ADVERTISEMENT

ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಬಗ್ಗೆ ಕಾಂಗ್ರೆಸ್ ನಿಲುವೇನು: ಬಿಜೆಪಿ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಸೆಪ್ಟೆಂಬರ್ 2021, 11:40 IST
Last Updated 20 ಸೆಪ್ಟೆಂಬರ್ 2021, 11:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪಂಜಾಬ್‌ನಲ್ಲಿ ದಲಿತರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದ್ದೇವೆ ಎಂದು ಬೀಗುತ್ತಿರುವ ಕಾಂಗ್ರೆಸ್ ವರಿಷ್ಠರು ಕರ್ನಾಟಕದಲ್ಲಿ ದಲಿತ ನಾಯಕರನ್ನು ಮೂಲೆಗುಂಪು ಮಾಡಿ ಮೌನಕ್ಕೆ ಶರಣಾಗಿದೆ ಎಂದು ಬಿಜೆಪಿ ಟೀಕಿಸಿದೆ.

ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಬಗ್ಗೆ ಕಾಂಗ್ರೆಸ್ ನಿಲುವನ್ನು ಪ್ರಶ್ನಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವರಿಷ್ಠರು ಪಂಜಾಬ್‌ನಲ್ಲಿ ಚರಣ್‌ಜಿತ್ ಅವರಿಗೆ ಪಟ್ಟಕಟ್ಟಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದೇವೆ ಎಂದು ಬೀಗುತ್ತಿದ್ದಾರೆ. ಇವರ ದ್ವಿಮುಖ ನೀತಿಯ ಬಗ್ಗೆ ಏನೆನ್ನಬೇಕು?’ ಎಂದು ಉಲ್ಲೇಖಿಸಿದೆ.

‘ರಾಜ್ಯದಲ್ಲಿ ದಲಿತ ಸಿಎಂ ವಾದ ಬುಗಿಲೆದ್ದಾಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ನಾನೇ ದಲಿತ ಪರವಾಗಿದ್ದೇನೆ. ಇನ್ಯಾಕೆ ದಲಿತ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು. ದಲಿತ ಮುಖ್ಯಮಂತ್ರಿ ವಾದಕ್ಕೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ದೊಡ್ಡ ಅಡ್ಡಿ ಯಾರೆಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ’ ಎಂದು ‘ದಲಿತ ವಿರೋಧಿ ಕಾಂಗ್ರೆಸ್ (#DalitVirodhiCongress)’ ಎಂಬ ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಬಿಜೆಪಿ ಟ್ವೀಟ್ ಮಾಡಿದೆ.

‘ನನಗೆ ತಳ ಸಮುದಾಯದ ನೋವು ಗೊತ್ತು, ನಾನೇ ದಲಿತ ಎಂದು ದಲಿತ ಸಿಎಂ ವಾದದ ವಿರುದ್ಧ ಸಿದ್ದರಾಮಯ್ಯ ದಾಳ ಉರುಳಿಸಿದ್ದರು. ತಮ್ಮ ಮಿತ್ರಮಂಡಳಿಯ ಸಾಹಿತಿಗಳಿಂದಲೂ ದಲಿತ ಸಿಎಂ ಅಗತ್ಯವಿಲ್ಲ ಎಂದು ಹೇಳಿಕೆ ಕೊಡಿಸಿದ್ದರು. ದಲಿತರನ್ನು ರಾಜಕೀಯವಾಗಿ ಬಳಸಿಕೊಂಡ ಕಾಂಗ್ರೆಸ್ ಪಕ್ಷವು ಈಗ ಹೊಸ ಪ್ರಹಸನ ಆರಂಭಿಸಿದೆ’ ಎಂದು ಬಿಜೆಪಿ ದೂರಿದೆ.

‘ಪಂಜಾಬ್‌ ನೂತನ ಸಿಎಂ ರೀತಿಯಲ್ಲಿ ಕರ್ನಾಟಕದಲ್ಲಿ ಮೈತ್ರಿ ಸರ್ಕಾರದಲ್ಲಿ ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಪಟ್ಟಕಟ್ಟಿ, ನೈಟ್ ವಾಚ್‌ಮನ್ ಆಗಿ ಕಾಂಗ್ರೆಸ್ ಬಳಸಿಕೊಂಡಿತ್ತು. ಕೊನೆಗೆ ಸರ್ಕಾರ ಕೆಡವಿ ದಲಿತ ನಾಯಕರಿಗೆ ಸಿಕ್ಕ ಅಧಿಕಾರ ಕಸಿದುಕೊಳ್ಳಲಾಗಿತ್ತು. ದಲಿತ ಸಿಎಂ ವಾದ ಗಟ್ಟಿಯಾಗಲು ಕಾಂಗ್ರೆಸ್ ಬಿಡುತ್ತದೆಯೇ?’ ಎಂದು ಮತ್ತೊಂದು ಟ್ವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಸಿಎಂ ಸ್ಥಾನಕ್ಕಾಗಿ ಹಗಲುಕನಸು ಕಾಣುತ್ತಿರುವ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ, ದಲಿತ ಸಿಎಂ ವಿಚಾರದಲ್ಲಿ ನಿಮ್ಮ ನಿಲುವೇನು? ಮಲ್ಲಿಕಾರ್ಜುನ ಖರ್ಗೆ ಹಾಗೂ ಪರಮೇಶ್ವರ್ ಅವರ ರಾಜಕೀಯ ಜೀವನವನ್ನು ಮುಗಿಸಿದ ರೀತಿ‌ ಕಾಂಗ್ರೆಸ್ ಪಕ್ಷದ ಅಂತರಾಳದಲ್ಲಿ ಹುಟ್ಟಿದ ದಲಿತ ಸಿಎಂ ವಾದದ ಭ್ರೂಣ ಹತ್ಯೆ ಮಾಡುತ್ತೀರಾ’ ಎಂದು ಬಿಜೆಪಿ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.