ADVERTISEMENT

5 ವರ್ಷದಲ್ಲಿ ₹5 ಲಕ್ಷ ಕೋಟಿ ಹೂಡಿಕೆ; ರಾಜ್ಯದಲ್ಲಿ 20ಲಕ್ಷ ಜನರಿಗೆ ಉದ್ಯೋಗದ ಗುರಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 14:02 IST
Last Updated 14 ಆಗಸ್ಟ್ 2020, 14:02 IST
ಸಚಿವ ಜಗದೀಶ್‌ ಶೆಟ್ಟರ್‌
ಸಚಿವ ಜಗದೀಶ್‌ ಶೆಟ್ಟರ್‌   

ಗದಗ: ‘ವಿಶೇಷ ಹೂಡಿಕೆ ವಲಯ(ಎಸ್‌ಐಆರ್‌) ಸ್ಥಾಪನೆ ಮೂಲಕ ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಶಕ್ತಿ ತುಂಬಲಾಗುವುದು. ಕೈಗಾರಿಕೆ ಕ್ಷೇತ್ರದಲ್ಲಿ ಹಿಂದುಳಿದಿರುವ ಜಿಲ್ಲೆಗಳನ್ನು ಆದ್ಯತೆಯಾಗಿಟ್ಟುಕೊಂಡು, ಎಸ್‌ಐಆರ್‌ ಮೂಲಕ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದರು.

‘ಗದಗ ಜಿಲ್ಲೆಗೆ ಹೆಚ್ಚೆಚ್ಚು ಕೈಗಾರಿಕೆಗಳು ಬರಬೇಕು. ಆದರೆ, ಆ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳು ತುಂಬ ನಿಧಾನವಾಗಿದೆ. ಇಲ್ಲಿ ಹೊಸದಾಗಿ ಕೈಗಾರಿಕೆ ಸ್ಥಾಪಿಸಲು ಆಸಕ್ತಿ ತೋರುವ ಕೈಗಾರಿಕೋದ್ಯಮಿಗಳಿಗೆ ಎಲ್ಲ ರೀತಿಯ ಅವಕಾಶ ಕಲ್ಪಿಸಿಕೊಡಲಾಗುವುದು’ ಎಂದು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಕೊರೊನಾ ಕಾರಣದಿಂದಾಗಿ ದೇಶದ ಎಲ್ಲ ಕ್ಷೇತ್ರಗಳು ತೊಂದರೆಗೆ ಒಳಗಾಗಿದ್ದವು. ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿವೆ. ಉದ್ಯಮಿಗಳಿಗೆ ಅಚ್ಚುಮೆಚ್ಚಿನ ತಾಣವಾಗಿರುವ ದೇಶದ ನಾಲ್ಕೈದು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ನಮ್ಮ ರಾಜ್ಯ ಉದ್ಯಮ ಸ್ನೇಹಿಯಾಗಿ ಹೆಸರುವಾಸಿಯಾಗಿದೆ’ ಎಂದರು.

ADVERTISEMENT

‘ರಾಜ್ಯದ ಕೈಗಾರಿಕೋದ್ಯಮ ಈವರೆಗೆ ಬೆಂಗಳೂರು ಕೇಂದ್ರಿತವಾಗಿಯೇ ಇತ್ತು. ರಾಜ್ಯದ ಇತರೆ ಜಿಲ್ಲೆಗಳಿಗೂ ಅದನ್ನು ವಿಸ್ತರಿಸುವುದು ನಮ್ಮ ಗುರಿ. ಅದಕ್ಕಾಗಿ ಹೆಚ್ಚಿನ ಸಹಾಯಧನ, ತೆರಿಗೆ ವಿನಾಯಿತಿ ನೀಡಲು ಯೋಚಿಸಿದ್ದೇವೆ. ಇದರಿಂದಾಗಿ ಟೈರ್‌ 2, ಟೈರ್‌ 3 ನಗರಗಳಲ್ಲೂ ಕೈಗಾರಿಕೆಗಳು ಸ್ಥಾಪನೆಯಾಗಲಿವೆ. ಗದಗ ಜಿಲ್ಲೆಗೂ ಹೆಚ್ಚಿನ ಅವಕಾಶಗಳು ಸಿಗಲಿವೆ’ ಎಂದು ಹೇಳಿದರು.

‘ಹೊಸ ಕೈಗಾರಿಕಾ ನೀತಿಯಲ್ಲಿ ಪ್ರಮುಖ ನಿರ್ಧಾರ ಕೈಗೊಂಡಿದ್ದು, ಕೈಗಾರಿಕೆಗಳು ಅತಿ ಕಡಿಮೆ ಇರುವ ಜಿಲ್ಲೆಗಳನ್ನು ಗುರುತಿಸಿ ಅವುಗಳನ್ನು ವಿಶೇಷ ಹೂಡಿಕೆ ವಲಯಗಳನ್ನಾಗಿ ಮಾಡುತ್ತೇವೆ. ಈ ಯೋಜನೆಯಲ್ಲಿ ಮೊದಲು ಬೆಳಗಾವಿ, ಗದಗ, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳನ್ನು ಆಯ್ಕೆ ಮಾಡಿದ್ದೇವೆ. ಬೆಂಗಳೂರು–ಮುಂಬೈ ಇಂಡಸ್ಟ್ರಿಯಲ್‌ ಕಾರಿಡಾರ್‌ ಘೋಷಣೆಯಾಗಿದ್ದು, ಅದರಿಂದಲೂ ರಾಜ್ಯದ ಎಲ್ಲ ಭಾಗಗಳಿಗೆ ಕೈಗಾರಿಕೆಗಳು ಬರಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

‘ಉದ್ಯಮಿಗಳು ಕೈಗಾರಿಕೆ ಸ್ಥಾಪಿಸಲು ಅನುಮತಿ ಪಡೆಯಲು ಈಗ ಹೆಚ್ಚು ಕಷ್ಟ ಪಡಬೇಕಿಲ್ಲ. ಯೋಜನೆಗೆ ಅನುಮೋದನೆ ದೊರೆತ ತಕ್ಷಣ ಕೈಗಾರಿಕೆ ಆರಂಭಿಸಬಹುದು. ಉಳಿದ ಕಾನೂನು ಪ್ರಕ್ರಿಯೆಗಳನ್ನು ಪೂರೈಸಲು ಮೂರು ವರ್ಷಗಳ ಕಾಲಾವಕಾಶವಿರುತ್ತದೆ ಎಂದರು.

‘ಗದುಗಿನಲ್ಲಿ ಇನ್ನೂ ಹೆಚ್ಚಿನ ಕೈಗಾರಿಕೆಗಳು ಬರಬೇಕು ಎಂಬುದು ನನ್ನ ಆಶಯ. ಈ ನಿಟ್ಟಿನಲ್ಲಿ ಚೇಂಬರ್‌ ಆಫ್‌ ಕಾಮರ್ಸ್‌ ಹಾಗೂ ಕೈಗಾರಿಕೋದ್ಯಮಿಗಳು ಕೈ ಜೋಡಿಸಿದ್ದಾರೆ. ಎಸ್‌ಐಆರ್‌ ಮೂಲಕ ಜಿಲ್ಲೆಗೆ ಹೆಚ್ಚು ಹೂಡಿಕೆಯಾಗುವ ಸಾಧ್ಯತೆಗಳಿವೆ. ಉದ್ಯಮ ಸ್ಥಾಪಿಸಲು ಆಸಕ್ತಿ ತೋರಿಸುವ ಉದ್ಯಮಿಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಶೀಘ್ರವಾಗಿ ದೊರಕಿಸಿಕೊಡಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

‘ಕೈಗಾರಿಕಾ ಕ್ಷೇತ್ರದಲ್ಲಿ ನಂ.1 ಆಗುವ ಗುರಿ’
‘ಕೈಗಾರಿಕೋದ್ಯಮ ಕ್ಷೇತ್ರದಲ್ಲಿ ಕರ್ನಾಟಕವನ್ನು ನಂಬರ್‌ ಒನ್‌ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಹೊಸ ಕೈಗಾರಿಕಾ ನೀತಿ ಪರಿಚಯಿಸಿದ್ದು, ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ₹5 ಲಕ್ಷ ಕೋಟಿ ಹೂಡಿಕೆ ಆಗುವಂತೆ ನೋಡಿಕೊಳ್ಳುವುದು ಹಾಗೂ 20 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ಗುರಿ ಇಟ್ಟುಕೊಂಡಿದ್ದೇವೆ. ಕೈಗಾರಿಕಾ ಕ್ಷೇತ್ರದ ಜಿಡಿಪಿ ಯಾವಾಗಲೂ ಶೇ 10 ಇದೆ. ಅದನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗುವುದು ನಮ್ಮ ಧ್ಯೇಯ’ ಎಂದು ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.