ADVERTISEMENT

ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ಮಸೂದೆಗೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 16:32 IST
Last Updated 21 ಸೆಪ್ಟೆಂಬರ್ 2021, 16:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದ ಸಾರ್ವಜನಿಕ ಸ್ಥಳಗಳಲ್ಲಿರುವ ಎಲ್ಲ ‘ಅನಧಿಕೃತ ಧಾರ್ಮಿಕ ಕಟ್ಟಡ’ಗಳನ್ನು ರಕ್ಷಿಸುವ ಉದ್ದೇಶದಿಂದ ರೂಪಿಸಿರುವ ‘ಕರ್ನಾಟಕ ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ಮಸೂದೆ–2021’ಕ್ಕೆ ವಿಧಾನಸಭೆ ಮಂಗಳವಾರ ಅಂಗೀಕಾರ ನೀಡಿತು.

ನಂಜನಗೂಡು ತಾಲ್ಲೂಕಿನ ದೇವಸ್ಥಾನವೊಂದನ್ನು ತೆರವುಗೊಳಿಸಿದ ಘಟನೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಉಳಿದಿರುವ 2,000ಕ್ಕೂ ಹೆಚ್ಚು ಅನಧಿಕೃತ ಧಾರ್ಮಿಕ ಕಟ್ಟಡಗಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ಮಸೂದೆ ರೂಪಿಸಿದ್ದ ರಾಜ್ಯ ಸರ್ಕಾರ, ಸೋಮವಾರ ಅದನ್ನು ವಿಧಾನಸಭೆಯಲ್ಲಿ ಮಂಡಿಸಿತ್ತು. ಮಂಗಳವಾರ ಚರ್ಚೆಯ ಬಳಿಕ ಮಸೂದೆಗೆ ಸದನದ ಒಪ್ಪಿಗೆ ದೊರಕಿತು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ನಂಜನಗೂಡಿನಲ್ಲಿ ದೇವಸ್ಥಾನವನ್ನು ಧ್ವಂಸಗೊಳಿಸಿದ ಪ್ರಕರಣ ರಾಜ್ಯ ಸರ್ಕಾರದ ಗಮನಕ್ಕೆ ಬಾರದೇ ನಡೆದಿದೆ ಎಂಬುದನ್ನು ನಂಬಲಾಗದು. ಹಾಗೆ ಆಗಿದ್ದರೆ, ಸರ್ಕಾರ ಏಕೆ ಇದೆ? ಎಲ್ಲವೂ ಸರ್ಕಾರಕ್ಕೆ ತಿಳಿದಿತ್ತು. ಸುಪ್ರೀಂಕೋರ್ಟ್‌ ತೀರ್ಪು ಬಂದು 12 ವರ್ಷಗಳಾಗಿವೆ. ಹಿಂದೆ ತೆರವು ಮಾಡಿರುವ ಧಾರ್ಮಿಕ ಕಟ್ಟಡಗಳ ಕತೆ ಏನು’ ಎಂದು ಪ್ರಶ್ನಿಸಿದರು.

ADVERTISEMENT

‘ಬಿಜೆಪಿ ಸರ್ಕಾರದವರೇ ದೇವಸ್ಥಾನ ಒಡೆದು ಹಾಕಿ, ಈಗ ರಕ್ಷಣೆಯ ಮಾತನ್ನಾಡುತ್ತಿದ್ದಾರೆ. ಹಿಂದೂ ಮಹಾಸಭಾ, ಹಿಂದೂ ಜಾಗರಣ ವೇದಿಕೆಯ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ಮಸೂದೆ ತಂದಿದ್ದಾರೆ. ಸದ್ಭಾವನೆಯಿಂದ ಧಾರ್ಮಿಕ ಕಟ್ಟಡ ಒಡೆಯುವ ಅಧಿಕಾರಿಗಳ ವಿರುದ್ಧ ಕ್ರಮ ಇಲ್ಲ ಎಂಬ ಅಂಶ ಮಸೂದೆಯಲ್ಲಿದೆ. ಇದು ಸರಿಯಲ್ಲ. ದೇವಸ್ಥಾನ ಒಡೆಯುವುದು ಸದ್ಭಾವನೆಯೆ? ಆ ಅಂಶವನ್ನು ಮಸೂದೆಯಿಂದ ಕೈಬಿಡಬೇಕು’ ಎಂದು ಆಗ್ರಹಿಸಿದರು.

ಜೆಡಿಎಸ್‌ನ ಬಂಡೆಪ್ಪ ಕಾಶೆಂಪೂರ ಮಾತನಾಡಿ, ‘ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿ ಹಲವು ವರ್ಷಗಳು ಕಳೆದಿವೆ. ಬಿಜೆಪಿ ಸರ್ಕಾರ ಈಗ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದೆ. ಹಿಂದೆ ತೆರವು ಮಾಡಿರುವ ಎಲ್ಲ ಧಾರ್ಮಿಕ ಕಟ್ಟಡಗಳನ್ನೂ ಪುನರ್‌ ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿದರು.

‘ವಿದೇಶಗಳಿಂದ ಬಂದವರು ಗುಡಿ, ಗುಂಡಾರಗಳನ್ನು ಒಡೆದರು ಎಂಬ ಮಾತನ್ನು ಹಿಂದೆ ಓದುತ್ತಿದ್ದೆವು. ಬಿಜೆಪಿ ಸರ್ಕಾರದವರು ದೇವಸ್ಥಾನ ಒಡೆದರು ಎಂಬುದು ಇತಿಹಾಸದ ಭಾಗವಾಗದಿರಲಿ’ ಎಂದು ಕಾಂಗ್ರೆಸ್‌ನ ಯು.ಟಿ. ಖಾದರ್‌ ಹೇಳಿದರು. ಈ ಮಾತು ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ನಡುವೆ ಕೆಲಕಾಲ ಮಾತಿನ ಸಮರಕ್ಕೂ ಕಾರಣವಾಯಿತು.

ಲೋಪ ಸರಿಪಡಿಸಲು ಮಸೂದೆ: ಚರ್ಚೆಗೆ ಉತ್ತರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ‘ಸುಪ್ರೀಂಕೋರ್ಟ್‌ ಆದೇಶವನ್ನು ಪಾಲಿಸುವ ಅಧಿಕಾರಿಗಳ ಅತ್ಯುತ್ಸಾಹದಿಂದ ಈ ಘಟನೆ ನಡೆದಿದೆ. ನಿಮ್ಮ ಕಾಲದಲ್ಲೂ ಹಲವು ದೇವಸ್ಥಾನಗಳ ತೆರವು ನಡೆದಿದೆ. ಅದಕ್ಕೆ ನಿಮ್ಮನ್ನು ಹೊಣೆ ಮಾಡಲಾದೀತೆ’ ಎಂದು ಪ್ರಶ್ನಿಸಿದರು.

ಈ ಮಸೂದೆಯು ಕಾನೂನಿನ ವ್ಯಾಪ್ತಿಗೆ ಒಳಪಟ್ಟಿರುವ ಎಲ್ಲ ಅನಧಿಕೃತ ಧಾರ್ಮಿಕ ಕಟ್ಟಡಗಳಿಗೆ ರಕ್ಷಣೆ ನೀಡಲಿದೆ. ಇನ್ನು ಮುಂದೆ ಅನಧಿಕೃತ ಧಾರ್ಮಿಕ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.