ADVERTISEMENT

ರಾತ್ರೋರಾತ್ರಿ ಕಳಶ ಹೇಗೆ ಬಂತು?: ಸಂಸದ ಪ್ರತಾಪ ಸಿಂಹ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 6:02 IST
Last Updated 15 ನವೆಂಬರ್ 2022, 6:02 IST
   

ಮೈಸೂರು: ‘ಇಲ್ಲಿನ ಊಟಿ ರಸ್ತೆಯ ಜೆಎಸ್‌ಎಸ್‌ ಕಾಲೇಜು ಬಳಿ ನಿರ್ಮಿಸಿರುವ ಬಸ್‌ ನಿಲ್ದಾಣದ ಮೇಲಿನ ಗುಂಬಜ್ ತೆರವಿಗೆ ಶತಸಿದ್ಧ’ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿ, ‘ಆ ಗುಂಬಜ್ ತೆರವಿಗೆ ನಾನು ನೀಡಿದ್ದ ಗಡುವಿನಲ್ಲಿ 2 ದಿನ ಬಾಕಿ ಇದೆ. ಅಷ್ಟರಲ್ಲಿ ತೆರವುಗೊಳಿಸದಿದ್ದರೆ, ಈಗಾಗಲೇ ಹೇಳಿದಂತೆ ನಾನೇ ತೆರವು ಮಾಡುತ್ತೇನೆ’ ಎಂದರು.

‘ನಾನು ಹೇಳಿಕೆ ಕೊಡುವ ಮುನ್ನ ಗುಂಬಜ್ ಮಾತ್ರ ಇತ್ತು. ರಾತ್ರೋರಾತ್ರಿ ಅದರ ಮೇಲೆ ಕಳಶ ಹೇಗೆ ಬಂತು?’ ಎಂದು ಕೇಳಿದರು.

ADVERTISEMENT

ತಮ್ಮ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಚರ್ಚೆಗೆ–ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ಮೈಸೂರಿನ ಅಂಬಾವಿಲಾಸ ಅರಮನೆಯ ಮೇಲಿನ ಗೋಪುರಕ್ಕೂ, ಮಸೀದಿ ಮೇಲಿನ ಗುಂಬಜ್‌ಗೂ ವ್ಯತ್ಯಾಸ ಇಲ್ಲವೇ? ಹೋಲಿಕೆ ಮಾಡುವ ಮುನ್ನ ವಾಸ್ತುಶಿಲ್ಪ ಓದಿ’ ಎಂದು ಹೇಳಿದರು.

‘ಅರಮನೆಯ ಗೋಪುರ ಇಂಡೋ-ಸಾರ್ಸೆನಿಕ್ ವಾಸ್ತುಶಿಲ್ಪದ್ದು. ಬಸ್ ನಿಲ್ದಾಣದ ಮೇಲೆ ಇವರು ಯಾವ ವಾಸ್ತುಶಿಲ್ಪ ಸೃಷ್ಟಿಸುತ್ತಾರೆ? ಗುಂಬಜ್ ಕಟ್ಟಿದ್ದು ಪ್ರಶ್ನಿಸದಿದ್ದಿದ್ದರೆ ಅಲ್ಲಿ ಅರ್ಧ ಚಂದ್ರ ಆಕೃತಿಯನ್ನೂ ಕಟ್ಟಿ ಬಿಡುತ್ತಿದ್ದರು’ ಎಂದು ಗುಡುಗಿದರು.

‘ಬಸ್ ನಿಲ್ದಾಣ ನಿರ್ಮಿಸಿದ ಗುತ್ತಿಗೆದಾರ ಆತನ ಮನೆ ಮೇಲೆ ಗುಂಬಜ್, ಮಿನಾರ್ ಬೇಕಾದರೂ ಕಟ್ಟಿಕೊಳ್ಳಲಿ’ ಎಂದು ಆಕ್ರೋಶದಿಂದ ಹೇಳಿದರು.

‘ನಾನು ಗುಂಬಜ್ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಶಾಸಕ ಎಸ್.ಎ.ರಾಮದಾಸ್ ಮೌನ ವಹಿಸಿದ್ದಾರೆ ಎಂದರೆ ಸಹಮತ ಇದೆ ಎಂದೇ ಅರ್ಥ’ ಎಂದರು.

‘ತೆರವಿಗೆ ಜಿಲ್ಲಾಡಳಿತದ ಅನುಮತಿ ಬೇಕಿಲ್ಲ. ಆ ನಿಲ್ದಾಣ ನಿರ್ಮಾಣವಾಗಿರುವುದು ರಾಷ್ಟ್ರೀಯ ಹೆದ್ದಾರಿಯ ಜಾಗದಲ್ಲಿ. ಅನುಮತಿ ಪಡೆಯದೇ ಕಟ್ಟಲಾಗಿದೆ. ಜನರ ತೆರಿಗೆ ಹಣ ನಷ್ಟವಾಗದಿರಲೆಂದು ನಿಲ್ದಾಣ ಉಳಿಸಿ, ಗುಂಬಜ್ ಮಾತ್ರ ತೆರವುಗೊಳಿಸಲಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.