ADVERTISEMENT

ಕೋವಿಡ್‌ ನಿಯಮ ಉಲ್ಲಂಘಿಸಿ ನದಿಯಲ್ಲಿ ಅಧಿಕಾರಿ ಜಲಕ್ರೀಡೆ: ಪ್ರವಾಸಿಗರ ಅಸಮಾಧಾನ

ದುಬಾರೆ: ಕೋವಿಡ್ ಮಾರ್ಗಸೂಚಿ ಉಲ್ಲಂಘನೆ; ಪ್ರವಾಸಿಗರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 12:21 IST
Last Updated 10 ಆಗಸ್ಟ್ 2021, 12:21 IST
ದುಬಾರೆ ಕಾವೇರಿ ನದಿಯಲ್ಲಿ ರ‍್ಯಾಫ್ಟಿಂಗ್‌ ಕ್ರೀಡೆಯಲ್ಲಿ ಪಾಲ್ಗೊಂಡಿರುವ ಉಪ ವಿಭಾಗಾಧಿಕಾರಿ ಈಶ್ಚರ್ ಕುಮಾರ್ ಖಂಡು ಕುಟುಂಬದ ಸದಸ್ಯರು(ಎಡಚಿತ್ರ) ಕಾವೇರಿ ನದಿ ಜಲಕ್ರೀಡೆ ನಡೆಸುತ್ತಿರುವುದು
ದುಬಾರೆ ಕಾವೇರಿ ನದಿಯಲ್ಲಿ ರ‍್ಯಾಫ್ಟಿಂಗ್‌ ಕ್ರೀಡೆಯಲ್ಲಿ ಪಾಲ್ಗೊಂಡಿರುವ ಉಪ ವಿಭಾಗಾಧಿಕಾರಿ ಈಶ್ಚರ್ ಕುಮಾರ್ ಖಂಡು ಕುಟುಂಬದ ಸದಸ್ಯರು(ಎಡಚಿತ್ರ) ಕಾವೇರಿ ನದಿ ಜಲಕ್ರೀಡೆ ನಡೆಸುತ್ತಿರುವುದು   

ಕುಶಾಲನಗರ: ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿ ಹಿರಿಯ ಅಧಿಕಾರಿ ಹಾಗೂ ಅವರ ಸದಸ್ಯರು ದುಬಾರೆ ಕಾವೇರಿ ನದಿಯಲ್ಲಿ ರ‍್ಯಾಫ್ಟಿಂಗ್‌ನಲ್ಲಿ ಕ್ರೀಡೆಯಲ್ಲಿ ಪಾಲ್ಗೊಂಡಿರುವುದು ಪ್ರವಾಸಿಗರ ಅಸಮಾಧಾನಕ್ಕೆ ‌ಕಾರಣವಾಗಿದೆ.

ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ದುಬಾರೆಗೆ ಶನಿವಾರ ಜಿಲ್ಲಾ ಉಪ ವಿಭಾಗಾಧಿಕಾರಿ ಈಶ್ಚರ್ ಕುಮಾರ್ ಖಂಡು ಮತ್ತು ಕುಟುಂಬದ ಸದಸ್ಯರು ಹಾಗೂ ಇಲಾಖಾ ಸಿಬ್ಬಂದಿಗಳು ತಮ್ಮ ಪ್ರಭಾವ ಬೆಳೆಸಿ ಕಾವೇರಿ ನದಿಯಲ್ಲಿ ರ‍್ಯಾಫ್ಟಿಂಗ್‌ನಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದರು. ಈ ವಿಚಾರ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.

ಸರ್ಕಾರ ಕೋವಿಡ್ ಮಾರ್ಗಸೂಚಿ ಹೊರಡಿಸಿದ ಸಂದರ್ಭ ಜಲಕ್ರೀಡೆ ಹಾಗೂ ಈಜುಕೊಳಕ್ಕೆ ವಿನಾಯಿತಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ವಾರ ದುಬಾರೆ ರಿವರ್ ರ‍್ಯಾಫ್ಟಿಂಗ್‌ನಲ್ಲಿ ಅಸೋಸಿಯೇಷನ್ ವತಿಯಿಂದ ಆರಂಭಿಸಿದ್ದ ರಿವರ್ ರ‍್ಯಾಫ್ಟಿಂಗ್‌ ಅನ್ನು ಪ್ರವಾಸೋದ್ಯಮ ಅಧಿಕಾರಿಗಳು ರದ್ದು ಗೊಳಿಸಿದ್ದರು. ರ‍್ಯಾಫ್ಟಿಂಗ್‌ ಅಸೋಸಿಯೇ ಷನ್ ಅಧ್ಯಕ್ಷ ಸಿ.ಎಲ್.ವಿಶ್ವ ನೇತೃತ್ವದಲ್ಲಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರನ್ನು ಭೇಟಿ ಮಾಡಿ ರ‍್ಯಾಫ್ಟಿಂಗ್‌ ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದರು.

ADVERTISEMENT

ಸರ್ಕಾರದ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಸದ್ಯಕ್ಕೆ ರ‍್ಯಾಫ್ಟಿಂಗ್‌ ಸ್ಥಗಿತಗೊಳಿಸಿ ನಂತರ ‌ಸರ್ಕಾರದ ಮುಂದಿನ‌ ಮಾರ್ಗಸೂಚಿ ಪರಿಗಣಿಸಿ ಅನುಮತಿ ನೀಡುವುದಾಗಿ ಹೇಳಿದ್ದರು. ಇಂತಹ ಸಂದರ್ಭದಲ್ಲಿ ಜವಬ್ದಾರಿ ಸ್ಥಾನದಲ್ಲಿರುವ ಹಿರಿಯ ಅಧಿಕಾರಿ ಸ್ಥಗಿತಗೊಂಡಿದ್ದ ರ‍್ಯಾಫ್ಟಿಂಗ್‌ನಲ್ಲಿ ದುಬಾರೆಯಿಂದ ಸುಮಾರು 7 ಕಿ.ಮೀ ತನಕ ಜಲಕ್ರೀಡೆಯಲ್ಲಿ ಪಾಲ್ಗೊಂಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಅಧಿಕಾರಿಗಳೇ ಕೋವಿಡ್ ನಿಯಮ‌ ಯನ್ನು ಗಾಳಿ ತೂರಿದ್ದು, ಸರಿಯಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ದುಬಾರೆಗೆ ಆಗಮಿಸಿದ್ದ ಪ್ರವಾಸಿಗರು ಕೂಡ ತಮ್ಮಗೂ ರ‍್ಯಾಫ್ಟಿಂಗ್‌ ಗೆ ಅವಕಾಶ ಕೊಡಿ ಎಂದು ಒಕ್ಕೂಟದ ಪದಾಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.