ADVERTISEMENT

ಜುಲೈ 19, 22ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ: ಸುರೇಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 21:06 IST
Last Updated 28 ಜೂನ್ 2021, 21:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಜುಲೈ 19 ಮತ್ತು 22ರಂದು ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಪರೀಕ್ಷೆ ಸಿದ್ಧತೆ ಕುರಿತು ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ಸೋಮವಾರ ವಿಡಿಯೊ ಸಂವಾದ ನಡೆಸಿದ ಬಳಿಕಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

‘19ರಂದು ಕೋರ್ (ಗಣಿತ, ಸಮಾಜ ವಿಜ್ಞಾನ, ವಿಜ್ಞಾನ) ವಿಷಯಗಳಿಗೆ ಮತ್ತು 22ರಂದು ಭಾಷಾ ವಿಷಯಗಳ ಪರೀಕ್ಷೆಗಳು ಬೆಳಿಗ್ಗೆ 10.30ರಿಂದ 1.30ರವರೆಗೆ ನಡೆಯಲಿದೆ. ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ನೀಡಿರುವ ಮಾರ್ಗಸೂಚಿ (ಎಸ್‍ಒಪಿ) ಅನುಸರಿಸಿ ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆಗೆ ನಿಯೋಜಿತರಾಗುವ ಎಲ್ಲ ಸಿಬ್ಬಂದಿಗೆ ತಕ್ಷಣವೇ ಲಸಿಕೆ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

ADVERTISEMENT

‘ಸುರಕ್ಷಾ ಕೇಂದ್ರ’ಗಳು: ‘ಪರೀಕ್ಷೆ ಆರಂಭ ಮತ್ತು ಪರೀಕ್ಷೆಯ ನಂತರ ಸೋಂಕು ನಿವಾರಕ ದ್ರಾವಣದಿಂದ ಪರೀಕ್ಷಾ ಕೇಂದ್ರ, ಕೊಠಡಿ, ಪೀಠೋಪಕರಣ ಮತ್ತು ಶೌಚಾಲಯಗಳನ್ನು ಸ್ಯಾನಿಟೈಸ್‌ ಮಾಡಲಾಗುವುದು. ಪ್ರತಿ ಪರೀಕ್ಷಾ ಕೊಠಡಿಯಲ್ಲಿ 12 ಮಕ್ಕಳು, ಒಂದು ಡೆಸ್ಕ್‌ಗೆ ಒಬ್ಬ ಪರೀಕ್ಷಾ‌ರ್ಥಿ ಮಾತ್ರ ಇರಲಿದ್ದಾರೆ’ ಎಂದರು.

‘ಕೆಮ್ಮು, ನೆಗಡಿ, ಜ್ವರ ಲಕ್ಷಣಗಳಿರುವ ಅಭ್ಯರ್ಥಿಗಳಿಗೆ ಎರಡು ಕೊಠಡಿ ಕಾಯ್ದಿರಿಸಲಾಗುವುದು. ಮಾಸ್ಕ್ ಧರಿಸದ ವಿದ್ಯಾರ್ಥಿಗಳಿಗೆ ಮಾಸ್ಕ್‌ ನೀಡಲಾಗುವುದು. ತಾಲ್ಲೂಕಿಗೊಂದು ತುರ್ತು ಚಿಕಿತ್ಸಾ ವಾಹನ ಮೀಸಲಿರಿಸಲಾಗುವುದು. ಗಡಿ ಭಾಗದ ಪರೀಕ್ಷಾ ಕೇಂದ್ರಗಳಿಗೆ, ಹೊರ ರಾಜ್ಯದಿಂದ ಬರುವ ಪರೀಕ್ಷಾ‌ರ್ಥಿಗಳಿಗೆ ಅನುಕೂಲ ವಾಗುವಂತೆ ರಾಜ್ಯದ ಗಡಿ ಪ್ರವೇಶಕ್ಕೆ ಜಿಲ್ಲಾಡಳಿತದ ಸಮನ್ವಯದೊಂದಿಗೆ ಕ್ರಮ ವಹಿಸಲಾಗುವುದು’ ಎಂದರು.

‘ತಾಲ್ಲೂಕಿಗೊಂದು ಕೋವಿಡ್‌ ಆರೈಕೆ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಿ ಕೋವಿಡ್‌ ದೃಢಪಟ್ಟ ಪರೀಕ್ಷಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಕುಟುಂಬದಲ್ಲಿ ಯಾರಿಗಾದರೂ ಸೋಂಕು ತಗುಲಿದ್ದು, ಪರೀಕ್ಷಾರ್ಥಿ ಐಸೋಲೇಷನ್‌ನಲ್ಲಿದ್ದರೆ ಅವರಿಗೂ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗುವುದು. ಈ ಕೇಂದ್ರದಲ್ಲಿ ಒಂದು ಆಂಬುಲೆನ್ಸ್‌ ಕಾಯ್ದಿರಿಸಲಾಗುವುದು’ ಎಂದರು.

‘ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ನಾಳೆ’
‘ಶಿಕ್ಷಕರ ವರ್ಗಾವಣೆಗೆ ವೇಳಾಪಟ್ಟಿ ಮತ್ತು ಅಧಿಸೂಚನೆ ಬುಧವಾರ (ಜೂನ್‌ 30) ಹೊರ ಬೀಳಲಿದ್ದು, ಅಂದಿನಿಂದಲೇ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಸುರೇಶ್‌ಕುಮಾರ್ ತಿಳಿಸಿದರು.

‘ವರ್ಗಾವಣೆ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಂದ ತಿದ್ದುಪಡಿಯ ಪ್ರಕಾರವೇ ಪ್ರಕ್ರಿಯೆ ನಡೆಯಲಿದೆ. 2019-2020ರಲ್ಲಿ ಕಡ್ಡಾಯ ಹಾಗೂ ಹೆಚ್ಚುವರಿ ವರ್ಗಾವಣೆಗೊಂಡ ಶಿಕ್ಷಕರಿಗೆ ಮೊದಲ ಆದ್ಯತೆ ಸಿಗಲಿದೆ. ಈ ಬಾರಿ ವಲಯ ಅಥವಾ ಹೆಚ್ಚುವರಿ ವರ್ಗಾವಣೆ ಇರುವುದಿಲ್ಲ. ಈಗಾಗಲೇ ಸ್ವೀಕೃತಗೊಂಡಿರುವ 75 ಸಾವಿರ ಅರ್ಜಿಗಳಿಗೆ ಸಂಬಂಧಿಸಿದಂತೆ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸಲಾಗುವುದು. ಈ ಶಿಕ್ಷಕರನ್ನು‌ ಹೊರತುಪಡಿಸಿ‌ ಹೆಚ್ಚುವರಿಯಾಗಿ ಅರ್ಹರಾಗುವ ಶಿಕ್ಷಕರಿಗೆ ಎರಡನೇ ಹಂತದಲ್ಲಿ ಅವಕಾಶ ನೀಡಲಾಗುವುದು’ ಎಂದರು.

‘ಶಿಕ್ಷಣ ಸಚಿವರು ನನ್ನ ಜತೆ ಚರ್ಚಿಸಿಲ್ಲ’
‘ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಸಂಬಂಧ ಶಿಕ್ಷಣ ಸಚಿವರು ನನ್ನ ಜತೆ ಚರ್ಚೆ ನಡೆಸಿಲ್ಲ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಈವರೆಗೂ ನನ್ನ ಜತೆ ಚರ್ಚಿಸಿಲ್ಲ. ಆತುರ ಇಲ್ಲ. ನಮ್ಮ ಮಕ್ಕಳ ಬಗ್ಗೆ, ಮಕ್ಕಳ ಶಿಕ್ಷಣ ಮತ್ತು ಅವರ ಭವಿಷ್ಯದ ಬಗ್ಗೆ ಕಾಳಜಿ ಇದೆ. ಅದಕ್ಕಿಂತಲೂ ಮುಖ್ಯವಾಗಿ ಅವರ ಜೀವದ ರಕ್ಷಣೆ ಬಹಳ ಮುಖ್ಯ’ ಎಂದು ಸುಧಾಕರ್ ತಿಳಿಸಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸುವುದಕ್ಕೆ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಚರ್ಚಿಸಿ, ಬಳಿಕ ಸುದ್ದಿಗೋಷ್ಠಿ ನಡೆಸಿದರು ಎಂದು ಮೂಲಗಳು ಹೇಳಿವೆ. ಸುರೇಶ್‌ಕುಮಾರ್ ಅವರು ಜಿಲ್ಲಾಡಳಿತದ ಜತೆ ನಡೆಸಿದ ಸಂವಾದದಲ್ಲಿ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಆಯುಕ್ತರು ಭಾಗವಹಿಸಿ ತಮ್ಮ ಇಲಾಖೆಯಿಂದ ಕೈಗೊಳ್ಳಬಹುದಾದ ಕ್ರಮಗಳನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.