ADVERTISEMENT

ಶೋಭಾ ರೈತರ ಸಂಕಷ್ಟಕ್ಕೆ ಸ್ಪಂದಿಸಲಿದ್ದಾರೆ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 7:15 IST
Last Updated 10 ಜುಲೈ 2021, 7:15 IST
ಕಲಬುರ್ಗಿಯಲ್ಲಿ ಲೋಕೋಪಯೋಗಿ ಇಲಾಖೆಯ ‌ನೂತನ ಕಟ್ಟಡವನ್ನು ‌ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಇದ್ದರು
ಕಲಬುರ್ಗಿಯಲ್ಲಿ ಲೋಕೋಪಯೋಗಿ ಇಲಾಖೆಯ ‌ನೂತನ ಕಟ್ಟಡವನ್ನು ‌ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಇದ್ದರು   

ಕಲಬುರ್ಗಿ: ಪ್ರಧಾನಿ ನರೇಂದ್ರ ‌ಮೋದಿ ಅವರ ಸಂಪುಟದಲ್ಲಿ ನೂತನ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆಯಾಗಿರುವ ಶೋಭಾ ಕರಂದ್ಲಾಜೆ ಅವರು ನಿಸ್ಸಂದೇಹವಾಗಿ ರೈತರ ಸಂಕಟಗಳಿಗೆ ಸ್ಪಂದಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ‌ಭರವಸೆ ವ್ಯಕ್ತಪಡಿಸಿದರು.

ನಗರದಲ್ಲಿ ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಲಾಗುತ್ತಿರುವ ₹ 26 ಕೋಟಿ ವೆಚ್ಚದ ಕಣ್ಣಿ ಮಾರ್ಕೆಟ್ ‌ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಶೋಭಾ ಅವರು ಜನನಾಯಕಿಯಾಗಿದ್ದು, ಅವರು ಹೋದಲ್ಲೆಲ್ಲ ಅವರ ಮಾತುಗಳನ್ನು ‌ಕೇಳಲು ಜನರು ಸಾಕಷ್ಟು ಸಂಖ್ಯೆಯಲ್ಲಿ ಸೇರುತಿದ್ದರು. ಈಗ ಸಚಿವೆಯೂ ಆಗಿರುವುದರಿಂದ ರಾಜ್ಯದಾದ್ಯಂತ ಸಂಚರಿಸಿ ರೈತರ ಸಮಸ್ಯೆಗಳನ್ನು ಆಲಿಸಲಿದ್ದಾರೆ ಎಂದರು.

ADVERTISEMENT

ಪ್ರಧಾನಿ ಮೋದಿ ಅವರು ರೈತರ ಆದಾಯವನ್ನು ದ್ವಿಗುಣಗೊಳಿಸುವ ಸಂಕಲ್ಪ ‌ಮಾಡಿದ್ದಾರೆ. ಅದಕ್ಕೆ ‌ಪೂರಕವಾಗಿ ದೇಶದಾದ್ಯಂತ ಕಡಿಮೆ ಅವಧಿಯಲ್ಲಿ ಸಂಚರಿಸುವ ‌ಕಿಸಾನ್ ಎಕ್ಸ್ಪ್ರೆಸ್ ರೈಲನ್ನು ‌ಆರಂಭಿಸಿದ್ದಾರೆ. ರಾಜ್ಯ ಸರ್ಕಾರವೂ ಹೂ ಬೆಳೆಯುವ ‌ರೈತರ ನೆರವಿಗೆ ಬಂದಿದ್ದು, ಹೂ ಬೆಳೆದು ನಷ್ಟ ‌ಮಾಡಿಕೊಂಡಿರುವ ರೈತರಿಗೆ ತಲಾ ₹ 10 ಸಾವಿರದಂತೆ 69 ಸಾವಿರ ರೈತರಿಗೆ ಪ್ರಯೋಜ‌ನ ದೊರೆಯಲಿದೆ ಎಂದರು.

ರಾಜ್ಯದಲ್ಲಿ ಪ್ರಥಮ ಬಾರಿಗೆ ರೈತರಿಗಾಗಿ ಮಾರುಕಟ್ಟೆ ‌ನಿರ್ಮಾಣವಾಗುತ್ತಿದೆ. ಈ ವಿಚಾರವನ್ನು ಪ್ರಧಾನಿ ಮೋದಿ ಅವರ ಗಮನಕ್ಕೆ ತರುತ್ತೇನೆ ಎಂದು ‌ಹೇಳಿದರು.

ನಗರಾಭಿವೃದ್ಧಿ ‌ಸಚಿವ ಭೈರತಿ ಬಸವರಾಜ, ಸಮಾಜ ಕಲ್ಯಾಣ ‌ಸಚಿವ ಬಿ.ಶ್ರೀರಾಮುಲು, ಸಹಕಾರ ‌ಸಚಿವ ಎಸ್.ಟಿ.ಸೋಮಶೇಖರ್, ಜಿಲ್ಲಾ ‌ಉಸ್ತುವಾರಿ ಸಚಿವ ಮುರುಗೇಶ ‌ನಿರಾಣಿ, ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ‌ಪಾಟೀಲ ರೇವೂರ, ಕಲಬುರ್ಗಿ ‌ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ ಧಾರವಾಡಕರ, ಜಿಲ್ಲಾಧಿಕಾರಿ ‌ವಿ.ವಿ. ಜ್ಯೋತ್ಸ್ನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.