ADVERTISEMENT

ಗೆದ್ದವರಷ್ಟೆ ಅಲ್ಲ, ಸೋತವರೂ ಮುಖ್ಯಮಂತ್ರಿ ಆಗಿರುವ ಇತಿಹಾಸ ಇದೆ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 12:32 IST
Last Updated 24 ಜೂನ್ 2021, 12:32 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್    

ಬೆಂಗಳೂರು: ‘ಚುನಾವಣೆಯಲ್ಲಿ ಗೆದ್ದವರಷ್ಟೆ ಅಲ್ಲ, ಸೋತವರು ಕೂಡಾ ರಾಜ್ಯದ ಮುಖ್ಯಮಂತ್ರಿ ಆಗಿರುವ ಉದಾಹರಣೆ ಇದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.‌

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘224ಜನರಲ್ಲಿ ಗೆದ್ದವರು, ಗೆಲ್ಲದೆ ಇರುವವರೂ ಮುಖ್ಯಮಂತ್ರಿ ಆಗಿರುವ ಇತಿಹಾಸ ಇದೆ. ದೇವರಾಜ ಅರಸು, ರಾಮಕೃಷ್ಣ ಹೆಗಡೆ ಕೂಡಾ ಚುನಾವಣೆಗೆ ನಿಲ್ಲದೆ ಮುಖ್ಯಮಂತ್ರಿ ಆಗಿದ್ದಾರೆ’ ಎಂದರು.

ಮುಂದಿನ ಮುಖ್ಯಮಂತ್ರಿ ಶಾಸಕ ಜಿ. ಪರಮೇಶ್ವರ ಎಂದು ಬೆಂಬಲಿಗರ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ಸುತ್ತೂರು ಶ್ರೀಗಳ ತಾಯಿ ವಿಧಿವಶರಾದ ಕಾರಣ ಪರಮೇಶ್ವರ ಸಾಂತ್ವನ ಹೇಳಲು ಹೋಗಿದ್ದಾರೆ.‌ ಶ್ರೀಗಳು ಯಾವುದೇ ಪಕ್ಷ ಇರಲಿ, ಎಲ್ಲರಿಗೂ ಅಶೀರ್ವಾದ ಮಾಡುತ್ತಾರೆ’ ಎಂದಷ್ಟೇ ಹೇಳಿದರು.

ADVERTISEMENT

‘ಕಾಂಗ್ರೆಸ್ ಹೈಕಮಾಂಡ್ ದುರ್ಬಲ ಆಗಿದೆ.‌ ಅದಕ್ಕೆ ಮುಖ್ಯಮಂತ್ರಿ ಯಾರು ಎಂದು ಘೋಷಣೆ ಮಾಡಲು ಅವರಿಂದ ಸಾಧ್ಯವಾಗುತ್ತಿಲ್ಲ’ ಎಂದು ಸಚಿವ ಆರ್. ಅಶೋಕ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್‌, ‘ಅಶೋಕ ಅವರ ತಟ್ಟೆಯಲ್ಲಿ ಇರುವ ಹೆಗ್ಗಣ ಮೊದಲು ತೆಗೆದು ಹಾಕಲಿ’ ಎಂದು ತಿರುಗೇಟು ನೀಡಿದರು.‌

ಮಾಹಿತಿ ನೀಡಿಲ್ಲ: ‘ಕೋವಿಡ್ ಎರಡನೇ ಅಲೆಯಲ್ಲಿ ಇಡೀ ದೇಶದಲ್ಲಿ ಸಾವು ನೋವು ನಿರುದ್ಯೋಗ ಹೆಚ್ಚಾಗಿದೆ.‌ ಆರ್ಥಿಕವಾಗಿ ಎಲ್ಲ ವರ್ಗದ ಜನರು ಸಂಕಷ್ಟದಲ್ಲಿದ್ದಾರೆ. ಕಾಂಗ್ರೆಸ್ ವತಿಯಿಂದ ಆರ್ಥಿಕ ಪ್ಯಾಕೇಜ್ ಒತ್ತಾಯ ಮಾಡಿದ್ದೆವು. ಕೇಂದ್ರ ಸರ್ಕಾರ ಘೋಷಿಸಿರುವ ₹ 20 ಲಕ್ಷ ಕೋಟಿಯ ಪ್ಯಾಕೇಜ್‌ನಿಂದ ಯಾರಿಗೆ ಅನುಕೂಲ ಆಗಿದೆ ಎಂಬ ಮಾಹಿತಿ ಕೊಡಿ ಎಂದು ಕೇಳಿದ್ದೆವು. ಆದರೆ, ಯಾವುದೇ ಮಾಹಿತಿಯನ್ನು ಸರ್ಕಾರ ನೀಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೋವಿಡ್‌ನಿಂದ ಮೃತಪಟ್ಟವರಿಗೆ ಪರಿಹಾರವೂ ಸಮರ್ಪಕವಾಗಿಲ್ಲ. ಕೇವಲ ಬಿಪಿಎಲ್‌ನವರಿಗೆ ಮಾತ್ರ ₹ 1 ಲಕ್ಷ ಘೋಷಿಸಲಾಗಿದೆ. ಆಮ್ಲಜನಕ ಇಲ್ಲದೆ, ಹಾಸಿಗೆ ಇಲ್ಲದೆ ಮೃತಪಟ್ಟವರ ಸಂಖ್ಯೆ ಅಧಿಕೃತವಾಗಿ ಘೋಷಣೆ ಮಾಡಿದ್ದಕ್ಕಿಂತ ಹೆಚ್ಚಿದೆ. ಹೀಗಾಗಿ, ಎಲ್ಲ ಪ್ರದೇಶಗಳಲ್ಲಿರುವ ನೊಂದ ಜನರನ್ನು ಮುಟ್ಟುವ ಕಾರ್ಯಕ್ರಮವನ್ನು ಪಕ್ಷ ಹಮ್ಮಿಕೊಂಡಿದೆ’ ಎಂದರು.

‘ಕೋವಿಡ್‌ನಿಂದ ಮೃತಪಟ್ಟವರ ಮತ್ತು ತೀವ್ರ ಸಂಕಷ್ಟದಲ್ಲಿ ಇರುವವರ ಮಾಹಿತಿಯನ್ನು ಕಲೆ ಹಾಕಿ ಮಾನಸಿಕವಾಗಿ ಶಕ್ತಿ ತುಂಬ ಕೆಲಸ ಮಾಡಬೇಕು. ಪ್ರತಿ ವಿಧಾನಸಭಾ ಕ್ಷೇತ್ರ, ನಗರ, ಬ್ಲಾಕ್, ಪಂಚಾಯಿತಿ ಮಟ್ಟದಲ್ಲಿ ಪಕ್ಷದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಲ್ಲೂಕಿನಲ್ಲಿ 30 ಮಂದಿ ಕೋವಿಡ್ ವಾರಿಯರ್ ಮಾಡಿ ಕನಿಷ್ಠ ಪಕ್ಷ 200 ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಬೇಕು.‌ ಪರಿಹಾರ ಸಿಗದ ಅಸಂಘಟಿತ ಕಾರ್ಮಿಕರು ಹೊಸತಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಅಥವಾ ಮನೆಮನೆಗೆ ತೆರಳಿ ನೋಂದಣಿ ಮಾಡಿಸಿ ಪರಿಹಾರ ಹಣ ತಲುಪಿಸುವ ಕೆಲಸ ಮಾಡಬೇಕು. ಡೆತ್ ಆಡಿಟ್ ಹಾಗೂ ಕೋವಿಡ್‌ನಿಂದ ನೊಂದವರ ಲೆಕ್ಕ ಸಿದ್ಧಪಡಿಸಿ, ಆ ಮಾಹಿತಿಯನ್ನು ಕೆಪಿಸಿಸಿಗೆ ನೀಡಬೇಕು’ ಎಂದು ಪಕ್ಷದ ಕಾರ್ಯಕರ್ತರಿಗೆ ಶಿವಕುಮಾರ್‌ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.