ADVERTISEMENT

ಅ.1 ರಿಂದ ಪಂಚಮಸಾಲಿ ಸಮುದಾಯದಿಂದ ಸತ್ಯಾಗ್ರಹ: ಬಸವಜಯ ಮೃತ್ಯುಂಜಯ ಸ್ವಾಮೀಜಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 11:25 IST
Last Updated 19 ಸೆಪ್ಟೆಂಬರ್ 2021, 11:25 IST
ಬಸವಜಯ ಮೃತ್ಯುಂಜಯ ಸ್ವಾಮೀಜಿ
ಬಸವಜಯ ಮೃತ್ಯುಂಜಯ ಸ್ವಾಮೀಜಿ   

ಕೊಪ್ಪಳ: ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸಬೇಕು ಎಂದು ಒತ್ತಾಯಿಸಿ ಅ.1ರಿಂದ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಅವರು ಅವರು ನಗರದ ಪಂಚಮಸಾಲಿ ಸಮುದಾಯಭವನದಲ್ಲಿ ಪ್ರತಿಜ್ಞಾ ಪಂಚಾಯತ್ ಬೃಹತ್ ರಾಜ್ಯ ಅಭಿಯಾನ ಸಮಾವೇಶ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸತ್ಯಾಗ್ರಹ ಆರಂಭಕ್ಕೆ ಪಂಚಮಸಾಲಿ ಸಮುದಾಯ ತೀರ್ಮಾನಿಸಿದೆ. ಅದರ ಒಳಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೀಸಲಾತಿ ಘೋಷಿಸಿದರೆ ಸನ್ಮಾನ, ಇಲ್ಲವಾದರೆ ಬೆಂಗಳೂರಿನ ಸ್ವತಂತ್ರ ಉದ್ಯಾವನದಲ್ಲಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಿಂದ ಇಡೀ ರಾಜ್ಯದ ಪಂಚಮಸಾಲಿ ಸಮುದಾಯ ಒಂದಾಗಿದೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗಿತ್ತು. ಈ ವೇಳೆ ಆಗಿನ ಸಿಎಂ ಬಿಎಸ್ ಯಡಿಯೂರಪ್ಪನವರ ನೇತೃತ್ವದ ರಾಜ್ಯ ಸರ್ಕಾರ 6 ತಿಂಗಳ ಸಮಯ ಕೇಳಿತ್ತು. ಸರ್ಕಾರ ಕೇಳಿದ್ದ ಸಮಯ ಮೀರಿದ್ದು, ಬೇಡಿಕೆ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಕಾರಣಕ್ಕೆ ಸರ್ಕಾರಕ್ಕೆ ನಮ್ಮ ಬೇಡಿಕೆ ನೆನಪಿಸಲು ಮತ್ತೇ ಅಭಿಯಾನ ಆರಂಭಿಸಲಾಗಿದ.. ಒಂದು ವೇಳೆ ಈಗಿನ ಸಿಎಂ ಮೀಸಲಾತಿ ಘೋಷಣೆ ಮಾಡದಿದ್ದರೆ ಇಡೀ ಸಮುದಾಯವೇ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದೆ ಎಂದರು.

ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಮೀಸಲಾತಿ ನೀಡುವ ಭರವಸೆ ನೀಡಿದ ಯಡಿಯೂರಪ್ಪನವರು ಸಮಾಜದ ಶಾಪದಿಂದ ಅಧಿಕಾರ ಕಳೆದುಕೊಳ್ಳುವಂತೆ ಆಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಾಜದ ತಾಳ್ಮೆಗೆ ಒಂದು ಮಿತಿ ಇದೆ. ಸಮುದಾಯದ ಜನರ ತಲೆ ಕೆಟ್ಟರೆ ತಮಗೆ ಉಳಿಗಾಲವಿಲ್ಲ. 700 ಕಿ.ಮೀ ಸುಮ್ಮನೆ ಪಾದಯಾತ್ರೆ ಮಾಡಿಲ್ಲ ಎಂದು ಹರಿಹಾಯ್ದರು.

ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಬಸಲಿಂಗಪ್ಪ ಭೂತೆ, ತಾಲ್ಲೂಕು ಘಟಕದ ಅಧ್ಯಕ್ಷ ಕರಿಯಪ್ಪ ಮೇಟಿ, ಜಿಲ್ಲಾ ಉಪಾಧ್ಯಕ್ಷ ವೀರಣ್ಣ ಹುಬ್ಬಳ್ಳಿ, ಜಿಲ್ಲಾ ಪಂಚಮಸಾಲಿ ಪಂಚ ಸೈನ್ಯ ಅಧ್ಯಕ್ಷ ಸಂಗಮೇಶ ಬಾದವಾಡಗಿ, ಜಿಲ್ಲಾ ಕಾರ್ಯದರ್ಶಿ ಪ್ರಭುರಾಜ ಕರ್ಲಿ, ನಗರಸಭೆ ಅಧ್ಯಕ್ಷೆ ಲತಾ ಚಿನ್ನೂರು, ಶೇಖರ ಮುತ್ತನವರ್ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.