ADVERTISEMENT

ಯುದ್ಧ ವಿಮಾನ ‘ತೇಜಸ್‌’ ಬಗ್ಗೆ ಅಮೆರಿಕಾ, ಆಸ್ಟ್ರೇಲಿಯಾ ಆಸಕ್ತಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 20:02 IST
Last Updated 19 ಸೆಪ್ಟೆಂಬರ್ 2021, 20:02 IST

ಬೆಂಗಳೂರು: ಎಚ್‌ಎಎಲ್‌ನ ಹಗುರ ಯುದ್ಧ ವಿಮಾನ ‘ತೇಜಸ್‌’ ಖರೀದಿಗೆ ಮಲೇಷ್ಯಾದ ರಾಯಲ್‌ ಮಲೇಷಿಯನ್ ಏರ್‌ಫೋರ್ಸ್‌ ಆಸಕ್ತಿ ತಳೆದಿರುವ ಬೆನ್ನಲ್ಲೇ, ಅಮೆರಿಕಾದ ನೌಕಾಪಡೆ ತರಬೇತಿ ಯುದ್ಧ ವಿಮಾನದ (ಎಲ್‌ಸಿಎ) ಬಗ್ಗೆ ಆಸಕ್ತಿ ತೋರಿದೆ.

ಭಾರತೀಯ ವಾಯು ಪಡೆಗಾಗಿ ತೇಜಸ್‌ ಮಾರ್ಕ್‌ 1 ಎ ಶ್ರೇಣಿಯ 73 ಮತ್ತು 10 ತರಬೇತಿ ಯುದ್ಧ ವಿಮಾನಗಳನ್ನು ಖರೀದಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರ ಮೊತ್ತ ₹45,696 ಕೋಟಿ, ಇದರ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆ ಕಂಡುಕೊಳ್ಳಲು ಎಚ್‌ಎಎಲ್‌ ಮೈ ಚಳಿ ಬಿಟ್ಟು ಮುಂದಾಗಿದೆ.

ಭಾರತೀಯ ವಾಯು ಪಡೆದೊಡ್ಡ ಪ್ರಮಾಣದಲ್ಲಿ ತೇಜಸ್‌ ಖರೀದಿಸುತ್ತಿರುವುದರಿಂದ ಹಲವು ದೇಶಗಳು ಈ ಯುದ್ಧ ವಿಮಾನದ ಬಗ್ಗೆ ಆಸಕ್ತಿ ತೋರಿದ್ದು, ಆ ಪೈಕಿ ಮಲೇಷಿಯಾ ಪ್ರಮುಖವಾದುದು. 18 ತರಬೇತಿ ಹಗುರ ಯುದ್ಧ ವಿಮಾನಗಳ ಪೂರೈಕೆಗಾಗಿ ಮಲೇಷ್ಯಾದ ವಾಯುಪಡೆ ಈಗಾಗಲೇ ಟೆಂಡರ್‌ ಕರೆದಿದ್ದು, ಎಚ್‌ಎಎಲ್‌ ಅದರಲ್ಲಿ ಪಾಲ್ಗೊಳ್ಳುತ್ತಿದೆ.

ADVERTISEMENT

ಈ ಮಧ್ಯೆ ಅಮೆರಿಕಾದ ನೌಕಾಪಡೆಯು ಎಚ್‌ಎಎಲ್‌ನ ಹಗುರ ಯುದ್ಧ ವಿಮಾನದ ನೌಕಾ ರೂಪಾಂತರಕ್ಕೆ ಆಸಕ್ತಿ ತೋರಿದೆ. ಆಸ್ಟ್ರೇಲಿಯಾ ಕೂಡಾ ಈ ಬಗ್ಗೆ ಮಾಹಿತಿ ಪಡೆದಿದೆ. ವಿಶೇಷವಾಗಿ ಅಲ್ಲಿನ ನೌಕಾ ಪಡೆಗೆ ತರಬೇತಿ ಯುದ್ದ ವಿಮಾನದ ಅಗತ್ಯವಿದ್ದು, ಎಲ್‌ಸಿ ಡೆಕ್ ಅನ್ನು ಸಮೀಪಿಸುವ ಸಾಮರ್ಥ್ಯವನ್ನು ಹೊಂದಿದೆ. ಕಳೆದ ವರ್ಷದ ಜನವರಿಯಲ್ಲಿ ಎಲ್‌ಸಿಎ ವಿಮಾನ ವಾಹಕ ನೌಕೆ ಐಎನ್‌ಎಸ್‌ ವಿಕ್ರಮಾದಿತ್ಯದಲ್ಲಿ ಡೆಕ್‌ ಸಮೀಪ ಯಶಸ್ವಿಯಾಗಿ ಇಳಿಸಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

ಈ ಮಧ್ಯೆ ಎಚ್ಎಎಲ್‌ ಭಾರತೀಯ ನೌಕಾಪಡೆಯ ವಿಮಾನ ವಾಹಕ ನೌಕೆಯಿಂದ ಕಾರ್ಯ ನಿರ್ವಹಣೆ ಮಾಡಲು ಅವಳಿ ಎಂಜಿನ್‌ನ ಡೆಕ್‌ ಬೇಸ್ಡ್‌ ಫೈಟರ್‌ನ (ಟಿಇಡಿಬಿಎಫ್‌) ಹೊಸ ವಿನ್ಯಾಸವನ್ನೂ ಬಿಡುಗಡೆ ಮಾಡಿದೆ. ಇದು ಮಧ್ಯಮ ತೂಕದ 4.5 ನೇ ತಲೆಮಾರಿನ ಬಹು ಉಪಯೋಗಿ ವಿಮಾನವಾಗಿದೆ. ಮಲ್ಟಿ ರೋಲ್‌ ಕ್ಯಾರಿಯರ್‌ ಬೋರ್ನ್‌ ಫೈಟರ್‌(ಎಂಆರ್‌ಸಿಬಿಎಫ್‌) ಕಾರ್ಯಕ್ರಮದಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ನೌಕಾ ಪಡೆಯ ಮಿಗ್‌–29 ಕೆ ಫೈಟರ್‌ಗಳ ಈಗಿನ ತಂಡಕ್ಕೆ ಪೂರಕವಾಗಿದೆ, ಭವಿಷ್ಯದಲ್ಲಿ ಮೀಗ್‌–29 ಬದಲಿಗೆ ಇವುಗಳನ್ನೇ ಬಳಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.