ADVERTISEMENT

ರಾಜ್ಯದ ಆರೂವರೆ ಕೋಟಿ ಜನರು ನನ್ನ ದೇವರು: ಸಿದ್ದರಾಮಯ್ಯ ಸಂದರ್ಶನ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 5:58 IST
Last Updated 3 ಆಗಸ್ಟ್ 2022, 5:58 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ದಾವಣಗೆರೆ: ನಗರದ ಹೊರವಲಯದಲ್ಲಿ ಆಗಸ್ಟ್‌ 3ರಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಅವರ ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಜನ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಇದೆ. 75ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ಕ ಭಾಗ ಇಲ್ಲಿದೆ:

* ಸ್ವಾತಂತ್ರ್ಯೋತ್ಸವ ಹಾಗೂ ನಿಮ್ಮ ಜನ್ಮದಿನದ ಅಮೃತ ಮಹೋತ್ಸವ ಜೊತೆಜೊತೆಯಾಗಿ ನಡೆಯುತ್ತಿದೆ. ನಿಮಗೆ ಹೇಗನ್ನಿಸುತ್ತದೆ?

ಸಿದ್ದರಾಮಯ್ಯ: ಸ್ವಾತಂತ್ರ್ಯ ನಮಗೆ ಸಿಗದೇ ಇದ್ದಿದ್ದರೆ, ನಮ್ಮನ್ನು ನಾವೇ ಆಳುವ ಪ್ರಜಾಪ್ರಭುತ್ವ ಸ್ಥಾಪನೆಯಾಗದೆ, ಸಂವಿಧಾನ ಜಾರಿಗೊಳ್ಳದೆ ಇದ್ದಿದ್ದರೆ ಸಾಮಾನ್ಯ ಹಿಂದುಳಿದ ಜಾತಿಯ ರೈತ ಕುಟುಂಬದಲ್ಲಿ ಹುಟ್ಟಿದ್ದ ನಾನು ರಾಜ್ಯದ ಮುಖ್ಯಮಂತ್ರಿಯಾಗುವ ಮಟ್ಟಕ್ಕೆ ಖಂಡಿತವಾಗಿಯೂ ಬೆಳೆಯುತ್ತಿರಲಿಲ್ಲ.

ADVERTISEMENT

ನಾನು ನಮ್ಮೂರಿನಲ್ಲಿ ಹೊಲದಲ್ಲಿ ಗೇಯ್ಮೆ ಮಾಡುತ್ತಾ, ದನ–ಕುರಿ ಮೇಯಿಸುತ್ತಾ ಇರುತ್ತಿದ್ದೆನೋ ಏನೋ? ದೇಶಕ್ಕೆ ಸಿಕ್ಕಿದ ಸ್ವಾತಂತ್ರ್ಯ ನನ್ನಂತೆ ಕೋಟ್ಯಂತರ ಮಂದಿಗೆ ಬೆಳೆಯುವ, ಸಾಧನೆಗೈಯ್ಯುವ ಅವಕಾಶವನ್ನು ತಂದು ಕೊಟ್ಟಿದೆ. ಸ್ವಾತಂತ್ರ್ಯ ನಿಮಗೇನು ತಂದು ಕೊಟ್ಟಿದೆ ಎಂದು ಯಾರಾದರೂ ಕೇಳಿದರೆ ನಾನು ನನ್ನನ್ನೇ ತೋರಿಸುತ್ತೇನೆ. ನನ್ನ ವ್ಯಕ್ತಿತ್ವ ಈ ದೇಶದ ಸ್ವಾತಂತ್ರ್ಯದ ಕೊಡುಗೆ. ಈ ಬಗ್ಗೆ ನನಗೆ ಹೆಮ್ಮೆಯಿದೆ.

* ಇದುವರೆಗಿನ ನಿಮ್ಮ ರಾಜಕೀಯ ಪಯಣ ತೃಪ್ತಿ ತಂದಿದೆಯೇ?

ಸಿದ್ದರಾಮಯ್ಯ: ರಾಜಕೀಯ ಎಂದರೆ ಅಧಿಕಾರ ಅಲ್ಲ, ಜನರ ಸೇವೆ ಮಾಡುವ ಅವಕಾಶ ಎಂದು ತಿಳಿದುಕೊಂಡವನು. ನಾನು ರಾಜಕೀಯಕ್ಕೆ ಬಂದಿರುವುದು ದುಡ್ಡು ಮಾಡಲು, ಹೆಸರು ಮಾಡಲು ಅಲ್ಲ. ಸುಮಾರು 40 ವರ್ಷಗಳ ನನ್ನ ದೀರ್ಘ ರಾಜಕೀಯ ಪಯಣದಲ್ಲಿ ಜನರ ಸೇವೆ ಮಾಡುವ ಬೇಕಾದಷ್ಟು ಅವಕಾಶಗಳು ಸಿಕ್ಕಿವೆ, ಆ ಅವಕಾಶವನ್ನು ರಾಜಕೀಯ ಪಕ್ಷದ ಮಿತಿಯೊಳಗೆ ಸಮರ್ಥವಾಗಿ ಬಳಸಿಕೊಂಡು ಜನರ ಸೇವೆ ಮಾಡಿದ್ದೇನೆ. ಇದು ನನಗೆ ತೃಪ್ತಿ ತಂದಿದೆ.

* ಹಣಕಾಸು ಸಚಿವರಾಗಿ, ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕನಾಗಿ ಛಾಪು ಮೂಡಿಸಿದ್ದೀರಿ. ಸಾಧನೆಯ ಹಾದಿಯಲ್ಲಿ ಇನ್ನೂ ಈಡೇರದ ಕನಸುಗಳು ಇವೆಯೇ?

ಸಿದ್ದರಾಮಯ್ಯ: ಸರ್ವರಿಗೂ ಸಮಪಾಲು–ಸಮಬಾಳು ಇದು ನನ್ನ ಅಭಿವೃದ್ಧಿಯ ಮಂತ್ರ. ಜಾತಿ, ಧರ್ಮ, ಪ್ರದೇಶಗಳ ಭೇದ ಇಲ್ಲದೆ ಸರ್ವರಿಗೂ ಅನ್ನ, ಆರೋಗ್ಯ, ಶಿಕ್ಷಣ, ವಸತಿ ಸಿಗಬೇಕು. ಸಂಪತ್ತು ಮತ್ತು ಅಧಿಕಾರ ಸಮನಾಗಿ ಹಂಚಿಕೆಯಾಗಬೇಕು, ಪ್ರತಿಯೊಬ್ಬ ವ್ಯಕ್ತಿಯೂ ಘನತೆಯಿಂದ ಬದುಕುವ ವಾತಾವರಣ ಇರಬೇಕು. ಹಣಕಾಸು ಸಚಿವನಾಗಿ, ಮುಖ್ಯಮಂತ್ರಿಯಾಗಿ ನಾನು ಮಂಡಿಸಿದ ಹದಿಮೂರು ಬಜೆಟ್‌ಗಳಲ್ಲಿ ಈ ಕನಸನ್ನು ನನಸು ಮಾಡುವ ಪ್ರಯತ್ನ ಮಾಡಿದ್ದೇನೆ. ಕನಸುಗಳು ಇನ್ನೂ ಇವೆ, ಮನುಷ್ಯ ಕನಸು ಕಾಣುವುದನ್ನು ಬಿಡಬಾರದು.

* ದೇಶದ ಪ್ರಸ್ತುತ ರಾಜಕೀಯ ಸ್ಥಿತಿಗತಿಯ ಬಗ್ಗೆ ನಿಮ್ಮ ಅನಿಸಿಕೆ?

ಸಿದ್ದರಾಮಯ್ಯ: ದೇಶದ ಪ್ರಸ್ತುತ ರಾಜಕೀಯದ ಬಗ್ಗೆ ಯೋಚನೆ ಮಾಡಿದರೆ ಆಕ್ರೋಶ ಉಕ್ಕುತ್ತೆ, ವಿಷಾದ ಆವರಿಸುತ್ತದೆ. ಮೂಲಭೂತವಾಗಿ ಇದು ವಚನಭ್ರಷ್ಟ ಸರ್ಕಾರ. ಅಧಿಕಾರಕ್ಕೆ ಬರುವ ಮೊದಲು ಚುನಾವಣಾ ಕಾಲದಲ್ಲಿ ಬಿಜೆಪಿ ಪ್ರಕಟಿಸಿದ ಪ್ರಣಾಳಿಕೆಗೂ ಈಗಿನ ಇವರ ಆಡಳಿತಕ್ಕೂ ಯಾವುದೇ ಸಂಬಂಧ ಇಲ್ಲ. ಅಧಿಕಾರ ಗ್ರಹಣ ಕಾಲದಲ್ಲಿ ಸಂವಿಧಾನವನ್ನು ಸಾಕ್ಷಿಯಾಗಿಟ್ಟುಕೊಂಡು ಮಾಡಿದ ಪ್ರಮಾಣವಚನಕ್ಕೂ ಇವರ ನಡವಳಿಕೆಗೂ ಸಂಬಂಧ ಇಲ್ಲ.

‘ಇದು ಏನಿದ್ದರೂ ಆರ್‌ಎಸ್‌ಎಸ್ ಅಜೆಂಡಾವನ್ನು ಅನುಷ್ಠಾನಗೊಳಿಸುತ್ತಿರುವ ಸರ್ಕಾರ. ಅಂತರರಾಷ್ಟ್ರೀಯ ರೇಟಿಂಗ್ ಏಜನ್ಸಿಗಳನ್ನು ನೀವು ಗಮನಿಸಿದರೆ, ಬಡತನ, ಆರೋಗ್ಯ, ಶಿಕ್ಷಣ, ಉದ್ಯೋಗ, ಅಭಿವ್ಯ‍ಕ್ತಿ ಸ್ವಾತಂತ್ರ್ಯ– ಈ ಎಲ್ಲ ಕ್ಷೇತ್ರಗಳಲ್ಲಿಯೂ ಭಾರತದ ಸ್ಥಾನ ಕುಸಿದಿದೆ. ನರೇಂದ್ರ ಮೋದಿಯವರು ಕೇವಲ ಒಬ್ಬ ಕೋಮುವಾದಿ ಮಾತ್ರ ಅಲ್ಲ, ಇವರೊಬ್ಬ ವಿಫಲ ಆಡಳಿತಗಾರ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೋಮುವಾದದ ಅಸ್ತ್ರವನ್ನು ಬಳಸುತ್ತಿದ್ದಾರೆ. ಇದು ಬಿಜೆಪಿಯ ಎಲ್ಲ ಮುಖ್ಯಮಂತ್ರಿಗಳು ಮತ್ತು ಸಚಿವರಿಗೆ ಅನ್ವಯಿಸುತ್ತದೆ.

* ಮತ್ತೆ ಚುನಾವಣೆ ಸಮೀಪಿಸುತ್ತಿದೆ. ನಿಮ್ಮ ಜನ್ಮದಿನದ ಸಂಭ್ರಮದಲ್ಲಿರುವ ಪಕ್ಷದ ಕಾರ್ಯಕರ್ತರಿಗೆ ನಿಮ್ಮ ಸಂದೇಶ ಏನು?

ಸಿದ್ದರಾಮಯ್ಯ: ಕಾರ್ಯಕರ್ತರು ನಮ್ಮ ಆಸ್ತಿ. ಅವರ ಶ್ರಮದ ಫಲವಾಗಿ ನಾವು ನಾಯಕರಾಗಿ ಬೆಳೆದಿದ್ದೇವೆ. ವಿರೋಧಪಕ್ಷದಲ್ಲಿರುವಾಗ ಕಾರ್ಯಕರ್ತರ ಜವಾಬ್ದಾರಿ ಇನ್ನೂ ಹೆಚ್ಚಿನದಾಗಿರುತ್ತದೆ. ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುವುದರ ಜೊತೆಗೆ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳನ್ನು ಜನರಿಗೆ ನೆನಪು ಮಾಡಿಕೊಡುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಬೇಕು. ನಮ್ಮ ಬಹಳಷ್ಟು ಕಾರ್ಯಕ್ರಮಗಳಿಗೆ ಈಗಿನ ಸರ್ಕಾರ ಅನುದಾನ ನೀಡದೆ ಕೊಂದುಹಾಕುತ್ತಿದೆ. ಇದನ್ನು ಜನತೆಗೆ ಅವರು ಮನದಟ್ಟು ಮಾಡಿಕೊಡಬೇಕು.

* ರಾಜ್ಯದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಏನನ್ನಿಸುತ್ತಿದೆ?

ಸಿದ್ದರಾಮಯ್ಯ: ರಾಜ್ಯದಲ್ಲಿನ ಇತ್ತೀಚಿನ ಬೆಳವಣಿಗೆ ಅತ್ಯಂತ ಕಳವಳಕಾರಿಯಾದುದು. ಬಿಜೆಪಿಯ ಹಿಂದಿನ ಅಧಿಕಾರವಧಿಯಲ್ಲಿ ದೇಶದಲ್ಲಿ ಅತ್ಯಂತ ಭ್ರಷ್ಟ ರಾಜ್ಯ ಕರ್ನಾಟಕ ಎಂಬ ದೂಷಣೆಗೆ ಪಾತ್ರವಾಗಿತ್ತು. ಅದೇ ಪರಂಪರೆ ಮುಂದುವರಿದಿದೆ. ಇದು 40% ಭ್ರಷ್ಟಾಚಾರ ಹಾಗೂ 60% ಕೋಮುವಾದದ ಸರ್ಕಾರ. ಅಭಿವೃದ್ಧಿ ಶೂನ್ಯ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್‌ಎಸ್‌ಎಸ್ ಪಂಚರದೊಳಗಿನ ಗಿಣಿ. ಮಾಲೀಕ ಹೇಳಿದ ಹಾಗೆ ಉಲಿಯುತ್ತಿದ್ದಾರೆ.

* ರಾಜಕಾರಣದಲ್ಲಿ ಜಾತಿ, ಧರ್ಮ ನುಸುಳಿರುವುದರಿಂದ ಭವಿಷ್ಯದಲ್ಲಿ ಉಂಟಾಗುವ ಪರಿಣಾಮಗಳು ಏನು?

ಸಿದ್ದರಾಮಯ್ಯ: ಧರ್ಮ ಎನ್ನುವುದು ಬೆಳಕು, ಕೋಮುವಾದ ಎನ್ನುವುದು ಬೆಂಕಿ. ಬೆಂಕಿ ಸುಡುತ್ತದೆ, ಬೆಳಕು ಸರಿಯಾದ ದಾರಿ ತೋರಿಸುತ್ತದೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಕುರುಡಾಗಿ ಬೆಂಬಲಿಸಿದ್ದ ಕಾರ್ಯಕರ್ತರೇ ತಿರುಗಿಬೀಳುತ್ತಿರುವುದನ್ನು ನೋಡಿದರೆ ಸುಡುವ ಬೆಂಕಿಯ ಅರಿವು ಅವರಿಗೆ ಆಗಿದೆ ಎಂದು ಅನಿಸುತ್ತಿದೆ. ನನಗೆ ಭವಿಷ್ಯದ ಮೇಲೆ ಭರವಸೆ ಇದೆ.

* ರಾಜಕೀಯ ಕ್ಷೇತ್ರಕ್ಕೆ ಧುಮುಕುವ ಯುವಜನತೆಗೆ ನಿಮ್ಮ ಸಲಹೆ?

ಸಿದ್ದರಾಮಯ್ಯ: ರಾಜಕೀಯ ಕ್ಷೇತ್ರಕ್ಕೆ ಯುವಜನರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಬರಬೇಕು ಎನ್ನುವುದು ನನ್ನ ಅಭಿಪ್ರಾಯ. ದುಡ್ಡು, ಜಾತಿ, ತೋಳ್ಬಲವನ್ನು ಆಶ್ರಯಿಸದೆ ಜನ ಸೇವೆಯ ಮೂಲಕ ಜನತೆಯ ವಿಶ್ವಾಸವನ್ನು ಗಳಿಸಿ ಜನರಿಂದ, ಜನರಿಗಾಗಿ ರಾಜಕೀಯಕ್ಕೆ ಬನ್ನಿ ಎಂದಷ್ಟೇ ಸಲಹೆ ನೀಡಬಲ್ಲೆ.

* ಸಿದ್ದರಾಮಯ್ಯ ನೇರನುಡಿಗೆ ಹೆಸರುವಾಸಿ. ಈ ಗುಣ ನಿಮಗೆ ಎಷ್ಟರ ಮಟ್ಟಿಗೆ ಸಹಕಾರಿಯಾಗಿದೆ?

ಸಿದ್ದರಾಮಯ್ಯ: ಇದು ಬಹಳ ಒಳ್ಳೆಯ ಪ್ರಶ್ನೆ. ನೇರ ನಡೆ–ನುಡಿ ರಾಜಕೀಯದಲ್ಲಿ ನಡೆಯುವುದಿಲ್ಲ ಎಂದು ಹೇಳುವವರು ನಮ್ಮ ಜನರ ಎದೆಯ ದನಿಯನ್ನು ಅರ್ಥಮಾಡಿಕೊಂಡಿಲ್ಲ. ನನ್ನ ನೇರ ನಡೆ–ನುಡಿ ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿದ ನನ್ನನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಸುಳ್ಳು ಅಲ್ಪಾಯುಷಿ, ಸತ್ಯ ಅಮರ. ನೇರ ನುಡಿಯಿಂದ ನನಗೆ ತಾತ್ಕಾಲಿಕವಾಗಿ ಹಿನ್ನಡೆಯಾಗಿರಬಹುದು. ಆದರೆ ದೀರ್ಘಕಾಲದಲ್ಲಿ ಅದು ನನಗೆ ಸಹಕಾರಿಯಾಗಿದೆ.

* 75ನೇ ಜನ್ಮದಿನ ಆಚರಣೆ ಪ್ರತಿ ವ್ಯಕ್ತಿಯ ಸಂಭ್ರಮದ ಕ್ಷಣ. ಈ ಸಂದರ್ಭವನ್ನು ಹೇಗೆ ಸ್ಮರಣೀಯವಾಗಿಸಿಕೊಳ್ಳಲು ಇಷ್ಟಪಡುತ್ತೀರಿ?

ಸಿದ್ದರಾಮಯ್ಯ: ದೇವರು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಾಣುತ್ತಾನೆ. ಮಹಾತ್ಮ ಗಾಂಧೀಜಿಯವರು ಸತ್ಯವೇ ದೇವರು ಎಂದು ಹೇಳಿದ್ದರು. ವರನಟ ರಾಜ್‌ಕುಮಾರ್ ಅಭಿಮಾನಿಗಳೇ ನನ್ನ ದೇವರು ಎನ್ನುತ್ತಿದ್ದರು. ರಾಜಕಾರಣಿಯಾದ ನನ್ನ ಪಾಲಿಗೆ ರಾಜ್ಯದ ಆರೂವರೆ ಕೋಟಿ ಜನರು ನನ್ನ ದೇವರು. ಈ ಬದುಕಿನ ಉಳಿದ ಅವಧಿಯನ್ನು ಜನತಾ ಜನಾರ್ದನರಿಗೆ ಅರ್ಪಿಸಿಕೊಳ್ಳುವ ಮೂಲಕ ನನ್ನ 75ನೇ ವರ್ಷದ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಿಕೊಳ್ಳಲು ಇಷ್ಟಪಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.