ADVERTISEMENT

ಕೆಆರ್‌ಎಸ್‌: ಕಾವೇರಿ ಪ್ರತಿಮೆ ಮಾರ್ಗದ 30 ಕಲ್ಲು ಕುಸಿತ

ಜಲಾಶಯಕ್ಕೆ ತೊಂದರೆ ಇಲ್ಲ; ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 19:21 IST
Last Updated 19 ಜುಲೈ 2021, 19:21 IST
ಕಾವೇರಿ ಮಾರ್ಗದ ಚಿತ್ರ
ಕಾವೇರಿ ಮಾರ್ಗದ ಚಿತ್ರ   

ಮಂಡ್ಯ: ಕೆಆರ್‌ಎಸ್‌ ಜಲಾಶಯದ ಕೆಳಭಾಗದಲ್ಲಿರುವ ಕಾವೇರಿ ಪ್ರತಿಮೆ ಬಳಿ ತೆರಳುವ ಮಾರ್ಗದ ಕಲ್ಲುಗಳು ಭಾನುವಾರ ರಾತ್ರಿ ಕುಸಿದು ಬಿದ್ದಿವೆ.

ಸತತ ಮಳೆ ಸುರಿಯುತ್ತಿರುವ ಕಾರಣ ಕಲ್ಲುಗಳು ಉರುಳಿದ್ದು ಜಲಾಶಯಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಸಂಸದೆ ಸುಮಲತಾ, ಕೆಆರ್‌ಎಸ್‌ ಜಲಾಶಯ ಬಿರುಕು ಬಿಟ್ಟಿದೆ ಎಂದು ಹೇಳಿಕೆ ನೀಡಿರುವ ಬೆನ್ನಲ್ಲೇ ಕಲ್ಲುಗಳು ಕುಸಿದಿರುವುದು ಆತಂಕ ಸೃಷ್ಟಿಸಿದೆ.

ಕಾವೇರಿ ಪ್ರತಿಮೆಗೆ ತೆರಳುವ ಮಾರ್ಗದ ತಳಭಾಗದಲ್ಲಿ ಮೆಟ್ಟಿಲುಗಳ ರೀತಿಯಲ್ಲಿ ಕಲ್ಲುಗಳನ್ನು ಅಳವಡಿಸಲಾಗಿದೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ತೇವದ ವಾತಾವರಣವಿದ್ದು 30 ಕಲ್ಲುಗಳು ಕುಸಿದು ಬಿದ್ದಿವೆ.

ADVERTISEMENT

ಜಲಾಶಯದ ಆವರಣದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು ವಾಹನಗಳ ಓಡಾಟ ಹೆಚ್ಚಾಗಿದೆ. ಇದೇ ಮೊದಲ ಬಾರಿಗೆ 30 ಕಲ್ಲುಗಳು ಕುಸಿದು ಬಿದ್ದಿರುವುದಕ್ಕೆ ನಿಗಮದ ಕೆಲವು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಜಲಾಶಯದ ಕಲ್ಲುಗಳು ಕುಸಿದಿಲ್ಲ, ಕಾವೇರಿ ಪ್ರತಿಮೆಗೆ ತೆರಳುವ ಮಾರ್ಗದ ಮೆಟ್ಟಿಲಿನ ಕಲ್ಲುಗಳಷ್ಟೇ ಬಿದ್ದಿವೆ. ತೀವ್ರ ತೇವಾಂಶ ಇರುವುದರಿಂದ ಘಟನೆ ನಡೆದಿದೆ. ಜಲಾಶಯ ಸುರಕ್ಷಿತವಾಗಿದ್ದು ಈ ಬಗ್ಗೆ ಯಾವುದೇ ಅನುಮಾನ ಬೇಡ’ ಎಂದು ನಿಗಮದ ಅಧೀಕ್ಷಕ ಎಂಜಿನಿಯರ್‌ ವಿಜಯ್‌ಕುಮಾರ್‌ ತಿಳಿಸಿದರು.

ಶಾಸಕ ಭೇಟಿ: ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

‘ಭಾನುವಾರ ರಾತ್ರಿ 10 ಗಂಟೆ ಸಮಯದಲ್ಲಿ ಕಲ್ಲು ಕುಸಿದಿರುವ ಮಾಹಿತಿ ಸಿಕ್ಕಿತು. ಆಗಲೇ ಅಧಿಕಾರಿಗಳ ಜೊತೆ ಮಾತನಾಡಿದ್ದೆ. ಸೋಮವಾರ ಬೆಳಿಗ್ಗೆ ಖುದ್ದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದೇನೆ. ಜಲಾಶಯದ ಮೇಲ್ಭಾಗಕ್ಕೆ ತೆರಳುವ ಮಾರ್ಗದ ಕಲ್ಲುಗಳಷ್ಟೇ ಕುಸಿದಿವೆ. ಇದು ಮಣ್ಣಿನಿಂದ ನಿರ್ಮಿಸಿದ ಕಟ್ಟಡವಾಗಿರುವ ಕಾರಣ ಘಟನೆ ನಡೆದಿದೆ. ಜಲಾಶಯಕ್ಕೂ ಈಗ ಕುಸಿದಿರುವ ಮೆಟ್ಟಿಲಿಗೂ ಯಾವುದೇ ಸಂಬಂಧ ಇಲ್ಲ. ಕಲ್ಲು ಕುಸಿದ ಸ್ಥಳಕ್ಕೂ ಅಣೆಕಟ್ಟೆಗೂ 15 ಮೀಟರ್‌ ಅಂತರವಿದೆ’ ಎಂದು ಅವರು ತಿಳಿಸಿದರು.

ಸಂಸದೆ ಸುಮಲತಾ ಆಕ್ಷೇಪ

ಭಾನುವಾರ ರಾತ್ರಿ 10 ಗಂಟೆ ಸಮಯದಲ್ಲಿ ಕುಸಿತವಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಶಾಸಕ ರವೀಂದ್ರ ಶ್ರೀಕಂಠಯ್ಯ ಕೂಡ, ರಾತ್ರಿ ನಡೆದಿದೆ ಎಂದು ತಿಳಿಸಿದ್ದಾರೆ. ಆದರೆ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಬಹಿರಂಗಗೊಂಡಿದ್ದು ಭಾನುವಾರ ಸಂಜೆ ನಡೆದಿರುವುದು ಗೊತ್ತಾಗಿದೆ. ಅಧಿಕಾರಿಗಳ ಭಿನ್ನ ಹೇಳಿಕೆಗೆ ಸಂಸದೆ ಸುಮಲತಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಭಾನುವಾರ ರಾತ್ರಿ 10.45ರವರೆಗೂ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಕುಸಿತಕ್ಕೆ ಜಲಾಶಯದ ಆಸುಪಾಸಿನಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಕಾರಣವೇ ಎಂಬ ಬಗ್ಗೆ ಪತ್ತೆ ಮಾಡಬೇಕು’ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಕಳಪೆ ಕಾಮಗಾರಿ ಕಾರಣ?

ಇದೇ ಮೊದಲ ಬಾರಿಗೆ ಕಲ್ಲುಗಳು ಕುಸಿದಿವೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಅದೇ ಜಾಗದಲ್ಲಿ ಹಲವು ಬಾರಿ ಕಲ್ಲುಗಳು ಕುಸಿದಿದ್ದು ಹಿಂದೆ ಮಣ್ಣಿನಿಂದ ತೇಪೆ ಹಾಕಲಾಗಿದೆ. ಕಳಪೆ ಕಾಮಗಾರಿ ಮಾಡಿದ್ದ ಕಾರಣ ಅದೇ ಜಾಗದಲ್ಲಿ ಮತ್ತೆ ಮತ್ತೆ ಕುಸಿತ ಉಂಟಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.