ADVERTISEMENT

ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಸಭೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 16:32 IST
Last Updated 20 ಸೆಪ್ಟೆಂಬರ್ 2021, 16:32 IST

ಬೆಂಗಳೂರು: ಅನುದಾನಿತ ಪದವಿಪೂರ್ವ ಕಾಲೇಜುಗಳ ಖಾಲಿ ಹುದ್ದೆ ಭರ್ತಿ ಸೇರಿದಂತೆ ಶಿಕ್ಷಣ ಕ್ಷೇತ್ರದ ಮೂರು ಪ್ರಮುಖ ಬೇಡಿಕೆಗಳ ಇತ್ಯರ್ಥಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತಿಯಲ್ಲೇ ಉನ್ನತಮಟ್ಟದ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲು ಯತ್ನಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಭರವಸೆ ನೀಡಿದರು.

ವಿಧಾನ ಪರಿಷತ್‌ನಲ್ಲಿ ಸೋಮವಾರ ಎರಡು ಗಮನ ಸೆಳೆಯುವ ಸೂಚನೆಗಳು ಹಾಗೂ ನಿಯಮ 330ರ ಅಡಿಯಲ್ಲಿ ಪ್ರಸ್ತಾಪವಾದ ಒಂದು ವಿಷಯಕ್ಕೆ ಉತ್ತರಿಸಿದ ಅವರು, ‘ಸಭಾಪತಿ ಹಾಗೂ ವಿಷಯ ಪ್ರಸ್ತಾಪಿಸಿರುವ ಸದಸ್ಯರ ಉಪಸ್ಥಿತಿಯಲ್ಲಿ ಶಿಕ್ಷಣ ಮತ್ತು ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಉನ್ನತಮಟ್ಟದ ಸಭೆ ನಡೆಸುತ್ತೇನೆ. ಈ ಎಲ್ಲ ಸಮಸ್ಯೆಗಳಿಗೂ ತಾರ್ಕಿಕ ಅಂತ್ಯ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ’ ಎಂದರು.

ಗಮನ ಸೆಳೆಯುವ ಸೂಚನೆ ಮಂಡಿಸಿದ ಬಿಜೆಪಿಯ ಎಸ್‌.ವಿ. ಸಂಕನೂರ, ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಕಾರ್ಯಭಾರ ನಿಗದಿಪಡಿಸಿರುವ ಆದೇಶ ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದರು. ಅನುದಾನಿತ ಹಾಗೂ ಸರ್ಕಾರಿ ಶಾಲಾ, ಕಾಲೇಜುಗಳ ನೌಕರರಿಗೆ ಪಿಂಚಣಿ ಸೌಲಭ್ಯಕ್ಕೆ 2006ರ ಏಪ್ರಿಲ್‌ 1ಕ್ಕೂ ಮೊದಲಿನ ಸೇವೆಯನ್ನು ಪರಿಗಣಿಸಿ ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ ನೀಡುವಂತೆ ಬಿಜೆಪಿಯ ಆಯನೂರು ಮಂಜುನಾಥ್‌, ಸಂಕನೂರ, ಅರುಣ್‌ ಶಹಾಪುರ ಜೆಡಿಎಸ್‌ನ ಮರಿತಿಬ್ಬೇಗೌಡ ಮತ್ತು ಕೆ.ಟಿ. ಶ್ರೀಕಂಠೇಗೌಡ ಆಗ್ರಹಿಸಿದರು.

ADVERTISEMENT

2000ನೇ ಇಸವಿಗೂ 15–20 ವರ್ಷಗಳ ಮೊದಲಿನಿಂದಲೂ ಅನುದಾನಿತ ಪ್ರೌಢಶಾಲೆಗಳಲ್ಲಿ ಕೆಲಸ ಮಾಡುತ್ತಿರುವ 350ರಿಂದ 400ರಷ್ಟು ‘ಡಿ’ ದರ್ಜೆ ನೌಕರರ ಸೇವೆಯನ್ನು ಕಾಯಂ ಮಾಡದೇ ಇರುವುದರಿಂದ ಅವರ ಜೀವನಕ್ಕೆ ತೊಂದರೆಯಾಗಿದೆ ಎಂದು ಇದೇ ಸದಸ್ಯರು ನಿಯಮ 330ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿದರು.

‘ಈ ಎಲ್ಲ ಬೇಡಿಕೆಗಳ ಕುರಿತು ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಾಗುವುದು. ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಮನವರಿಕೆ ಮಾಡಿ, ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಾಗುವುದು’ ಎಂದು ಸಚಿವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.