ADVERTISEMENT

ನಾಳೆಯಿಂದಲೇ ರಾಜ್ಯದಾದ್ಯಂತ ವಾರಾಂತ್ಯ ಕರ್ಫ್ಯೂ ರದ್ದು: ಆರ್ ಅಶೋಕ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 11:11 IST
Last Updated 21 ಜನವರಿ 2022, 11:11 IST
   

ಬೆಂಗಳೂರು: ಆಂತರಿಕ ಒತ್ತಡ ಮತ್ತು ವಾಣಿಜ್ಯೋದ್ಯಮ ಸಮುದಾಯದ ಬೇಡಿಕೆಗೆ ತಲೆಬಾಗಿರುವ ಸರ್ಕಾರ ವಾರಾಂತ್ಯ ಕರ್ಫ್ಯೂವನ್ನು ಕೈಬಿಡಲು ನಿರ್ಧರಿಸಿದೆ. ಆದರೆ, ರಾತ್ರಿ ಕರ್ಫ್ಯೂ ಸೇರಿ ಉಳಿದ ಎಲ್ಲಾ ನಿಯಮಗಳು ಈಗಿರುವಂತೆ ಮುಂದುವರೆಯಲಿವೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕಂದಾಯ ಸಚಿವ ಆರ್‌.ಅಶೋಕ ಅವರು, ತಜ್ಞರ ಸಲಹೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ ಕೋವಿಡ್‌ನಿಂದ ಆಸ್ಪತ್ರೆಗೆ ಸೇರುವವರ ಸಂಖ್ಯೆ ಶೇ 5 ಇದ್ದು, ಒಂದು ವೇಳೆ ಆ ಪ್ರಮಾಣ ಶೇ 5 ಕ್ಕಿಂತ ಹೆಚ್ಚಾದರೆ ಮತ್ತೆ ವಾರಾಂತ್ಯ ಕರ್ಫ್ಯೂ ಜಾರಿ ಮಾಡಬೇಕಾಗುತ್ತದೆ. ಆದ್ದರಿಂದ ಸಾರ್ವಜನಿಕರು ಕೋವಿಡ್‌ ನಿಯಮಗಳನ್ನು ಪಾಲಿಸುವ ಮೂಲಕ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ADVERTISEMENT

ರಾತ್ರಿ ಕರ್ಫ್ಯೂ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಮುಂದುವರೆಯುತ್ತದೆ. ರಾತ್ರಿ ವೇಳೆಯಲ್ಲಿ ಕ್ಲಬ್‌, ಪಬ್, ಬಾರ್‌ಗಳಲ್ಲಿ ಹೆಚ್ಚು ಜನ ಸೇರುತ್ತಾರೆ ಮತ್ತು ಪಾರ್ಟಿಗಳು ನಡೆಯುತ್ತವೆ. ಆದ್ದರಿಂದ ರಾತ್ರಿ ಕರ್ಫ್ಯೂ ಮುಂದುವರಿಸಲಾಗಿದೆ. ಇದು ನಮ್ಮ ರಾಜ್ಯ ಮಾತ್ರ ಅಲ್ಲ, ಕೋವಿಡ್‌ ಹೆಚ್ಚಾಗಿರುವ ಎಲ್ಲ ರಾಜ್ಯಗಳಲ್ಲೂ ಅನುಸರಿಸಲಾಗುತ್ತಿದೆ. ಇದರಿಂದ ಜನರಲ್ಲೂ ಕೋವಿಡ್‌ ಇದೆಯ ಎಂಬ ಅರಿವೂ ಜನರಲ್ಲಿ ಇರುತ್ತದೆ ಎಂದು ಅಶೋಕ ಸಮರ್ಥಿಸಿಕೊಂಡರು.

ಇನ್ನು ಮುಂದೆ ರಾಜ್ಯವನ್ನು ಒಂದು ಘಟಕವನ್ನಾಗಿ ಪರಿಗಣಿಸಲಾಗುತ್ತದೆ. ವಾರಾಂತ್ಯ ಕರ್ಫ್ಯೂ ಹೊರತುಪಡಿಸಿ ಉಳಿದ ಎಲ್ಲ ನಿಯಮಗಳೂ ಜಾರಿಯಲ್ಲಿರುತ್ತವೆ. ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದರು.

ರಾಜ್ಯದಲ್ಲಿ ಒಟ್ಟು 2,93,241 ಸಕ್ರಿಯ ಪ್ರಕರಣಗಳಿದ್ದು, 2.86 ಲಕ್ಷ ಮಂದಿ ಮನೆಗಳಲ್ಲೇ ಪ್ರತ್ಯೇಕ ವಾಸವಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 5343 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ 340 ಜನ ಐಸಿಯುನಲ್ಲಿದ್ದು, 127 ಮಂದಿ ವೆಂಟಿಲೇಟರ್‌ನಲ್ಲಿದ್ದಾರೆ. ಈ ಎಲ್ಲ ಅಂಶವನ್ನು ಪರಿಗಣಿಸಿಯೇ ತಜ್ಞರು ವಾರಾಂತ್ಯ ಕರ್ಫ್ಯೂ ಕೈಬಿಡಲು ಸಲಹೆ ನೀಡಿದರು ಎಂದರು.

ಯಾವ ನಿರ್ಬಂಧ ಮುಂದುವರಿಕೆ

* ಮದುವೆ ಒಳಾಂಗಣ 100 ಜನ, ಹೊರಾಂಗಣ 200 ಜನಕ್ಕೆ ಅವಕಾಶ

* ಮೆರವಣಿಗೆ, ಜಾತ್ರೆ, ರ್‍ಯಾಲಿ, ಪ್ರತಿಭಟನೆ, ಧರಣಿಗಳಿಗೆ ಅವಕಾಶ ಇಲ್ಲ

* ಹೊಟೇಲ್‌, ರೆಸ್ಟೋರೆಂಟ್‌, ಬಾರ್‌, ಕ್ಲಬ್‌ ಮತ್ತಿತರ ಕಡೆಗಳಲ್ಲಿ ಶೇ 50:50 ನಿಯಮ

* ದೇವಸ್ಥಾನ, ಚರ್ಚ್‌, ಮಸೀದಿ, ಗುರುದ್ವಾರಗಳಲ್ಲಿ ಈಗಿರುವ ನಿಯಮಗಳೇ ಮುಂದುವರಿಯಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.