ADVERTISEMENT

ಆರಂಭಕ್ಕೆ ಮುನ್ನವೇ ಮತ್ಸ್ಯವಿಕಾಸ ಯೋಜನೆ ರದ್ದು; ಎಸ್‌. ಅಂಗಾರ ಮಾಹಿತಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 3:43 IST
Last Updated 23 ಸೆಪ್ಟೆಂಬರ್ 2021, 3:43 IST
ಎಸ್‌. ಅಂಗಾರ
ಎಸ್‌. ಅಂಗಾರ   

ಬೆಂಗಳೂರು: ಮೀನುಗಾರಿಕೆಯಲ್ಲಿ ತಾಂತ್ರಿಕತೆ ಅಳವಡಿಸಲು 2020–21ರ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ‘ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ’ಯನ್ನು ಕೈಬಿಡಲಾಗಿದೆ ಎಂದು ಮೀನುಗಾರಿಕೆ ಸಚಿವ ಎಸ್‌. ಅಂಗಾರ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಬುಧವಾರ ಬಿಜೆಪಿಯ ಎನ್‌. ರವಿಕುಮಾರ್‌ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೋವಿಡ್‌–19ನಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಈ ಯೋಜನೆಯನ್ನು ಕೈಬಿಡಲಾಗಿದೆ’ ಎಂದರು.

ರಾಜ್ಯದ ವಿವಿಧ ಬಂದರುಗಳಲ್ಲಿ ಹೂಳು ಎತ್ತುವುದು ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಐದು ವರ್ಷಗಳ ಅವಧಿಯಲ್ಲಿ ₹ 275.16 ಕೋಟಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.

ADVERTISEMENT

ಕೇಂದ್ರಕ್ಕೆ ಪತ್ರ: ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್ ಪ್ರಶ್ನೆಗೆ ಉತ್ತರಿಸಿದ ಮೀನುಗಾರಿಕಾ ಸಚಿವರು, ‘ಮೀನುಗಾರಿಕಾ ದೋಣಿಗಳಿಗೆ ರಿಯಾಯ್ತಿ ದರದಲ್ಲಿ ಸೀಮೆಎಣ್ಣೆ ಮತ್ತು ಡೀಸೆಲ್‌ ವಿತರಣೆಗೆ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಶೀಘ್ರದಲ್ಲಿ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದರು.

ಮೀನುಗಾರರ ಸಾಲ ಮನ್ನಾ ಯೋಜನೆಯ ಅಡಿಯಲ್ಲಿ 1,200 ಜನರ ಅರ್ಜಿಗಳು ತಾಂತ್ರಿಕ ಕಾರಣಗಳಿಂದ ಬಾಕಿ ಇವೆ. ಅವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲಾಗುವುದು. ಮೀನುಗಾರರು ರಾಷ್ಟ್ರೀಯ ಮತ್ತು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲವನ್ನು ಮನ್ನಾ ಮಾಡಲು ಸಾಧ್ಯವೆ ಎಂಬುದರ ಕುರಿತು ಮುಖ್ಯಮಂತ್ರಿಯವರ ಜತೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.