ADVERTISEMENT

ಕನ್ನಡ ಪಠ್ಯಪುಸ್ತಕ ಪರಿಷ್ಕರಣೆ: ಪಠ್ಯಕ್ಕೆ ಸೇರಿದ ಸೂಲಿಬೆಲೆ ಪಾಠ

​ಪ್ರಜಾವಾಣಿ ವಾರ್ತೆ
Published 21 ಮೇ 2022, 19:45 IST
Last Updated 21 ಮೇ 2022, 19:45 IST
ಕನ್ನಡ ಪಠ್ಯಪುಸ್ತಕ ಪರಿಷ್ಕರಣೆ
ಕನ್ನಡ ಪಠ್ಯಪುಸ್ತಕ ಪರಿಷ್ಕರಣೆ   

ಬೆಂಗಳೂರು: ಹತ್ತನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿದ್ದ ವಿಚಾರವಾದಿ ಲೇಖಕ ಜಿ.ರಾಮಕೃಷ್ಣ ಅವರ ‘ಭಗತ್‌ ಸಿಂಗ್‌’ ಪಠ್ಯ ಕೈಬಿಟ್ಟು ವಿವಾದ ಮೈಮೇಲೆ ಎಳೆದುಕೊಂಡಿದ್ದ ರಾಜ್ಯ ಸರ್ಕಾರ, ಅದನ್ನು ಮರು ಸೇರ್ಪಡೆ ಮಾಡಿದೆ. ಆದರೆ, ‘ಯುವ ಬ್ರಿಗೇಡ್‌’ನ ಚಕ್ರವರ್ತಿ ಸೂಲಿಬೆಲೆ ಅವರು ಬರೆದಿರುವ ‘ತಾಯಿ ಭಾರತಿಯ ಅಮರಪುತ್ರರು’ ಪಾಠವನ್ನೂ ಸೇರಿಸಲಾಗಿದೆ.

ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕಗಳ ಪರಿಷ್ಕರಣಾ ಸಮಿತಿಯ ಶಿಫಾರಸ್ಸಿನಂತೆ ಈ ಪಠ್ಯ ಸೇರ್ಪಡೆಯಾಗಿದೆ. ಆರ್‌ಎಸ್‌ಎಸ್‌ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್‌ ಅವರ ಭಾಷಣವನ್ನು ಪಠ್ಯದಲ್ಲಿ ಸೇರಿಸಿದ್ದಕ್ಕೆ ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ಬೆಳವಣಿಗೆಯ ಬಳಿಕ ಶಿಕ್ಷಣ ಇಲಾಖೆಯು ಹೊಸದಾಗಿ ಮೂರು ಅಧ್ಯಾಯಗಳನ್ನು ಸೇರ್ಪಡೆ ಮಾಡಿದೆ.

ಮರು ಪರಿಷ್ಕರಣೆ ಸಂದರ್ಭದಲ್ಲಿ ಜಿ.ರಾಮಕೃಷ್ಣ ಅವರು ಬರೆದಿರುವ ಭಗತ್‌ಸಿಂಗ್‌ ಕುರಿತಾದ ಪಾಠವನ್ನು ಮರು ಪರಿಷ್ಕರಣೆ ಸಮಿತಿಯು ಕೈಬಿಟ್ಟಿತ್ತು.ಈ ಕ್ರಮಕ್ಕೆ ಶೈಕ್ಷಣಿಕ ವಲಯ ಮತ್ತು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಎರಡೂ ಅಧ್ಯಾಯಗಳ ಜತೆಗೆ, ‘ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರು (ಸಂಗ್ರಹ)’ ಅಧ್ಯಾಯವನ್ನು ಸೇರ್ಪಡೆ ಮಾಡಲಾಗಿದೆ.

ADVERTISEMENT

ಸಾಮಾಜಿಕ ಚಳವಳಿಯನ್ನೇ ಹುಟ್ಟುಹಾಕಿ, ಹಿಂದುಳಿದ ಸಮುದಾಯದವರಲ್ಲಿ ಸ್ವಾಭಿಮಾನದ ಕಿಡಿ ಹೊತ್ತಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಅವರ ಕುರಿತ ಅಧ್ಯಾಯ ಸಮಾಜ ವಿಜ್ಞಾನ ಪಠ್ಯದಲ್ಲಿತ್ತು. ಅದನ್ನೂ ಕೈಬಿಡಲಾಗಿತ್ತು. ಮತ್ತೆ ಪ‍ರಿಷ್ಕರಿಸಿರುವ ಸರ್ಕಾರ, ಈ ವಿವರವನ್ನು ಕನ್ನಡ ಪುಸ್ತಕದಲ್ಲಿ ಸೇರಿಸಿದೆ. ಆದರೆ, ಇವರ ಬಗ್ಗೆ ಪ್ರತ್ಯೇಕ ಪಾಠ ಇಲ್ಲ.

‘ಭಗತ್‌ಸಿಂಗ್‌’, ‘ತಾಯಿ ಭಾರತಿಯ ಅಮರಪುತ್ರರು’ ಮತ್ತು ‘ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರು’ ಅಧ್ಯಾಯಗಳನ್ನು ಪಠ್ಯಪೂರಕ ಅಧ್ಯಯನ ವಿಭಾಗದಲ್ಲಿ ಸೇರಿಸಲಾಗಿದೆ.

ನಾರಾಯಣ ಗುರು ಕುರಿತು ವಿವರಗಳು ಇರುವುದಿಲ್ಲ. ಇವರ ಕುರಿತಾದ ವಿಷಯಗಳನ್ನು ಕಡಿಮೆಗೊಳಿಸಿ ಪ್ರಸ್ತುತಪಡಿಸುವ ಪ್ರಯತ್ನ ಮಾಡಲಾಗಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮರು ಪರಿಷ್ಕರಿಸಿದ್ದ ಕನ್ನಡ ಪಠ್ಯಪುಸ್ತಕದ ‘ಪಿಡಿಎಫ್’ ಕರ್ನಾಟಕ ಪಠ್ಯಪುಸ್ತಕ ಸಂಘದ ವೆಬ್‌ಸೈಟ್‌ನಲ್ಲಿತ್ತು. ಅದನ್ನು ತೆಗೆಯಲಾಗಿದೆ.

ಮರುಮುದ್ರಣ: ಪರಿಷ್ಕರಣೆ ಸಮಿತಿಯ ಶಿಫಾರಸ್ಸಿನಂತೆ ರೂಪಿಸಲಾದ ಪಠ್ಯಪುಸ್ತಕಗಳ ಮುದ್ರಣ ಆರಂಭಿಸಲಾಗಿತ್ತು. ಆದರೆ, ಪಠ್ಯಪುಸ್ತಕ ಕುರಿತು ವಿವಾದಗಳು ಸೃಷ್ಟಿಯಾದ ಬಳಿಕ ಮುದ್ರಣ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿತ್ತು. ಪಠ್ಯದಲ್ಲಿ ಹೊಸ ವಿಷಯಗಳನ್ನು ಸೇರ್ಪಡೆ ಮಾಡಿದ ಬಳಿಕ ಮರುಮುದ್ರಣವನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕನ್ನಡ ಪಠ್ಯಪುಸ್ತಕ ಮುದ್ರಿಸಲು ನೀಡಿದ್ದ ಮುದ್ರಕರಿಗೆ ನೀಡಿದ್ದ ಸಿ.ಡಿ ಗಳನ್ನು ಶುಕ್ರವಾರವೇ ವಾಪಸ್‌ ಪಡೆಯಲಾಗಿದೆ. ಎಲ್ಲ ಮುದ್ರಕರು ತಮ್ಮ ಬಳಿ ಇದ್ದ ಸಿ.ಡಿಯನ್ನು ವಾಪಸ್ ನೀಡುವಂತೆ ಪಠ್ಯಪುಸ್ತಕ ಸಂಘವು ಸೂಚಿಸಿತ್ತು. ಮುದ್ರಣವಾಗಿರುವ ಪುಸ್ತಕಗಳನ್ನು ಯಾರಿಗೂ ಕೊಡದಂತೆಯೂ ನಿರ್ದೇಶನ ನೀಡಿತ್ತು ಎಂದು ಗೊತ್ತಾಗಿದೆ.

‘ಕ್ರಾಂತಿಕಾರಿಗಳ ಹೋರಾಟ ಸೇರಿಸಲಾಗಿದೆ’

‘ಹತ್ತನೇ ತರಗತಿಯ ಕನ್ನಡ ಪಠ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು, ಭಗತ್‌ ಸಿಂಗ್‌, ಪೆರಿಯಾರ್‌ ಸೇರಿದಂತೆ ಯಾರನ್ನೂ‌ ಕೈಬಿಟ್ಟಿಲ್ಲ. ಎಲ್ಲರ ವಿಚಾರಗಳು ಇರಲಿವೆ’ ಎಂದು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸ್ಪಷ್ಟಪಡಿಸಿದ್ದಾರೆ.

‘ತಾಯಿ ಭಾರತಿಯ ಅಮರಪುತ್ರರು’ ಅಧ್ಯಾಯವು ದೇಶಪ್ರೇಮಿ ಕ್ರಾಂತಿಕಾರಿ ಗಳ ಕುರಿತಾಗಿದೆ. ಸುಖದೇವ್‌, ರಾಜಗುರು, ಭಗತ್‌ಸಿಂಗ್‌ ಅವರ ವಿಷಯಗಳಿವೆ. ಕ್ರಾಂತಿಕಾರಿಗಳ ಬಗ್ಗೆ ವಿಸ್ತೃತವಾಗಿ ವಿವರಿಸುವ ಅಧ್ಯಾಯಗಳನ್ನು ಸೇರಿಸಲು ಸಮಿತಿ ನಿರ್ಧರಿಸಿತ್ತು. ಅದರಂತೆ ಪರಿಷ್ಕರಿಸಲಾಗಿದೆ’ ಎಂದು ಸಮರ್ಥಿಸಿ
ಕೊಂಡಿದ್ದಾರೆ. ‘ಪಠ್ಯಪುಸ್ತಕ ಕುರಿತು ಹಲವಾರು ಪಿಡಿಎಫ್‌ಗಳು ಹರಿದಾಡುತ್ತಿವೆ. ಇವು ಅಧಿಕೃತವಲ್ಲ. ಮುದ್ರಿತ ಪಠ್ಯಪುಸ್ತಕಗಳು ಮಾತ್ರ ಅಧಿಕೃತ. ಬ್ರಹ್ಮಶ್ರೀ ನಾರಾಯಣ ಗುರು ಕುರಿತಾದ ಅಧ್ಯಾಯವನ್ನು ಪಠ್ಯದಿಂದ ಕೈಬಿಟ್ಟಿಲ್ಲ. ನಾರಾಯಣ ಗುರು ಅವರಿಗೆ ಸಂಬಂಧಿಸಿದ ಪಠ್ಯವನ್ನು ಕನ್ನಡ ವಿಷಯದಲ್ಲಿ ತೆಗೆದುಕೊಳ್ಳಲಾಗಿದೆ’ ಎಂದು ವಿವರಿಸಿದ್ದಾರೆ.

‘ಮರುಮುದ್ರಣದಿಂದ ₹2.5 ಕೋಟಿ ನಷ್ಟ’

‘ಪಠ್ಯಪುಸ್ತಕಗಳನ್ನು 2022–23ನೇ ಶೈಕ್ಷಣಿಕ ವರ್ಷಕ್ಕಾಗಿ ಮುದ್ರಣ ಕೈಗೊಳ್ಳಲಾಗಿತ್ತು. ಆದರೆ, ಪಠ್ಯಪುಸ್ತಕಗಳ ಪರಿಷ್ಕರಣೆ ಮತ್ತು ಪದೇ ಪದೇ ಬದಲಾವಣೆ ಮಾಡಿ ಮುದ್ರಣ ಕೈಗೊಳ್ಳಲಾಯಿತು. ಮುದ್ರಿಸಿದ್ದ ಮತ್ತು ಹಳೆಯ ಪುಸ್ತಕಗಳು ಉಗ್ರಾಣ ಸೇರಿವೆ. ಇದರಿಂದ, ಸುಮಾರು ₹2.5 ಕೋಟಿ ನಷ್ಟವಾಗಿರಬಹುದು’ ಎಂದು ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಹೇಳಿದ್ದಾರೆ.

‘ಪ್ರಜಾಸತ್ತಾತ್ಮಕ ಮಾರ್ಗಗಳನ್ನು ಪರಿಷ್ಕರಣೆ ಸಂದರ್ಭದಲ್ಲಿ ಅನುಸರಿಸಿಲ್ಲ ಮತ್ತು ಪಾರದರ್ಶಕತೆಯನ್ನು ಕಾಪಾಡಿಲ್ಲ. ಪಠ್ಯಪುಸ್ತಕ ಪರಿಷ್ಕರಣೆ ಎನ್ನುವುದು ಪ್ರಹಸನವಾಗಿದ್ದು, ನಗೆಪಾಟಲಿಗೀಡಾಗಿದೆ. ಚಕ್ರವರ್ತಿ ಸೂಲಿಬೆಲೆ ಅವರ ವ್ಯಕ್ತಿತ್ವ ಎಲ್ಲರಿಗೂ ಗೊತ್ತಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.