ADVERTISEMENT

UPSC Results| ಯುಪಿಎಸ್‌ಸಿಯಲ್ಲಿ ಬೆಂಗಳೂರಿನ ಅಕ್ಷಯ್‌ ಸಿಂಹಗೆ 77ನೇ ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 16:42 IST
Last Updated 24 ಸೆಪ್ಟೆಂಬರ್ 2021, 16:42 IST
ಅಕ್ಷಯ್‌ ಸಿಂಹ ಕೆ.ಜೆ
ಅಕ್ಷಯ್‌ ಸಿಂಹ ಕೆ.ಜೆ    

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2020ನೇ ಸಾಲಿನ ಕೇಂದ್ರ ನಾಗರಿಕ ಸೇವಾ (ಐಎಎಸ್‌) ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, 77ನೇ ರ‍್ಯಾಂಕ್‌ ಪಡೆದಿರುವ ಬೆಂಗಳೂರಿನ ಕೆ.ಜೆ. ಅಕ್ಷಯ್‌ ಸಿಂಹ ರಾಜ್ಯಕ್ಕೆ ಮೊದಲಿಗರಾಗಿದ್ದಾರೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅಕ್ಷಯ್‌ ಸಿಂಹ, ‘ಮುಖ್ಯ ಪರೀಕ್ಷೆ ಚೆನ್ನಾಗಿ ಬರೆದಿದ್ದೆ. ಸಂದರ್ಶನವೂ ಚೆನ್ನಾಗಿಯೇ ಆಗಿತ್ತು. ಆದರೆ 77ನೇ ರ‍್ಯಾಂಕ್‌ ಗಳಿಸಬಹುದೆಂಬ ನಿರೀಕ್ಷೆ ಇರಲಿಲ್ಲ’ ಎಂದರು.

‘ಭಾರತೀಯ ವಿದೇಶಾಂಗ ಸೇವೆಗೆ (ಐಎಫ್‌ಎಸ್‌) ಸೇರುವ ಗುರಿ ಇದೆ. ಅದಕ್ಕೆ ಮೊದಲ ಆದ್ಯತೆ ನೀಡಿದ್ದೇನೆ. ಎಲ್ಲರೂ ಐಎಎಸ್‌ಗೆ ಪ್ರಾಧಾನ್ಯತೆ ನೀಡುವುದರಿಂದ ನನಗೆ ಐಎಫ್‌ಎಸ್‌ ಸಿಗಬಹುದೆಂಬ ನಿರೀಕ್ಷೆ ಇದೆ. ವಿದೇಶಗಳಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳು, ಸಮ್ಮೇಳನಗಳಲ್ಲಿ ಭಾರತವನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಷಯ. ಹೀಗಾಗಿ ಐಎಫ್‌ಎಸ್‌ನತ್ತ ಒಲವು ಹೊಂದಿದ್ದೇನೆ’ ಎಂದರು.

ADVERTISEMENT

‘2018ರಿಂದಲೇ ಸಿದ್ಧತೆ ಆರಂಭಿಸಿದ್ದೆ. ಈ ಸಾಧನೆಯ ಶ್ರೇಯ ದೊಡ್ಡಪ್ಪ ಸತ್ಯನಾರಾಯಣ ಅವರಿಗೆ ಸಲ್ಲಬೇಕು. ಆದಾಯ ತೆರಿಗೆ ಇಲಾಖೆಯಲ್ಲಿ ಪ್ರಧಾನ ಮುಖ್ಯ ಆಯುಕ್ತರಾಗಿ ಕೆಲಸ ಮಾಡಿ ನಿವೃತ್ತರಾಗಿರುವ ಅವರು ಪ್ರತಿ ಹಂತದಲ್ಲೂ ಸಲಹೆ, ಮಾರ್ಗದರ್ಶನ ನೀಡಿದ್ದರು. ಇನ್‌ಸೈಟ್‌ ಅಕಾಡೆಮಿಯ ವಿನಯ್‌ಕುಮಾರ್‌, ವೆಂಕಟೇಶಪ್ಪ ಅವರ ಸಹಕಾರವನ್ನೂ ಮರೆಯುವಂತಿಲ್ಲ’ ಎಂದರು.

‘ಕೋವಿಡ್‌, ಭಯೋತ್ಪಾದಕತೆ ಹೀಗೆ ನಾನಾ ಸಮಸ್ಯೆಗಳು ಈಗ ಕಾಡುತ್ತಿವೆ. ಇವುಗಳ ವಿರುದ್ಧ ಎಲ್ಲಾ ದೇಶಗಳೂ ಒಗ್ಗಟ್ಟಾಗಿ ಹೋರಾಡಬೇಕು. ಮುಂದೆ ಏನು ಮಾಡಬಹುದು ಎಂಬುದರ ಬಗ್ಗೆ ಹೆಚ್ಚು ಆಲೋಚಿಸಿಲ್ಲ. ಬೇರೆ ಬೇರೆ ದೇಶಗಳಿಗೆ ಭೇಟಿ ನೀಡಿ ಅವರಿಂದ ಹೊಸ ವಿಚಾರಗಳನ್ನು ಕಲಿಯಬೇಕಿದೆ’ ಎಂದರು. ಅಕ್ಷಯ್‌ ಸಿಂಹ ಅವರು ಜಯಸಿಂಹ ಹಾಗೂ ಉಷಾ ದಂಪತಿಯ ಮಗ. ನಗರದ ಸಜ್ಜನರಾವ್‌ ವೃತ್ತದ ಬಳಿಯ ವಾಸವಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.