ADVERTISEMENT

ಸಲೀಂ ಜೊತೆ ಡಿಕೆಶಿ ಬಗ್ಗೆ ಮಾತು; ಉಗ್ರಪ್ಪ ವಿರುದ್ಧ ಕ್ರಮ ಏಕಿಲ್ಲ -ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 8:05 IST
Last Updated 19 ಅಕ್ಟೋಬರ್ 2021, 8:05 IST
 ಕೆ.ಎಸ್‌. ಈಶ್ವರಪ್ಪ
ಕೆ.ಎಸ್‌. ಈಶ್ವರಪ್ಪ    

ಕಲಬುರಗಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಗ್ಗೆ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಕೆಟ್ಟದಾಗಿ ಮಾತನಾಡಿರುವ ಎಂ.ಎ. ಸಲೀಂ ಅವರನ್ನು ಮಾತ್ರ ಪಕ್ಷದಿಂದ ಉಚ್ಚಾಟಿಸಿರುವ ಕಾಂಗ್ರೆಸ್, ಮಾತುಕತೆಯಲ್ಲಿ ಭಾಗವಹಿಸಿದ್ದ ವಿ.ಎಸ್. ಉಗ್ರಪ್ಪ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಸಿದ್ದರಾಮಯ್ಯ ಏಕೆ ಚಕಾರ ಎತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್‌. ಈಶ್ವರಪ್ಪ ಪ್ರಶ್ನಿಸಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೇರವಾಗಿ ಕೆಪಿಸಿಸಿ ಅಧ್ಯಕ್ಷರ ಪರ್ಸೆಂಟೇಜ್ ಲೆಕ್ಕಾಚಾರದ ಬಗ್ಗೆ ಅವರದೇ ಪಕ್ಷದ ಮುಖಂಡರು ಮಾತನಾಡಿದರೂ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಲ್ಲಿ ಸ್ಪಷ್ಟವಾಗಿ ರಾಜಕೀಯವಿದೆ. ತಾವು ಮುಸ್ಲಿಮರ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ನವರು ಅಲ್ಪಸಂಖ್ಯಾತ ಸಮುದಾಯದ ನಾಯಕನಿಗೆ ಮಾತ್ರ ಶಿಕ್ಷೆ ಕೊಡುವುದು ಎಷ್ಟು ಸರಿ. ಕಾಂಗ್ರೆಸ್ ಹೀನಾಯ ಸ್ಥಿತಿ ತಲುಪಿದೆ. ಶಿಸ್ತು ಕ್ರಮ ಕೈಗೊಳ್ಳುವಲ್ಲಿನ ತಾರತಮ್ಯದ ಬಗ್ಗೆ ಸಿದ್ದರಾಮಯ್ಯ ಮಾತನಾಡಬೇಕು. ಮೌನ ತಾಳಿದರೆ ಒಪ್ಪಿಗೆ ನೀಡಿದಂತೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಇಲ್ಲದ್ದು ಮಾತನಾಡುವ ಸಿದ್ದರಾಮಯ್ಯ ಯಾಕೆ ಮೌನ ವಹಿಸಿದ್ದಾರೆ’ ಎಂದು ಹೇಳಿದರು.

ADVERTISEMENT

‘ಮೋದಿ ಹೆಬ್ಬೆಟ್ಟು ಗಿರಾಕಿ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಎಲ್ಲ ದೇಶದವರು ಮೋದಿಯವರನ್ನು ಬಂಗಾರ ಅಂತಿದ್ದಾರೆ. ಮೋದಿ ಬಗ್ಗೆ ಮಾತನಾಡುವ ಯೋಗ್ಯತೆ ಕಾಂಗ್ರೆಸ್ಸಿಗರಿಗೆ ಇಲ್ಲ. ಅಂದು ಪ್ರಧಾನಿ ಆಗಿದ್ದ ಇಂದಿರಾಗಾಂಧಿ ಅವರು ಪಾಕಿಸ್ತಾನದ ವಿರುದ್ಧ ಯುದ್ಧ ಸಾರಿದಾಗ ಅಟಲ್ ಬಿಹಾರಿ ವಾಜಪೇಯಿ ಅವರು ದುರ್ಗೆ ಎಂದು ಬಣ್ಣಿಸಿದ್ದರು. ಈಗ ಪ್ರಧಾನಿ ಮೋದಿ ಅವರನ್ನು ನಿಂದಿಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.