ADVERTISEMENT

ಕೋವಿಡ್‌-19 | ಎಲ್ಲರಿಗೂ ‘ಬೂಸ್ಟರ್’ ಬೇಡ: ಜಯದೇವ ಹೃದ್ರೋಗ ಸಂಸ್ಥೆ ಅಧ್ಯಯನ

ಎರಡು ಡೋಸ್‌ ಪಡೆದ 6 ತಿಂಗಳಿಗೆ ಉತ್ತಮ ಪ್ರತಿಕಾಯ: ಜಯದೇವ ಹೃದ್ರೋಗ ಸಂಸ್ಥೆ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 19:19 IST
Last Updated 24 ಸೆಪ್ಟೆಂಬರ್ 2021, 19:19 IST
ಡಾ.ಸಿ.ಎನ್. ಮಂಜುನಾಥ್
ಡಾ.ಸಿ.ಎನ್. ಮಂಜುನಾಥ್   

ಬೆಂಗಳೂರು: ಕೋವಿಡ್ ಲಸಿಕೆಯ ಎರಡು ಡೋಸ್ ಪಡೆದ ನಂತರದ ಆರು ತಿಂಗಳ ವೇಳೆಗೆ ಶೇ 99 ರಷ್ಟು ಮಂದಿಯಲ್ಲಿ ಉತ್ತಮವಾಗಿ ಪ್ರತಿಕಾಯ (ಆ್ಯಂಟಿಬಾಡಿ) ವೃದ್ಧಿಯಾಗಿರುತ್ತದೆ. ಹೀಗಾಗಿ, ಬೂಸ್ಟರ್ ಡೋಸ್ ಅಗತ್ಯವಿಲ್ಲ ಎನ್ನುವುದುಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನದಿಂದ ದೃಢಪಟ್ಟಿದೆ.

ಕೋವಿಡ್ ಲಸಿಕೆಯ ಕಾರ್ಯನಿರ್ವಹಣೆ ಹಾಗೂ ಬೂಸ್ಟರ್‌ ಡೋಸ್‌ ಅಗತ್ಯತೆ ಬಗ್ಗೆ ವೈದ್ಯಕೀಯ ಕ್ಷೇತ್ರದಲ್ಲಿ ಚರ್ಚೆಗಳು ನಡೆಯುತ್ತಿವೆ.ಲಸಿಕೆಯು ಎಷ್ಟು ದಿನಗಳವರೆಗೆ ವ್ಯಕ್ತಿಯನ್ನು ರಕ್ಷಿಸುವ ಸಾಮರ್ಥ್ಯ ಹೊಂದಿದೆ ಎನ್ನುವುದರ ಬಗ್ಗೆ ಖಚಿತತೆ ಇರಲಿಲ್ಲ. ಅದೇ ರೀತಿ, ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ಪ್ರತಿಕಾಯಗಳು ವೃದ್ಧಿಯಾಗಿರುತ್ತವೆ ಎನ್ನುವುದರ ಬಗ್ಗೆ ಲಸಿಕೆ ತಯಾರಿಕಾ ಕಂಪನಿಗಳು ನಿಖರವಾಗಿ ಹೇಳಿಲ್ಲ. ಹಾಗಾಗಿ,ಸಂಸ್ಥೆಯ ಸೂಕ್ಷ್ಮ ಜೀವ ವಿಜ್ಞಾನ ವಿಭಾಗವು ಈ ಬಗ್ಗೆ ಅಧ್ಯಯನವನ್ನು ಕೈಗೆತ್ತಿಕೊಂಡಿತ್ತು.

ವಿಭಾಗದ ಮುಖ್ಯಸ್ಥರಾದ ಡಾ. ನವೀನಾ ಜೆ. ಹಾಗೂ ಸಹಾಯಕ ಪ್ರಾಧ್ಯಾಪಕಿ ಡಾ.ಎಂ.ಪಿ. ನಂದಿನಿ ಈ ಅಧ್ಯಯನ ನಡೆಸಿದ್ದು,ವೈದ್ಯರು ಒಳಗೊಂಡಂತೆ 250 ಆರೋಗ್ಯ ಕಾರ್ಯಕರ್ತರು ಅಧ್ಯಯನಕ್ಕೆ ಒಳಪಟ್ಟಿದ್ದರು.

ADVERTISEMENT

ಕಳೆದ ಫೆಬ್ರವರಿ ತಿಂಗಳಲ್ಲಿ ‘ಕೋವಿಶೀಲ್ಡ್‌’ ಲಸಿಕೆಯ2 ಡೋಸ್ ಪಡೆದವರನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಇವರಲ್ಲಿ ಸಮಾನವಾಗಿ ಪುರುಷರು ಹಾಗೂ ಮಹಿಳೆಯರು ಇದ್ದರು. ಅವರಲ್ಲಿ ಅಭಿವೃದ್ಧಿ ಹೊಂದಿರುವ ಪ್ರತಿಕಾಯದ ಬಗ್ಗೆ ಏಪ್ರಿಲ್‌ ತಿಂಗಳಲ್ಲಿ ಎಲಿಸಾ ವಿಧಾನದ ಮೂಲಕ ಪರೀಕ್ಷೆ ನಡೆಸಲಾಗಿತ್ತು. ಆ ವೇಳೆ ಶೇ 80 ರಷ್ಟು ಮಂದಿಯಲ್ಲಿ ಉತ್ತಮ ಪ್ರತಿಕಾಯ ಅಭಿವೃದ್ಧಿ ಹೊಂದಿರುವುದು ಖಚಿತಪಟ್ಟಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ಶೇ 99ರಷ್ಟು ಮಂದಿಯಲ್ಲಿ ಉತ್ತಮ ಪ್ರತಿಕಾಯ ಅಭಿವೃದ್ಧಿಯಾಗಿರುವುದು ದೃಢಪಟ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಲಸಿಕೆ ಪರಿಣಾಮಕಾರಿ:‘ನಿಗದಿತ ಸಮೂಹಕ್ಕೆ ಏಪ್ರಿಲ್‌ ತಿಂಗಳಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ಶೇ 20 ರಷ್ಟು ಮಂದಿಯಲ್ಲಿ ಅಷ್ಟಾಗಿ ಪ್ರತಿಕಾಯ ವೃದ್ಧಿಯಾಗಿರಲಿಲ್ಲ. ಆದರೆ, ಸೆಪ್ಟೆಂಬರ್ ತಿಂಗಳ ವೇಳೆಗೆ ಅವರಲ್ಲಿ ಕೂಡ ಉತ್ತಮವಾಗಿ ಪ್ರತಿಕಾಯ ಅಭಿವೃದ್ಧಿಯಾಗಿದೆ. ಶೇ 1ರಷ್ಟು ಮಂದಿಯಲ್ಲಿ ಮಾತ್ರ ಪ್ರತಿಕಾಯದ ಪ್ರಮಾಣ ಶೇ 30ರೊಳಗೆ ಇದೆ’ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

‘250 ಆರೋಗ್ಯ ಕಾರ್ಯಕರ್ತರಲ್ಲಿ 19 ಮಂದಿ ಕೋವಿಡ್‌ ಪೀಡಿತರಾಗಿ ಚೇತರಿಸಿಕೊಂಡಿದ್ದರು. ಬಳಿಕ ಲಸಿಕೆ ಪಡೆದುಕೊಂಡಿದ್ದರು. ಅವರಲ್ಲಿ ಅತೀ ಹೆಚ್ಚು ಪ್ರತಿಕಾಯ ಇರುವುದು ದೃಢಪಟ್ಟದೆ’ ಎಂದು ಹೇಳಿದರು.

4 ವಾರಗಳ ಅಂತರದಲ್ಲಿ ಪರಿಣಾಮಕಾರಿ
‘4 ವಾರಗಳ ಅಂತರದಲ್ಲಿ ಲಸಿಕೆಯು ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. 6ನೇ ತಿಂಗಳ ವೇಳೆಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಕಾಯ ವೃದ್ಧಿಯಾಗುತ್ತದೆ. ಹಾಗಾಗಿ, ಲಸಿಕೆಯ ಎರಡೂ ಡೋಸ್ ಪಡೆದ 6 ತಿಂಗಳ ವರೆಗೂ ಬೂಸ್ಟರ್ ಡೋಸ್ ಅಗತ್ಯವಿಲ್ಲ. 18 ವರ್ಷ ಮೇಲ್ಪಟ್ಟ ಎಲ್ಲರೂ ಆದಷ್ಟು ಬೇಗ ಲಸಿಕೆ ಪಡೆದುಕೊಳ್ಳಬೇಕು’ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

‘ಕೋವಿಶೀಲ್ಡ್‌’ ಲಸಿಕೆಯ ಎರಡು ಡೋಸ್‌ಗಳ ಅಂತರವನ್ನು 12 ವಾರಗಳಿಂದ 4ರಿಂದ 6 ವಾರಗಳಿಗೆ ಇಳಿಕೆ ಮಾಡುವುದು ಉತ್ತಮ. ಅಕ್ಟೋಬರ್‌–ನವೆಂಬರ್‌ನಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾದ ಸಂಭಾವ್ಯ ಕೋವಿಡ್ ಮೂರನೇ ಅಲೆ ಎದುರಿಸಲು ಸಮೂಹ ರೋಗನಿರೋಧಕ ಶಕ್ತಿ ವೃದ್ಧಿ ಅತ್ಯಗತ್ಯ’ ಎಂದು ಹೇಳಲಾಗಿದೆ.

***

ಲಸಿಕೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ. ಒಂದು ವರ್ಷವಾದ ಬಳಿಕ ಪ್ರತಿಕಾಯದ ಬಗ್ಗೆ ಇನ್ನೊಂದು ಅಧ್ಯಯನ ನಡೆಸಲಾಗುತ್ತದೆ.
-ಡಾ.ಸಿ.ಎನ್. ಮಂಜುನಾಥ್, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.