ್ಯ ನೌಕರರಾಗಿದ್ದರೂ ಸರ್ಕಾರಿ ಕಾರನ್ನು(ಕೆಎ 37 ಜಿ 0523) ಬಳಸುತ್ತಿದ್ದರು ಎಂದು ಗೊತ್ತಾಗಿದೆ.

ಈ ಕಾರು ಕೆಬಿಜೆಎನ್‌ಎಲ್ ಮುನಿರಾಬಾದ್‌ ವಲಯದ ಕಾರ್ಯನಿರ್ವಾಹಕ ಎಂಜಿನಿಯರ್‌ ಒಬ್ಬರಿಗೆ ಹಂಚಿಕೆಯಾಗಿತ್ತು.
ಅದನ್ನೇ ಉಮೇಶ್‌ ಸ್ವಂತ ಬಳಕೆಗೆ ಇಟ್ಟುಕೊಂಡಿದ್ದರು ಎಂದು ತಿಳಿದುಬಂದಿದೆ.

ಪಂಚನಾಮೆಗೆ ಸಹಿ ಹಾಕಲು ನಿರಾಕರಣೆ

ಉಮೇಶ್‌ ನಿವಾಸದ ಮೇಲೆ ಬೆಳಿಗ್ಗೆ 5 ಗಂಟೆಗೆ ದಾಳಿ ನಡೆಸಿದ್ದ ಐ.ಟಿ ಅಧಿಕಾರಿಗಳು, ಸಂಜೆ 4.15ರ ವೇಳೆಗೆ ಶೋಧ ಕಾರ್ಯಾಚರಣೆ ಪೂರ್ಣಗೊಳಿಸಿದ್ದರು. ಆದರೆ, ವಶಕ್ಕೆ ಪಡೆದ ದಾಖಲೆ, ನಗದು, ಚಿನ್ನಾಭರಣ ಮತ್ತಿತರ ವಿವರಗಳನ್ನು ಒಳಗೊಂಡ ಪಂಚನಾಮೆ ವರದಿಗೆ ಸಹಿ ಮಾಡಲು ಉಮೇಶ್‌ ಒಪ್ಪಲಿಲ್ಲ.

ಅಧಿಕಾರಿಗಳು ಪರಿ ಪರಿಯಾಗಿ ತಿಳಿ ಹೇಳಿದರೂ ಉಮೇಶ್‌ ಮಣಿಯಲಿಲ್ಲ. ಸಹಿ ಹಾಕಲು ನಿರಾಕರಿಸಿದ್ದರಿಂದ ಕಾರ್ಯಾಚರಣೆ ಅಂತ್ಯಗೊಳಿಸುವುದು ವಿಳಂಬವಾಗಿತ್ತು. ಮೂವರು ಅಧಿಕಾರಿಗಳ ತಂಡ ತಡರಾತ್ರಿಯವರೆಗೂ ಉಮೇಶ್‌ ಬಳಿ ಸಹಿ ಪಡೆಯಲು ಪ್ರಯತ್ನ ನಡೆಸಿತ್ತು.

ಉಪ್ಪಾರ್‌ ಸುತ್ತ ತನಿಖೆ

ಡಿ.ವೈ. ಉಪ್ಪಾರ್‌ ಜಲ ಸಂಪನ್ಮೂಲ ಇಲಾಖೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳ ಗುತ್ತಿಗೆ ಪಡೆದಿದ್ದಾರೆ. ಮಳೆಗಾಲದಲ್ಲೂ ಕಾಲುವೆಗಳ ನಿರ್ಮಾಣ, ದುರಸ್ತಿ ಕಾಮಗಾರಿಗಳನ್ನು ನಡೆಸುವಂತೆ ಉಪ್ಪಾರ್‌ ಒಡೆತನದ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿತ್ತು. ದಾಳಿಗೊಳಗಾದ ಹಲವು ಗುತ್ತಿಗೆದಾರರು ಉಪ್ಪಾರ್‌ ನಿಕಟವರ್ತಿಗಳಾಗಿದ್ದು, ಅವರ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿರುವ ಶಂಕೆ ಇದೆ ಎಂದು ಮೂಲಗಳು ತಿಳಿಸಿವೆ.

ದಾಳಿಗೊಳಗಾದ ಕಂಪನಿಗಳು

ಉಪ್ಪಾರ್‌ ಕನ್‌ಸ್ಟ್ರಕ್ಷನ್ಸ್‌

ಶಂಕರನಾರಾಯಣ ಕನ್‌ಸ್ಟ್ರಕ್ಷನ್ಸ್‌

ಶ್ರೀನಿವಾಸ ಕನ್‌ಸ್ಟ್ರಕ್ಷನ್‌

ಸ್ಟಾರ್‌ ಇನ್‌ಫ್ರಾ

ಅಮೃತಾ ಕನ್‌ಸ್ಟ್ರಕ್ಷನ್ಸ್‌

ಪ್ರಮುಖ ಗುತ್ತಿಗೆದಾರರು:

ಡಿ.ವೈ. ಉಪ್ಪಾರ್‌, ಜಿ. ಶಂಕರ್‌,

ಹನುಮಂತ, ಜಯಂತ್‌ ಶೆಟ್ಟಿ, ಸ್ಟಾರ್‌ ಚಂದ್ರು, ವೆಂಕಟೇಶ್ವರ ರಾವ್‌, ಎಂ.ಶ್ರೀನಿವಾಸ (ಕೊಪ್ಪಳ), ಎಸ್‌.ಎಸ್‌. ಆಲೂರು (ವಿಜಯಪುರ),ಗೋಪಾಲ, ರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.