ADVERTISEMENT

ನ್ಯಾಯದಾನ ವ್ಯವಸ್ಥೆಯ ಭಾರತೀಕರಣದ ಅಗತ್ಯ: ಸಿಜೆಐ ಎನ್‌ವಿ ರಮಣ

ಸುಪ್ರೀಂ ಕೋರ್ಟ್‌ ನ್ಯಾ. ಮೋಹನ್ ಎಂ. ಶಾಂತನಗೌಡರ್‌ ನುಡಿನಮನದಲ್ಲಿ ಸಿಜೆಐ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 19:26 IST
Last Updated 18 ಸೆಪ್ಟೆಂಬರ್ 2021, 19:26 IST
ನ್ಯಾ. ಮೋಹನ್‌ ಎಂ. ಶಾಂತನಗೌಡರ್‌ ಅವರ ಭಾವಚಿತ್ರಕ್ಕೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ‌ಎನ್‌.ವಿ. ರಮಣ ಪುಷ್ಪನಮನ ಸಲ್ಲಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದ್ದರು   ಪ್ರಜಾವಾಣಿ ಚಿತ್ರ
ನ್ಯಾ. ಮೋಹನ್‌ ಎಂ. ಶಾಂತನಗೌಡರ್‌ ಅವರ ಭಾವಚಿತ್ರಕ್ಕೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ‌ಎನ್‌.ವಿ. ರಮಣ ಪುಷ್ಪನಮನ ಸಲ್ಲಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದ್ದರು   ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶದ ನ್ಯಾಯದಾನ ವ್ಯವಸ್ಥೆ ಸದ್ಯ ಬ್ರಿಟಿಷ್‌ ವಸಾಹತುಶಾಹಿ ಮನೋಭಾವ ಹೊಂದಿದ್ದು, ಅದನ್ನು ಭಾರತೀಕರಣ ಮಾಡುವ ತುರ್ತು ಅಗತ್ಯವಿದೆ’ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ)
ಎನ್‌.ವಿ. ರಮಣ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ವಿಧಾನ ಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ದಿವಂಗತ ಮೋಹನ್‌ ಎಂ. ಶಾಂತನಗೌಡರ್‌ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬ್ರಿಟಿಷರ ಕಾಲದ ಹಳೆಯ ಕಾನೂನುಗಳು ನ್ಯಾಯದಾನ ದಲ್ಲಿ ಬಳಕೆಯಾಗುತ್ತಿವೆ. ಅವುಗಳ ಪರಿ ಭಾಷೆ ಕಕ್ಷಿದಾರರಿಗೆ ಅರ್ಥವಾಗು ತ್ತಿಲ್ಲ. ನ್ಯಾಯದಾನವು ಕಾರ್ಯಸಾಧು, ವಾಸ್ತವಿಕ ನೆಲೆಗಟ್ಟು ಹೊಂದಿದ್ದರೆ ಕಕ್ಷಿದಾರರು ಸುಲಭವಾಗಿ ತಿಳಿದುಕೊಳ್ಳಬಹುದು’ ಎಂದರು.

ADVERTISEMENT

‘ನ್ಯಾಯಾಲಯಗಳು ಕಕ್ಷಿಗಾರ ಕೇಂದ್ರೀಕೃತವಾಗಬೇಕು. ಕಕ್ಷಿಗಾರರೇ ನ್ಯಾಯಾಲಯದ ಅಂತಿಮ ಫಲಾನು ಭವಿಗಳು. ಹೀಗಾಗಿ, ಸರಳವಾದ ರೀತಿ ಯಲ್ಲಿ ನ್ಯಾಯದಾನ ಮಾಡುವುದು ನಮ್ಮ ಅಂತಿಮ ಕಳಕಳಿಯಾಗಬೇಕು’ ಎಂದರು.

‘ನ್ಯಾಯಾಲಯ ಮತ್ತು ನ್ಯಾಯಮೂರ್ತಿಗಳ ಬಗ್ಗೆ ಜನಸಾಮಾನ್ಯರು ಭಯಭೀತರಾಗಬಾರದು. ಸಾಮಾನ್ಯ ಜನರಿಗೆ ಸಾಂತ್ವನ ಹೇಳುವ ರೀತಿಯಲ್ಲಿ ನ್ಯಾಯಾಲಯಗಳು ಇರಬೇಕು. ಇಂಥ ವಾತಾವರಣವನ್ನು ಮೊಕದ್ದಮೆ
ದಾರರು ಮತ್ತು ಸಂಬಂಧಪಟ್ಟ ಎಲ್ಲರಿಗೂ ಕಲ್ಪಿಸುವುದು ನ್ಯಾಯ ಮೂರ್ತಿಗಳು ಮತ್ತು ವಕೀಲರ ಕರ್ತವ್ಯ’ ಎಂದೂ ಹೇಳಿದರು.

ನ್ಯಾ. ಶಾಂತನಗೌಡರ್‌ ಅವರ ಸರಳತೆ, ಸಜ್ಜನಿಕೆ, ಹಾಸ್ಯಪ್ರಜ್ಞೆ, ಕರ್ತವ್ಯ ಪ್ರಜ್ಞೆಯನ್ನು ಮೆಲುಕುಹಾಕಿದ
ಮುಖ್ಯ ನ್ಯಾಯಮೂರ್ತಿ, ಡಿ.ವಿ. ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗದ ‘ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ, ಬೆಲ್ಲ ಸಕ್ಕರೆಯಾಗು
ದೀನದುರ್ಬಲರಿಗೆ, ಎಲ್ಲರೊಳ
ಗೊಂದಾಗು ಮಂಕುತಿಮ್ಮ’ ಎಂಬ ಸಾಲುಗಳು ಅವರಿಗೆ ಅಕ್ಷರಶಃ ಅನ್ವಯಿಸುತ್ತವೆ’ ಎಂದರು.

ನ್ಯಾಯಮೂರ್ತಿ ಮೋಹನ್‌ ಶಾಂತನಗೌಡರ್‌ ಕುರಿತ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಅವರ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡರು.

‘ನ್ಯಾ. ಶಾಂತನಗೌಡರು ಒಮ್ಮೆ ನಮ್ಮ ತಂದೆ ಎಸ್.ಆರ್‌. ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಆಗ, ತಂದೆಯವರು ನಿಮಗೆ ಅತ್ಯುತ್ತಮವಾದ ಕಾನೂನು ಜ್ಞಾನ ಇದೆ. ಅದೇ ಕ್ಷೇತ್ರದಲ್ಲಿ ನೀವು ಮುಂದುವರಿಯಿರಿ ಎಂದು ಸಲಹೆ ನೀಡಿದ್ದರು. ಹಾಗೆ ಮಾಡಿದ್ದ ನ್ಯಾ. ಶಾಂತನಗೌಡರ್‌ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು ಇತಿಹಾಸ. ಸಾಧಕರಿಗೆ ಎಂದಿಗೂ ಸಾವಿಲ್ಲ’ ಎಂದು ಬೊಮ್ಮಾಯಿ ಹೇಳಿದರು.

ಸುಪ್ರೀಂ ಕೋರ್ಟ್‌ನ ನ್ಯಾ.ಬಿ.ವಿ. ನಾಗರತ್ನ, ನ್ಯಾ. ಅಬ್ದುಲ್ ನಜೀರ್, ನ್ಯಾ.ಎ.ಎಸ್. ಬೋಪಣ್ಣ, ನ್ಯಾ.ಎ.ಎಸ್. ಓಕಾ, ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶಚಂದ್ರ ಶರ್ಮ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಶ್ರದ್ಧಾಂಜಲಿ ಸಲ್ಲಿಸಿದರು.

‘ಉಂಗುರದ ಹರಳು ಹುಡುಕಿ ಕೊಟ್ಟಿದ್ದರು’

‘ನಾನು ನ್ಯಾಯಮೂರ್ತಿಯಾಗಿದ್ದಾಗ ಸಾಯಿ ಬಾಬಾ ನೀಡಿದ್ದ ಉಂಗುರದ ಹರಳನ್ನು ಒಮ್ಮೆ ಕಳೆದುಕೊಂಡಿದ್ದೆ. ನ್ಯಾ. ಮೋಹನ್‌ ಶಾಂತನಗೌಡರ್‌ ಅವರಿಗೆಈ ವಿಷಯ ತಿಳಿಸಿದೆ. ಹರಳಿನ ಮಹತ್ವ ಅವರಿಗೆ ಅರಿವಾಗಿ, ಸುಪ್ರೀಂ ಕೋರ್ಟ್‌ ಲಾಂಜ್‌ನಲ್ಲಿ ಸುತ್ತಾಡಿ ಅದನ್ನು ಹುಡುಕಿ ಕೊಟ್ಟಿದ್ದರು. ಅಷ್ಟರಮಟ್ಟಿಗೆ ಅವರು ಮತ್ತೊಬ್ಬರ ಬಗ್ಗೆ ಕಾಳಜಿ ವಹಿಸುತ್ತಿದ್ದರು’ ಎಂದು ನ್ಯಾಯಮೂರ್ತಿ ಮೋಹನ್ ಎಂ. ಶಾಂತನಗೌಡರ್‌ ಜೊತೆಗಿನ ಒಡನಾಟವನ್ನು ಸಿಜೆಐ ರಮಣ ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.