ADVERTISEMENT

ಸಾಲದಲ್ಲಿ ಬಡ್ಡಿ ರಿಯಾಯಿತಿ; ಡಿಸಿಸಿ ಬ್ಯಾಂಕ್ ಜೊತೆ ಶೀಘ್ರ ಸಭೆ: ಸಚಿವ ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 22:44 IST
Last Updated 21 ಸೆಪ್ಟೆಂಬರ್ 2021, 22:44 IST
ಸೋಮಶೇಖರ್‌
ಸೋಮಶೇಖರ್‌   

ಬೆಂಗಳೂರು: ‘ರೈತರು ಪಹಣಿ ನೀಡಿದರೆ, ಅವರು ಚಿನ್ನಾಭರಣ ಅಡವಿಟ್ಟು ಪಡೆದ ಸಾಲದ ಬಡ್ಡಿಯಲ್ಲಿ ರಿಯಾಯಿತಿ ನೀಡುವ ಕುರಿತಂತೆ ಜಿಲ್ಲಾ ಸಹಕಾರ ಬ್ಯಾಂಕ್‌ಗಳ ಜೊತೆ ಶೀಘ್ರ ಸಭೆ ನಡೆಸಿ ತೀರ್ಮಾನಿಸಲಾಗುವುದು’ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

ಜೆಡಿಎಸ್‌ನ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಕೊಡಗು, ಚಿತ್ರದುರ್ಗ ಮತ್ತು ಬೀದರ್‌ ಜಿಲ್ಲಾ ಸಹಕಾರ ಬ್ಯಾಂಕ್‌ಗಳಲ್ಲಿ ಚಿನ್ನಾಭರಣದ ಸಾಲ ಪಡೆದ ರೈತರುಪಹಣಿ ನೀಡಿದರೆ, ನಿಗದಿತ ಬಡ್ಡಿಗಿಂತ ಶೇ 1ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ರಾಜ್ಯದಲ್ಲಿರುವ ಇತರ ಡಿಸಿಸಿ ಬ್ಯಾಂಕ್‌ಗಳಲ್ಲಿಯೂ ಬಡ್ಡಿ ರಿಯಾಯಿತಿ ಮತ್ತು ಏಕರೂಪದ ಬಡ್ಡಿ ದರ ನಿಗದಿಪಡಿಸುವ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ಭರವಸೆ ನೀಡಿದರು.

’ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್‌ ಚಿನ್ನಾಭರಣ ಸಾಲಗಳಿಗೆ ಶೇ 8.50 ಬಡ್ಡಿ ವಿಧಿಸುತ್ತಿದ್ದು, ‍ಪಹಣಿ ನೀಡಿದ ರೈತರಿಂದ ಶೇ 7.50ರಷ್ಟು ಬಡ್ಡಿ ಪಡೆಯುತ್ತಿದೆ. ಬೀದರ್‌ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಬ್ಯಾಂಕ್‌ಗಳು ಚಿನ್ನಾಭರಣ ಸಾಲಗಳಿಗೆ ಶೇ 10 ಬಡ್ಡಿ ವಿಧಿಸುತ್ತಿದ್ದು, ‍ಪಹಣಿ ನೀಡಿದ ರೈತರಿಂದ ಶೇ 9 ರಷ್ಟು ಬಡ್ಡಿ ಪಡೆಯುತ್ತಿವೆ’ ಎಂದೂ ಸಚಿವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.