ADVERTISEMENT

ಕಾಳಿ, ಕೃಷ್ಣಾ, ಕಾವೇರಿ ಜಲಮಾರ್ಗ: ಪ್ರಸ್ತಾವನೆಗೆ ಸಿಎಂ ಬೊಮ್ಮಾಯಿ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 22:22 IST
Last Updated 19 ಆಗಸ್ಟ್ 2022, 22:22 IST
   

ಬೆಂಗಳೂರು: ಕಾಳಿ, ಕೃಷ್ಣಾಮತ್ತು ಕಾವೇರಿ ನದಿ ಪ್ರದೇಶಗಳಲ್ಲಿ ಜಲಮಾರ್ಗ ರೂಪಿಸಿ, ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.

ಗುರುವಾರ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮೈಸೂರು– ಬೇಲೂರು– ಹಳೇಬೀಡು ಮತ್ತು ಹಂಪಿ– ಬಾದಾಮಿ– ಐಹೊಳೆ– ಪಟ್ಟದಕಲ್ಲು ಪ್ರವಾಸೋದ್ಯಮ ಸರ್ಕ್ಯೂಟ್‌ಗಳನ್ನು ತ್ವರಿತಗತಿಯಲ್ಲಿ ಅಭಿವೃದ್ಧಿಪಡಿಸಬೇಕು. ಮೈಸೂರು ಸರ್ಕ್ಯೂಟ್‌ ದಸರಾಗೆ ಹಾಗೂ ಹಂಪಿ ಸರ್ಕ್ಯೂಟ್‌ ದೀಪಾವಳಿ ವೇಳೆಗೆ ಉದ್ಘಾಟನೆಗೆ ಸಿದ್ಧವಾಗಬೇಕು ಎಂದು ಗಡುವು ನಿಗದಿ ಮಾಡಿದ್ದಾರೆ.

ADVERTISEMENT

ರಾಜ್ಯದ 10 ರಿಂದ 12 ಪ್ರಮುಖ ಕೆರೆಗಳ ಬಳಿ ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿ ಚಾರಣಕ್ಕೆ ಉತ್ತೇಜನ ನೀಡುವ ಮೂಲಕ ವಿದೇಶಿ ಮತ್ತು ಸ್ಥಳೀಯ ಪ್ರವಾಸಿಗರನ್ನೂ ಆಕರ್ಷಿಸಬೇಕು. ಹಿಡ್ಕಲ್‌, ಕಬಿನಿ, ಗೊರೂರು ಅಣೆಕಟ್ಟು ಪ್ರದೇಶದಲ್ಲಿ ಉದ್ಯಾನವನಗಳ ಅಭಿವೃದ್ಧಿ ಕೈಗೊಳ್ಳುವಂತೆಯೂ ಸೂಚಿಸಿದರು.

ಸ್ಮಾರಕಗಳ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಈ ಆಯವ್ಯಯದಲ್ಲಿ ಘೋಷಿಸಿರುವ ಸ್ಮಾರಕಗಳನ್ನು ದತ್ತು ಪಡೆಯುವ ಯೋಜನೆಗೆ ಮಾರ್ಗಸೂಚಿ ಹೊರಡಿಸಲಾಗಿದೆ. ಸ್ಮಾರಕಗಳ ವಿವರ ಹಾಗೂ ತಗಲುವ ವೆಚ್ಚದ ಪಟ್ಟಿ ಸಿದ್ಧಪಡಿಸಿಕೊಂಡು ವೆಬ್‌ಸೈಟ್‌ ರೂಪಿಸಬೇಕು ಎಂದು ಬೊಮ್ಮಾಯಿ ಹೇಳಿದರು.

ಬಾದಾಮಿಯ ಗುಹೆಗಳನ್ನು ಇನ್ನಷ್ಟು ಆಕರ್ಷಕವಾಗಿಸುವ ಕುರಿತು ಹಾಗೂ ಅಲ್ಲಿ ಪ್ರವಾಸಿ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು. ಕೇಂದ್ರದ ಪರ್ವತಮಾಲಾ ಮತ್ತು ರಾಜ್ಯ ಸರ್ಕಾರದ ಯೋಜನೆಗಳಡಿ ನಂದಿಬೆಟ್ಟ, ಯಾಣ, ಅಂಜನಾದ್ರಿ ಬೆಟ್ಟ, ಮುಳ್ಳಯ್ಯನಗಿರಿ, ಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ಬೆಟ್ಟದಲ್ಲಿ ರೋಪ್‌ವೇ ನಿರ್ಮಿಸುವ ಕುರಿತು ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿ ಚರ್ಚಿಸಿ ಕ್ರಮವಹಿಸಲಾಗುವುದು ಎಂದರು.

ರಾಜ್ಯದ ಕಡಲತೀರದಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮ ಉತ್ತೇಜಿಸಲು ಸಿ.ಆರ್‌.ಝೆಡ್‌ ಮಾನದಂಡಗಳನ್ನು ಸಡಿಲಗೊಳಿಸಲು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ ಅನುಮೋದನೆ ಪಡೆಯಲು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.

ಹಾವೇರಿ ಜಿಲ್ಲೆಯ ನವಿಲು ಧಾಮ, ಬಾಡ ಅರಮನೆ, ಶಿಲಾ ಉದ್ಯಾನ, ಜನಪದ ವಿ.ವಿ ವಸ್ತುಸಂಗ್ರಹಾಲಯ, ಶಿಶುನಾಳ ಮತ್ತು ಸವಣೂರನ್ನು ಒಳಗೊಂಡ ಪ್ರವಾಸಿ ಸರ್ಕ್ಯೂಟ್‌ ಆರಂಭಿಸಲು ಬೊಮ್ಮಾಯಿ ಸೂಚಿಸಿದರು.

ಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷಕಾ.ಪು.ಸಿದ್ದಲಿಂಗಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಇದ್ದರು.

*

ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಬೇಕು. ಈ ದೃಷ್ಟಿಯಿಂದ ಪರಿಣಾಮಕಾರಿ ಪ್ರಚಾರ ಕಾರ್ಯ ಹಾಗೂ ಪ್ರವಾಸಿ ತಾಣಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಬೇಕು.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.