ADVERTISEMENT

PV Web Exclusive: ಕುಳಿತಲ್ಲೇ ಬಿಆರ್‌ಟಿ ಅರಣ್ಯ ಸುತ್ತೋಣ ಬನ್ನಿ...

ಸೂರ್ಯನಾರಾಯಣ ವಿ
Published 24 ಫೆಬ್ರುವರಿ 2021, 8:27 IST
Last Updated 24 ಫೆಬ್ರುವರಿ 2021, 8:27 IST
ಬಿಆರ್‌ಟಿ ಅರಣ್ಯದ ವಿಹಂಗಮ ನೋಟ
ಬಿಆರ್‌ಟಿ ಅರಣ್ಯದ ವಿಹಂಗಮ ನೋಟ   

ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶ, ರಾಜ್ಯದ ಐದು ಹುಲಿ ಸಂರಕ್ಷಿತಾರಣ್ಯಗಳಲ್ಲಿ ಒಂದು. ಗಡಿ ಜಿಲ್ಲೆಯ ಚಾಮರಾಜನಗರದ ಎರಡನೇ ಹುಲಿ ಸಂರಕ್ಷಿತ ಪ್ರದೇಶ. ಚಾಮರಾಜನಗರ, ಯಳಂದೂರು ಮತ್ತು ಕೊಳ್ಳೇಗಾಲ ತಾಲ್ಲೂಕುಗಳ 574 ಚದರ ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಬಿಆರ್‌ಟಿ ಅರಣ್ಯ ಪ್ರದೇಶ ಜೀವ ವೈವಿಧ್ಯತೆಯ ತಾಣ. ಸುಮಾರು 60 ಹುಲಿಗಳಿಗೆ ಆಶ್ರಯ ನೀಡಿರುವ ಈ ಕಾನನವನ್ನು 2011ರಲ್ಲಿ ಹುಲಿ ಸಂರಕ್ಷಿತ ಪ್ರದೇಶದ ಎಂದು ಘೋಷಿಸಲಾಯಿತು. ಹುಲಿ ಮಾತ್ರವಲ್ಲದೇ, ಹಲವು ಅಪರೂಪದ ಪ್ರಾಣಿಗಳು, ಸಸ್ಯ ಪ್ರಭೇದಗಳು, 280ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳನ್ನು ಇದು ಪೊರೆಯುತ್ತಿದೆ.

ಜೀವ ವೈವಿಧ್ಯದ ತಾಣವಾಗಿರುವ ಬಿಆರ್‌ಟಿ ಕಾಡು ಬಲು ಅಪರೂಪದ ಅರಣ್ಯ. ಇಲ್ಲಿ ನಿತ್ಯ ಹರಿಧ್ವರ್ಣ, ಅರೆ ಹರಿದ್ವರ್ಣ, ಶೋಲಾ ಅರಣ್ಯ, ಎಲೆ ಉದುರುವ ಕಾಡು, ಹುಲ್ಲುಗಾವಲು ಸೇರಿದಂತೆ ಎಲ್ಲ ಪ್ರಕಾರದ ಕಾಡು ಇವೆ. ಒಂದೇ ಅರಣ್ಯದ ವ್ಯಾಪ್ತಿಯಲ್ಲಿ ಈ ಮಟ್ಟಿಗಿನ ವೈವಿಧ್ಯ ರಾಜ್ಯದಲ್ಲಿ ಇಲ್ಲವೇ ಇಲ್ಲ.

ಹುಲಿ ಸಂರಕ್ಷಿತ ಪ್ರದೇಶ

ಅರಣ್ಯದ ಒಳಗೆ ಬೆಟ್ಟ ಗುಡ್ಡಗಳ ಸಾಲು, ಹಳ್ಳ ಕೊಳ್ಳಗಳು, ತೊರೆ, ಝರಿಗಳು, ಚಾರಣ ಮಾಡಬಹುದಾದ ಪ್ರದೇಶಗಳು, ದೊಡ್ಡಸಂಪಿಗೆ, ಚಿಕ್ಕಸಂಪಿಗೆಯಂತಹ ಐತಿಹಾಸಿಕ, ಮನಸೂರೆಗೊಳ್ಳುವಂತಹ ಪ್ರದೇಶಗಳಿವೆ. ಇಲ್ಲೆಲ್ಲ ಪ್ರವಾಸೋದ್ಯಮಕ್ಕೆ ಅವಕಾಶಗಳಿದ್ದರೂ, ಹುಲಿ ಸಂರಕ್ಷಿತ ಪ್ರದೇಶವಾಗಿರುವುದರಿಂದ ಪ್ರವಾಸೋದ್ಯಮದ ಚಟುವಟಿಕೆಗಳಿಗೆ ನಿರ್ಬಂಧವಿದೆ. ಅರಣ್ಯದ ಕೋರ್ ವಲಯದಲ್ಲಿ ಯಾವುದೇ ಚಟುವಟಿಕೆಗೆ ಕಾನೂನು ಅವಕಾಶ ನೀಡುವುದಿಲ್ಲ. ಬಫರ್‌ ವಲಯದಲ್ಲಿ ಮಾತ್ರ ಪರಿಸರ ಸ್ನೇಹಿ ಪ್ರವಾಸೋದ್ಯಮ ನಡೆಸಬಹುದು. ಕೆ.ಗುಡಿ ವಲಯದಲ್ಲಿ (ಚಾಮರಾಜನಗರದಿಂದ ಬಿಳಿಗಿರಿ ರಂಗನಬೆಟ್ಟಕ್ಕೆ ಹೋಗುವ ದಾರಿಯಲ್ಲಿದೆ) ಸಫಾರಿ ಬಿಟ್ಟರೆ, ಬೇರೆ ಪ್ರವಾಸೋದ್ಯಮದ ಚಟುವಟಿಕೆ ನಡೆಯುತ್ತಿಲ್ಲ. ಅರಣ್ಯ ವ್ಯಾಪ್ತಿಯಲ್ಲೇ ಇರುವ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದಲ್ಲಿ ಧಾರ್ಮಿಕ ಪ್ರವಾಸೋದ್ಯಮ ಇದೆಯಷ್ಟೆ.

ADVERTISEMENT

ಜಿಲ್ಲೆಯಲ್ಲೇ ಇರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಷ್ಟು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಹೆಚ್ಚು ಪ್ರಸಿದ್ಧಿ ಅಲ್ಲ. ಬಂಡೀಪುರ ಸಫಾರಿಗೆ ಬರುವಷ್ಟು ಪ್ರವಾಸಿಗರು ಕೆ.ಗುಡಿ ಸಫಾರಿಗೆ ಬರುತ್ತಿಲ್ಲ. ಹಲವು ಪ್ರವಾಸಿಗರಿಗೆ ಇದರ ಬಗ್ಗೆ ಮಾಹಿತಿಯೂ ಇಲ್ಲ. ಬಂಡೀಪುರ ಸಫಾರಿಗೆ ಹೋಲಿಸಿದರೆ, ಇಲ್ಲಿನ ಸಫಾರಿಯ ಅನುಭವ ಸಂಪೂರ್ಣ ಭಿನ್ನ. ಪ್ರಾಣಿಗಳು ಕಡಿಮೆ ಸಂಖ್ಯೆಯಲ್ಲಿ ಗೋಚರಿಸಿದರೂ ದಟ್ಟ ಅರಣ್ಯದ ವೀಕ್ಷಣೆ ಮನಸ್ಸಿಗೆ ಮುದ ನೀಡುತ್ತದೆ (ಇತ್ತೀಚೆಗೆ ಹುಲಿಗಳು ಕೂಡ ಸಫಾರಿ ಸಮಯದಲ್ಲಿ ಕಾಣಿಸಿಕೊಳ್ಳುತ್ತಿವೆ).

ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಉತ್ತೇಜನ

ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಭಾಗವಾಗಿ ಹಾಗೂ ಜನರಿಗೆ ಬಿಆರ್‌ಟಿ ಅರಣ್ಯವನ್ನು ಪರಿಚಯಿಸುವ ದೃಷ್ಟಿಯಿಂದ ಅರಣ್ಯ ಇಲಾಖೆಯುಆಧುನಿಕ ತಂತ್ರಜ್ಞಾನ ಬಳಸಿಕೊಂಡುಕಾಡಿನೊಳಗಿರುವ ಸುಂದರವಾದ, ರುದ್ರ ರಮಣೀಯ ಸ್ಥಳ ಹಾಗೂ ದೃಶ್ಯಗಳನ್ನು ಹೊಂದಿರುವ ವರ್ಚ್ಯುವಲ್‌ ವಿಡಿಯೊವನ್ನು ಸಿದ್ಧಪಡಿಸಿದೆ. ವಿಶಿಷ್ಟ ಕ್ಯಾಮೆರಾದ ಮೂಲಕ 360 ಡಿಗ್ರಿ ಕೋನದಲ್ಲಿ ಭೂದೃಶ್ಯಗಳನ್ನು ಸೆರೆ ಹಿಡಿಯಲಾಗಿದ್ದು, 10 ನಿಮಿಷಗಳ ವಿಡಿಯೊವನ್ನು ಸಿದ್ಧಪಡಿಸಲಾಗಿದೆ.ಜನರು 3ಡಿ ಉಪಕರಣದ (3ಡಿ ವಿಆರ್‌ ಹೆಡ್‌ಸೆಟ್‌) ಮೂಲಕ ಈ ವಿಡಿಯೊ‌ವನ್ನು ವೀಕ್ಷಿಸಿ ಕುಳಿತಲ್ಲೇ ಅರಣ್ಯದಲ್ಲಿ ಸುತ್ತಾಡಿದ ಹಾಗೂ ಸುಂದರ ಪ್ರಕೃತಿಯನ್ನು ಕಣ್ತುಂಬಿಕೊಂಡ ಅನುಭವವನ್ನು ಪಡೆಯಬಹುದು. ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ಈ ತಿಂಗಳ ಆರಂಭದಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದರು.

ಕೆ.ಗುಡಿ ಸಫಾರಿ ಕೇಂದ್ರದಲ್ಲಿ ಪ್ರವಾಸಿಗರಿಗೆ ವಿಡಿಯೊ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ವಿಡಿಯೊ ವೀಕ್ಷಣೆಗೆ ₹50 ಶುಲ್ಕವನ್ನು ಇಲಾಖೆ ನಿಗದಿ ಪ‍ಡಿಸಿದೆ.

ರಾಜ್ಯದಲ್ಲಿ ಮೊದಲ ಪ್ರಯತ್ನ

ವರ್ಚ್ಯುವಲ್‌ ರಿಯಾಲಿಟಿ ಮೂಲಕ ಅರಣ್ಯವನ್ನು ಪರಿಚಯಿಸುವ ಪ್ರಯತ್ನವನ್ನು ಅರಣ್ಯ ಇಲಾಖೆ ರಾಜ್ಯದಲ್ಲಿ ಮಾಡಿರುವುದು ಇದೇ ಮೊದಲು. ಬಹುಶಃ ದೇಶದಲ್ಲಿ ಇದು ಎರಡನೆಯದು. ಅರುಣಾಚಲ ಪ್ರದೇಶದ ಈಗಲ್‌ನೆಸ್ಟ್‌ ವನ್ಯಧಾಮದಲ್ಲಿ ಇದೇ ರೀತಿಯ ಪ್ರಯತ್ನ ಮಾಡಲಾಗಿದೆ. ವಿಡಿಯೊವನ್ನು ವೀಕ್ಷಿಸಿದ್ದ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ಇಲಾಖೆಯ ಅಧಿಕಾರಿಗಳ ಪ್ರಯತ್ನಕ್ಕೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ಕೆಲವು ಪ್ರವಾಸಿಗರು ಕೂಡ ವಿಡಿಯೊ ನೋಡಿದ್ದು, ಸಕಾರಾತ್ಮಕ ಸ್ಪಂದನೆ ವ್ಯಕ್ತಪಡಿಸಿದ್ದಾರೆ ಎಂದು ಬಿಆರ್‌ಟಿ ಅರಣ್ಯದ ಅಧಿಕಾರಿಗಳು ಹೇಳಿದ್ದಾರೆ.

ವರ್ಚ್ಯುವಲ್‌ ರಿಯಾಲಿಟಿ

50 ದಿನಗಳಲ್ಲಿ ವಿಡಿಯೊ ಸಿದ್ಧ

ಅರುಣಾಚಲ ಪ್ರದೇಶದ ಈಗಲ್‌ನೆಸ್ಟ್‌ ವನ್ಯಧಾಮವದಲ್ಲಿ ವಿಡಿಯೊ ಸಿದ್ಧಪಡಿಸಿದ್ದ ವನ್ಯಜೀವಿ ಚಿತ್ರ ತಯಾರಕ ರಾಮ್‌ ಅಲ್ಲೂರಿ ಅವರೇ ಈ ವಿಡಿಯೊವನ್ನೂ ಸಿದ್ಧಪಡಿಸಿದ್ದಾರೆ. ತಮ್ಮ 360 ಡಿಗ್ರಿ ವಿಆರ್‌ ಕ್ಯಾಮೆರಾದ ಮೂಲಕ ಬಿಆರ್‌ಟಿ ಅರಣ್ಯದ ಸೌಂದರ್ಯವನ್ನು ಸೆರೆ ಹಿಡಿದಿದ್ದಾರೆ.

‘ಈಗಲ್‌ನೆಸ್ಟ್‌ ವನ್ಯಧಾಮದಲ್ಲಿ ಇಂತಹ ಪ್ರಯತ್ನ ನಡೆದಿದೆ ಎಂದು ಗೊತ್ತಾದ ನಂತರ ರಾಮ್‌ ಅಲ್ಲೂರಿ ಅವರನ್ನು ಸಂಪರ್ಕಿಸಿದೆವು. ಅವರು ನಮಗೂ ವರ್ಚ್ಯವಲ್‌ ರಿಯಾಲಿಟಿ ವಿಡಿಯೊ ಮಾಡಿಕೊಡುವುದಕ್ಕೆ ಒಪ್ಪಿಕೊಂಡರು. ಸಾಮಾನ್ಯವಾಗಿ ಇಂತಹ ವಿಡಿಯೊಗಳನ್ನು ಸಿದ್ಧಪಡಿಸುವುದಕ್ಕೆ ಹಲವು ತಿಂಗಳುಗಳೇ ಬೇಕು. ನಾವು,ಅರಣ್ಯದ ಭೂದೃಶ್ಯವನ್ನು (ಲ್ಯಾಂಡ್‌ಸ್ಕೇಪ್‌) ಮಾತ್ರ ಸೆರೆ ಹಿಡಿಯಲು ಒತ್ತು ನೀಡಿದ್ದೇವೆ. 50 ದಿನಗಳಲ್ಲಿ ವಿಡಿಯೊ ಸಿದ್ಧಪಡಿಸಿದ್ದೇವೆ. 360 ಡಿಗ್ರಿ ಕೋನದಲ್ಲಿ ಚಿತ್ರೀಕರಿಸುವ ಕ್ಯಾಮೆರಾ ಬಳಸಿದ್ದೇವೆ. ಆ ಕ್ಯಾಮೆರಾವನ್ನು ಡ್ರೋನ್‌ನಲ್ಲಿ ಅಳವಡಿಸಿಯೂ ಚಿತ್ರೀಕರಣ ಮಾಡಿದ್ದೇವೆ’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಡಾ.ಜಿ.ಸಂತೋಷ್‌ ಕುಮಾರ್ ಅವರು ಹೇಳಿದರು.

‘ಜೋಡಿಗೆರೆ, ಹೊನ್ನಮೆಟ್ಟಿ, ದೊಡ್ಡಸಂಪಿಗೆ, ಚಿಕ್ಕಸಂಪಿಗೆ, ಬೆಲ್ಲವತ್ತ, ಕೆ.ಕೆ.ಅಣೆಕಟ್ಟುಗಳು ಮುಂತಾದ ಪ್ರದೇಶಗಳನ್ನು ವಿಡಿಯೊದಲ್ಲಿ ತೋರಿಸಲಾಗಿದೆ’ ಎಂದು ಅವರು ವಿವರಿಸಿದರು.

360 ಡಿಗ್ರಿ ಕೋನದಲ್ಲಿ ಚಿತ್ರೀಕರಿಸುವ ಕ್ಯಾಮೆರಾ

ಶೈಕ್ಷಣಿಕ ಉದ್ದೇಶವೂ ಇದೆ

‘ಹುಲಿ ಸಂರಕ್ಷಿತ ಪ್ರದೇಶ ಆಗಿರುವುದರಿಂದ ಅರಣ್ಯದಲ್ಲಿ ಸಂಚಾರಕ್ಕೆ ಹಲವು ನಿರ್ಬಂಧಗಳಿವೆ. ಬಫರ್‌ ಬಲಯದಲ್ಲಿ ಮಾತ್ರ ಪರಿಸರ ಸ್ನೇಹಿ ಪ್ರವಾಸೋದ್ಯಮ ನಡೆಸಬಹುದು. ಬಿಆರ್‌ಟಿಯಲ್ಲಿ ಪ್ರವಾಸಿಗರು ನೋಡಬಹುದಾದ ಹಲವು ಪ್ರದೇಶಗಳು ಕೋರ್‌ ವಲಯದಲ್ಲಿ ಇದೆ. ಇವುಗಳನ್ನು ನೇರವಾಗಿ ವೀಕ್ಷಿಸಲು ಜನರಿಗೆ ಆಗುವುದಿಲ್ಲ. ಕನಿಷ್ಠ ಪಕ್ಷ ವರ್ಚ್ಯುವಲ್‌ ರಿಯಾಲಿಟಿ ತಂತ್ರಜ್ಞಾನದಲ್ಲಿ ಅವರಿಗೆ ಅಲ್ಲಿನ ದೃಶ್ಯಗಳನ್ನು ಕಟ್ಟಿಕೊಡುವುದು ನಮ್ಮ ಉದ್ದೇಶ. ಪ್ರವಾಸಿಗರನ್ನು ಸೆಳೆಯುವುದರ ಜೊತೆಗೆ ಶಾಲಾ ಮಕ್ಕಳಿಗೆ ನಮ್ಮ ಅರಣ್ಯದ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ, ಅರಣ್ಯ ಸಂರಕ್ಷಣೆ ತಿಳಿಹೇಳುವ ಉದ್ದೇಶವೂ ಇದರ ಹಿಂದಿದೆ’ ಎಂದು ಸಂತೋಷ್‌ ಕುಮಾರ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.