ADVERTISEMENT

ಶಿಕ್ಷಣದ ಕೇಸರೀಕರಣಕ್ಕೆ ಆರ್‌ಎಸ್‌ಎಸ್‌ ಯತ್ನ: ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 16:15 IST
Last Updated 6 ಅಕ್ಟೋಬರ್ 2021, 16:15 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ಶಿಕ್ಷಣದ ಕೇಸರೀಕರಣಕ್ಕೆ ಯತ್ನಿಸುತ್ತಿರುವ ಆರ್‌ಎಸ್ಎಸ್‌, ಶಾಲಾ, ಕಾಲೇಜುಗಳ ಆಯಕಟ್ಟಿನ ಹುದ್ದೆಗಳಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಜತೆ ನಂಟು ಹೊಂದಿದ್ದವರನ್ನೇ ತಂದು ಕೂರಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಬುಧವಾರ ಅವರು, ‘ಆರ್‌ಎಸ್‌ಎಸ್‌ನವರು ಶಿಕ್ಷಣ ಸಂಸ್ಥೆ, ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ಶಿಕ್ಷಣ ಸಂಸ್ಥೆಗಳೂ ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳ ಉನ್ನತ ಹುದ್ದೆಗಳಲ್ಲಿ ತಮ್ಮ ಸಂಘಟನೆಯವರನ್ನೇ ನೇಮಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರಾಧ್ಯಾಪಕರು, ಪ್ರಾಂಶುಪಾಲರ ನೇಮಕದಲ್ಲೂ ಈ ಕೆಲಸ ನಡೆಯುತ್ತಿದೆ’ ಎಂದು ದೂರಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದಂತಾಗಿದೆ. ಸಚಿವರು, ಶಾಸಕರು ಮತ್ತು ಇತರ ಕೆಲವರು ಕೋವಿಡ್‌ ಆರಂಭದ ಸಮಯದಿಂದಲೂ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ. ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಎಲ್ಲ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.

ADVERTISEMENT

ಉತ್ತರ ಪ್ರದೇಶದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಚಲಾಯಿಸಿ, ಹತ್ಯೆಮಾಡಿದ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ತಿರುಚಲಾಗುತ್ತಿದೆ. ಹರ್ಯಾಣ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಮಿಶ್ರಾ ಹೇಳಿಕೆ ನೋಡಿದರೆ ಇದು ಗೊತ್ತಾಗುತ್ತದೆ. ಈ ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಆರೆಸ್ಸೆಸ್‌ ಸಾಮಾಜಿಕ ನ್ಯಾಯದ ವಿರೋಧಿ

‘ಆರ್‌ಎಸ್‌ಎಸ್‌ ಸಾಮಾಜಿಕ ನ್ಯಾಯದ ವಿರೋಧಿ. ಮನುಸ್ಮೃತಿಯನ್ನು ಒಪ್ಪುವ ಈ ಸಂಘಟನೆ ಯಾವತ್ತೂ ಸಾಮಾಜಿಕ ನ್ಯಾಯದ ಪರವಾಗಿ ಮಾತನಾಡಿಲ್ಲ’ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಆರ್‌ಎಸ್‌ಎಸ್‌ ಕುರಿತಂತೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಆರ್‌ಎಸ್‌ಎಸ್‌ ಪುಸ್ತಕಗಳನ್ನು ಓದಿ ಆಗ ನಿಮಗೆ ಅರ್ಥವಾಗುತ್ತದೆ. ನಾನು 16ನೇ ವರ್ಷದಿಂದ ಆರ್‌ಎಸ್‌ಎಸ್‌ ವಿರುದ್ಧ ಹೋರಾಡುತ್ತಿದ್ದೇನೆ. ಮುಂದೆಯೂ ಹೋರಾಡುವೆ. ಈ ಕಾರಣಕ್ಕಾಗಿಯೇ ನಾನು ಚುನಾವಣೆಯಲ್ಲಿ ಸೋಲು ಅನುಭವಿಸಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.