ADVERTISEMENT

ಟಿಡಿಆರ್ ನಿಯಮ ಸರಳೀಕರಣ: ಬೊಮ್ಮಾಯಿ

ಬನ್ನೇರುಘಟ್ಟ, ಸರ್ಜಾಪುರ, ಬೇಗೂರು ರಸ್ತೆ ಭೂಮಾಲೀಕರಿಗೆ ಟಿಡಿಆರ್‌

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 22:42 IST
Last Updated 21 ಸೆಪ್ಟೆಂಬರ್ 2021, 22:42 IST
   

ಬೆಂಗಳೂರು: ನಗರದಲ್ಲಿ ಬಿಬಿಎಂಪಿ ಹಾಗೂ ಬಿಡಿಎ ಪ್ರತ್ಯೇಕವಾಗಿ ಟಿಡಿಆರ್‌ (ಅಭಿವೃದ್ಧಿ ಹಕ್ಕು ಹಸ್ತಾಂತರ) ನೀಡುತ್ತಿರುವುದರಿಂದ ಗೊಂದಲ ಉಂಟಾಗುತ್ತಿದೆ. ಇದನ್ನು ಸರಿಪಡಿಸಲು ಟಿಡಿಆರ್‌ ನಿಯಮ ಸರಳೀಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಎಂ.ಸತೀಶ ರೆಡ್ಡಿ ಪ್ರಶ್ನೆಗೆ ಉತ್ತರಿಸಿದ ಅವರು, ‘ಬನ್ನೇರುಘಟ್ಟ ರಸ್ತೆ, ಬೇಗೂರು ರಸ್ತೆ ಹಾಗೂ ಸರ್ಜಾಪುರ ರಸ್ತೆ ವಿಸ್ತರಣೆ ವೇಳೆ ಭೂಮಿ ಬಿಟ್ಟುಕೊಡುವ ಭೂಮಾಲೀಕರಿಗೆ ಟಿಡಿಆರ್‌ ನೀಡಲಾಗುವುದು’ ಎಂದರು.

ಭೂಸ್ವಾಧೀನ ಸಮಸ್ಯೆಯಿಂದಾಗಿ ಈ ಮೂರು ರಸ್ತೆಗಳ ವಿಸ್ತರಣೆ ವಿಳಂಬವಾಗುತ್ತಿದೆ. ಇಲ್ಲಿನ ಭೂಮಾಲೀಕರು ಟಿಡಿಆರ್ ಬದಲು ನಗದು ಪರಿಹಾರ ನೀಡುವಂತೆ ಪಟ್ಟು ಹಿಡಿದಿದ್ದಾರೆ.

ADVERTISEMENT

‘ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೊ ಮಾರ್ಗ ನಿರ್ಮಾಣವಾಗುತ್ತಿದೆ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಬೆಂಗಳೂರು ಮೆಟ್ರೊ ರೈಲು ನಿಗಮದವರು ಉತ್ತಮ ಪರಿಹಾರ ನೀಡಿದ್ದಾರೆ. ಮೆಟ್ರೊ ನಿಗಮದವರು ನೀಡಿದಷ್ಟೇ ಪರಿಹಾರವನ್ನು ಬಿಬಿಎಂಪಿಯವರು ನೀಡಬೇಕು ಎಂದು ಭೂಮಾಲೀಕರು ಒತ್ತಾಯಿಸಿದ್ದಾರೆ. ಇದರಿಂದಾಗಿ ಸಮಸ್ಯೆಯಾಗಿದೆ’ ಎಂದು ಮುಖ್ಯಮಂತ್ರಿ ತಿಳಿಸಿದರು.

‘ಭೂಮಾಲೀಕರು ಟಿಡಿಆರ್‌ಗೆ ಆಸಕ್ತಿ ತೋರಿಸದೆ ಇರುವುದರಿಂದ ಹಾಗೂ ಕೆಲವೊಂದು ಭೂಮಾಲೀಕರು ನ್ಯಾಯಾಲಯದಲ್ಲಿ ದಾವೆ ಹೂಡಿರುವುದರಿಂದ ಕಾಮಗಾರಿ ವಿಳಂಬವಾಗಿದೆ. ಮತ್ತೊಮ್ಮೆ ಭೂಮಾಲೀಕರ ಮನವೊಲಿಸಿ ಟಿಡಿಆರ್‌ ಮೂಲಕ ಭೂಸ್ವಾಧೀನಕ್ಕೆ ಪ್ರಯತ್ನಿಸಲಾಗುವುದು’ ಎಂದರು.

ಬನ್ನೇರುಘಟ್ಟ ರಸ್ತೆಯನ್ನು 2019ರ ಫೆಬ್ರುವರಿ ಅಂತ್ಯದೊಳಗೆ ಪೂರ್ಣಗೊಳಿಸಲು ಗಡುವು ನಿಗದಿಪಡಿಸಲಾಗಿತ್ತು. ಭೂಸ್ವಾಧೀನ ಸಮಸ್ಯೆಯಿಂದಾಗಿ ವಿಳಂಬವಾಗಿದೆ. 2022ರ ಮಾರ್ಚ್‌ ಒಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಸರ್ಜಾಪುರ ರಸ್ತೆ ಕಾಮಗಾರಿಯನ್ನು ಆರು ತಿಂಗಳಲ್ಲಿ ಮುಗಿಸಲಾಗುತ್ತದೆ’ ಎಂದು ಅವರು ಹೇಳಿದರು.

ಸತೀಶ್‌ ರೆಡ್ಡಿ, ‘ಬನ್ನೇರುಘಟ್ಟ ರಸ್ತೆ ವಿಸ್ತರಣೆ ವೇಳೆ ಮೆಟ್ರೊ ನಿಗಮದವರು ಚದರ ಅಡಿಗೆ ₹17 ಸಾವಿರ ಪರಿಹಾರ ನೀಡಿದ್ದಾರೆ. ಬಿಬಿಎಂಪಿಯವರು ₹8 ಸಾವಿರ ನೀಡಲು ಮುಂದೆ ಬಂದಿದ್ದಾರೆ. ಈ ಮೊತ್ತದ ಪರಿಹಾರವನ್ನು ಭೂಮಾಲೀಕರು ಒಪ್ಪುತ್ತಿಲ್ಲ. ಟಿಡಿಆರ್ ಬ್ಯಾಂಕ್ ಮಾಡಿದರೆ ಇಂತಹ ಸಮಸ್ಯೆ ಉದ್ಭವವಾಗುವುದಿಲ್ಲ’ ಎಂದರು.

ನಗರ ರೂಪದಲ್ಲಿ ಪರಿಹಾರ ನೀಡಿದರೆ ಭೂಸ್ವಾಧೀನಕ್ಕೆ ಬೇಕಾಗುವ ಮೊತ್ತ
ರಸ್ತೆ; ಮೊತ್ತ (₹ಕೋಟಿಗಳಲ್ಲಿ)
ಬನ್ನೇರುಘಟ್ಟ; 2320
ಬೇಗೂರು; 575
ಸರ್ಜಾಪುರ; 1580
ಒಟ್ಟು; 4475

137 ಕೋಟಿ ಲೀಟರ್‌ ಕೊಳಚೆ ನೀರು ಶುದ್ಧೀಕರಣ
‘ಬಿಬಿಎಂಪಿ ವ್ಯಾಪ್ತಿಯಲ್ಲಿ 144 ಕೋಟಿ ಲೀಟರ್ ಕೊಳಚೆ ನೀರು ಉತ್ಪತ್ತಿಯಾಗುತ್ತಿದೆ. 32 ಘಟಕಗಳ ಮೂಲಕ 137 ಕೋಟಿ ಲೀಟರ್‌ ಕೊಳಚೆ ನೀರನ್ನು ಶುದ್ಧೀಕರಿಸಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಕೆ.ಜೆ.ಜಾರ್ಜ್‌ ಪ್ರಶ್ನೆಗೆ ಉತ್ತರಿಸಿದ ಅವರು, ಆರು ತಿಂಗಳಲ್ಲಿ 29 ಕೋಟಿ ಲೀಟರ್‌ ಸಾಮರ್ಥ್ಯದ ನೂತನ ಘಟಕಗಳು ಕಾರ್ಯಾರಂಭ ಮಾಡಲಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.