ADVERTISEMENT

ಪ್ರವಾಸ: ಅಕಿಗಹರದ ಸಾವಿನ ಬಿಂಬಗಳು

ಲಿಂಗರಾಜು ಡಿ.ಎಸ್
Published 30 ಜನವರಿ 2021, 19:30 IST
Last Updated 30 ಜನವರಿ 2021, 19:30 IST
ಮರಗಳಿಗೆ ನೇತುಬಿಟ್ಟ ಗೊಂಬೆಗಳು...
ಮರಗಳಿಗೆ ನೇತುಬಿಟ್ಟ ಗೊಂಬೆಗಳು...   

ಜಪಾನ್ ದೇಶದಲ್ಲಿ ಆತ್ಮಹತ್ಯೆಯ ಕರಾಳ ಇತಿಹಾಸದ ಒಂದು ಆಚರಣೆ ಉಬಸುತೆ. ಶತಮಾನಗಳ ಹಿಂದೆ ನಿಶ್ಶಕ್ತ ವೃದ್ಧ ಮಹಿಳೆಯರನ್ನು ಪರ್ವತ ಪ್ರದೇಶಗಳ ನಿರ್ದಿಷ್ಟ ಜಾಗಕ್ಕೆ ಕೊಂಡೊಯ್ದು ಬಿಟ್ಟು ಬರುತ್ತಿದ್ದ ಅಸಹ್ಯ ಪದ್ಧತಿ ಇದು. ಆತ್ಮಹತ್ಯೆ ಮಾಡಿಕೊಳ್ಳುವಂತೆ ಅವರನ್ನು ಒತ್ತಾಯಿಸಲಾಗುತ್ತಿದ್ದ ಪರಿ ಇದು.

ಜಪಾನ್ ಜನಪದ ಸಾಹಿತ್ಯ ಉಬಸುತೆಗೊಂದು ಕಥನ ಪರಂಪರೆಯನ್ನೇ ಕೊಟ್ಟಿದೆ. ಅದರಲ್ಲಿ ಜಪಾನ್ ಯುದ್ಧಕಲಿಗಳಾದ ಸಮುರಾಯ್‍ಗಳದ್ದೂ ದೊಡ್ಡ ಕೊಡುಗೆ ಇದೆ. ಅತ್ಯಂತ ಸ್ವಾಭಿಮಾನಿಯಾದ ಸಮುರಾಯ್ ಹೋರಾಟದಲ್ಲಿ ಸೋಲುವ ಪ್ರಸಂಗ ಎದುರಾದಾಗ ತನ್ನ ತಲೆಯನ್ನು ತಾನೇ ಕಡಿದುಕೊಂಡು ಮೃತ್ಯುವನ್ನು ಆಹ್ವಾನಿಸಿಕೊಳ್ಳುತ್ತಿದ್ದರು. ಇದನ್ನು ಅಲ್ಲಿ ಹರಾಕಿರಿ ಎಂದು ಕರೆಯಲಾಗುತ್ತಿತ್ತು. ಹರಾಕಿರಿ ಆಚರಣೆ ಜಪಾನೀಯರಲ್ಲಿ ಹೆಮ್ಮೆಯ ಹಾಗೂ ಶ್ರೇಷ್ಠತೆಯ ಸಂಕೇತವಂತೆ. ಇಂತಹ ಆತ್ಮಹತ್ಯಾ ಪ್ರವೃತ್ತಿಯ ಬಗ್ಗೆ ಜಪಾನಿನದ್ದೇ ಮತ್ತೊಂದು ಸೋಜಿಗದ ಉದಾಹರಣೆ ಇಲ್ಲಿದೆ.

ಜಪಾನಿನ ರಾಜಧಾನಿ ಟೋಕಿಯೊದಿಂದ ಸುಮಾರು 160 ಕಿ.ಮೀ ದೂರವಿರುವ ಫ್ಯೂಜಿ ಪರ್ವತದ ತಪ್ಪಲಲ್ಲಿ ಅಕಿಗಹರ ಎಂಬ ದಟ್ಟವಾದ ಕಾಡೊಂದಿದೆ. ಇದನ್ನು ಸ್ಥಳೀಯ ಜನ ಜುಕೈ ಕಾಡು ಎಂತಲೂ ಕರೆಯುತ್ತಾರೆ. ಹಾಗೆಂದರೆ ವೃಕ್ಷ ಸಾಗರ ಎಂದರ್ಥ. ಹೆಸರಿಗೆ ತಕ್ಕಂತೆ ಇಲ್ಲಿ 35 ಚದರ ಕಿ.ಮೀ.ನಷ್ಟು ವಿಸ್ತಾರವಾದ ದಟ್ಟ ಕಾಡಿದೆ. ಅಕಿಗಹರ ಖ್ಯಾತವಾಗಿರುವುದು ಅದರ ಪರಿಸರದಿಂದಲ್ಲ ಬದಲಾಗಿ ಆತ್ಮಹತ್ಯೆಯ ಕಾರಣಕ್ಕಾಗಿ. ಅಕಿಗಹರ ಕಾಡಿನಲ್ಲಿ ವಾಸ ಮಾಡುವ ಯುರೈ ಎಂಬ ದುಷ್ಟ ಪ್ರೇತಗಳು ಅಲ್ಲಿಗೆ ಪ್ರವೇಶಿಸುವ ಮನುಷ್ಯರ ಮೇಲೆ ಋಣಾತ್ಮಕ ಪರಿಣಾಮ ಬೀರಿ ಆತ್ಮಹತ್ಯೆಗೆ ಪ್ರೇರೇಪಿಸುತ್ತವೆ ಎಂಬ ನಂಬಿಕೆ ಸ್ಥಳೀಯರಲ್ಲಿದೆ.

ADVERTISEMENT
ಕಾಡಿನ ಒಳಪ್ರವೇಶಿಸುವ ಜನರಿಗೆ ಎಚ್ಚರಿಕೆ ನೀಡುವ ಸೂಚನಾ ಫಲಕ

ಇದು ಕಥೆಯಾದರೆ ನೈಜ ಸನ್ನಿವೇಶ ಕೂಡ ನವಿರೇಳಿಸುತ್ತದೆ. ಅಕಿಗಹರ ಕಾಡು ಈಗ ಆತ್ಮಹತ್ಯಾ ವನ ಎಂಬ ಹೆಸರು ಪಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಎಲ್ಲೆಲ್ಲಿಂದಲೋ ಬರುವ ಜನ ಕಾಡು ಪ್ರವೇಶಿಸಿ ಅತಿಯಾಗಿ ಮಾದಕದ್ರವ್ಯಗಳ ಸೇವನೆ ಮಾಡಿ, ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರಂತೆ. ಕಾಡಿನ ಅಂದ ಸವಿಯಲು ಬಂದ ಕೆಲವರು ದಾರಿ ತಪ್ಪಿ ಬಾಯಾರಿಕೆ, ಹಸಿವು ಮತ್ತು ಭಯದಿಂದ ಸಾವನ್ನಪ್ಪಿರುವ ಸಾಧ್ಯತೆಗಳೂ ಇವೆಯಂತೆ. ಸ್ಥಳೀಯ ಆಡಳಿತ ಕಾಡಿನಲ್ಲಿ ಗಸ್ತು ಏರ್ಪಾಡು ಮಾಡಿದ್ದರೂ ಸಾಯಲೆಂದೇ ಬಂದವರು ಅಡಗಿ ಕೂತು ತಪ್ಪಿಸಿಕೊಳ್ಳುತ್ತಾರಂತೆ. ಕಾಡು ಪ್ರವೇಶಿಸಿದ ಕೂಡಲೇ ನಿರಾಶೆ ಹಾಗೂ ಖಿನ್ನತೆಯ ಭಾವ ಕಾಡ ಕಾಡತೊಡಗುತ್ತದೆ ಎನ್ನುತ್ತಾರೆ ಹೇಗೋ ಹೊರಬಂದ ಜನ.

ಕಾಡು ಸೃಷ್ಟಿಸುತ್ತಿರುವ ಖಿನ್ನತೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡಿರುವ ಭೂಗರ್ಭ ಶಾಸ್ತ್ರಜ್ಞ ಅಜೂಸಾ ಹಯಾನೊ ವಾರಾಂತ್ಯಗಳಲ್ಲಿ ಅಕಿಗಹರ ಕಾಡು ಪ್ರವೇಶಿಸಿ ಅಲ್ಲಿ ತಾವು ಕಂಡ ಜನರನ್ನು ಮಾತನಾಡಿಸಿ ಅವರು ಖಿನ್ನತೆಯಲ್ಲಿದ್ದರೆ ಬದುಕನ್ನು ಎದುರಿಸುವ ಧೈರ್ಯ ನೀಡುವ ಪ್ರಯತ್ನ ನಡೆಸುತ್ತಿದ್ದಾರೆ.

ಜೀವಬಿಟ್ಟವರ ಅನಾಥ ಪಾದರಕ್ಷೆಗಳು

ಕಾಡಿನ ಒಳಕ್ಕೆ ಪ್ರತೀ ವಾರ ಹೋಗುವ ಅಜೂಸಾ ಹಯಾನೊ ಅಲ್ಲಿ ಅನೇಕ ಅಸ್ಥಿಪಂಜರಗಳನ್ನು, ನೇಣು ಕುಣಿಕೆಗಳನ್ನು, ಅನಾಥವಾಗಿ ಬಿದ್ದ ಬಟ್ಟೆ, ಚಪ್ಪಲಿ, ಮರಣಪತ್ರಗಳು ಮತ್ತಿತರ ವಸ್ತುಗಳನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಅಲ್ಲಲ್ಲಿ ಮರಗಳಿಗೆ ನೇತು ಹಾಕಿದ ಗೊಂಬೆಗಳೂ ಕಾಣುತ್ತವಂತೆ. ಇದು ಮಾನಸಿಕ ಚಿತ್ತಸ್ಥೈರ್ಯ ಕಳೆದುಕೊಂಡವರ ವಿಹ್ವಲತೆಯ ಪ್ರತಿಬಿಂಬ ಎನ್ನುತ್ತಾರೆ ಆತ. ಮರವೊಂದಕ್ಕೆ ನೇತು ಬಿದ್ದಿದ್ದ ಒಂದು ಮರಣ ಪತ್ರ ಅತ್ಯಂತ ಬೇಸರ ಉಂಟು ಮಾಡಿತ್ತಂತೆ.

ಹಯಾನೊ ಹೇಳುವಂತೆ ಜಪಾನೀಯರಲ್ಲಿ ಪ್ರತಿಶತ 14.9 ಜನ ಆತ್ಮಹತ್ಯಾ ಗೀಳು ಹೊಂದಿರುತ್ತಾರಂತೆ. ಪ್ರವಾಸಿಗಳ ಸೋಗಿನಲ್ಲಿ ಅಕಿಗಹರಕ್ಕೆ ಬರುವ ಜನ ತಮ್ಮ ಕಾರುಗಳನ್ನು ಒಂದೆಡೆ ಬಿಟ್ಟು ಕಾಡಿನೊಳಕ್ಕೆ ಪ್ರವೇಶಿಸಿ ಮತ್ತೆ ಹಿಂದಿರುಗುವುದೇ ಇಲ್ಲ. ಕಾಡು ಪ್ರವೇಶಿಸುವ ಮುನ್ನ ಸರ್ಕಾರ ಒಂದು ಸೂಚನಾ ಫಲಕ ಹಾಕಿದೆ. ಅದರಲ್ಲಿ ಪ್ರತಿಯೊಬ್ಬರೂ ತಮ್ಮ ತಂದೆ-ತಾಯಿಗಳಿಂದ ಕೊಡುಗೆಯಾಗಿ ಬಂದಿರುವ ಬದುಕನ್ನು ಅಂತ್ಯಗೊಳಿಸುವ ಮುನ್ನ ತಮ್ಮ ಕುಟುಂಬ, ತಂದೆ-ತಾಯಿಗಳು, ಸಹೋದರ-ಸಹೋದರಿಯರು ಮತ್ತು ಮಕ್ಕಳ ನೆನಪನ್ನು ತಂದುಕೊಳ್ಳುವಂತೆ ಹೇಳಲಾಗಿದೆ. ಆದರೂ ಸಾಯಲೆಂದೇ ಬರುವ ಜನ ಅದನ್ನು ಗಮನಕ್ಕೆ ತೆಗೆದುಕೊಳ್ಳುವುದೇ ಇಲ್ಲ!

ಸೂರ್ಯನ ಬೆಳಕು ನೆಲ ಮುಟ್ಟದಂತಹ ದಟ್ಟ ಅಕಿಗಹರ ಕಾಡಿನಲ್ಲಿ ಫ್ಯೂಜಿ ಪರ್ವತದಿಂದ ಹರಿದ ಲಾವಾ ಹರಳುಗಟ್ಟಿ ನಿಂತಿದೆ. ಅಲ್ಲಿ ಹುಟ್ಟುವ ಸದ್ದುಗಳನ್ನೆಲ್ಲಾ ಕಾಡಿನ ಬಂಡೆಗಳು ಮತ್ತು ಮರ-ಗಿಡಗಳು ಪ್ರತಿಧ್ವನಿಸದೇ ಅತ್ಯಂತ ಭೀಕರವಾದ ನಿಶ್ಶಬ್ದವನ್ನು ಸೃಷ್ಟಿಸುತ್ತವೆ. ಈ ಭೀಕರತೆಯೇ ಬದುಕಿಗೆ ವಿಮುಖರಾದವರ ಮನಸ್ಸಿನಲ್ಲಿ ಕಳವಳ, ಕಾತರ, ಭಯ ಮತ್ತು ಆತ್ಮಹತ್ಯೆಯ ಗೀಳನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ.

ಚದುರಿ ಬಿದ್ದಿರುವ ವಸ್ತುಗಳು

ಅಕಿಗಹರ ಕಾಡಿನಲ್ಲಿ 2003ರಲ್ಲಿ 105 ಮೃತದೇಹಗಳು ಪತ್ತೆಯಾಗಿದ್ದವು. 2010ರಲ್ಲಿ 200 ಜನ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಪ್ರತಿವರ್ಷ ಮಾರ್ಚ್ ತಿಂಗಳಲ್ಲಿ ಜಪಾನ್ ದೇಶ ಅತೀ ಹೆಚ್ಚು ಆತ್ಮಹತ್ಯೆಗಳ ದಾಖಲೆ ಮಾಡುತ್ತದೆ. ಈ ಸಂಖ್ಯೆ ಪ್ರತೀವರ್ಷ ಅಕಿಗಹರದಲ್ಲೂ ಏರುತ್ತಿರುವುದರಿಂದ ಜಪಾನ್ ಸರ್ಕಾರ ಅಲ್ಲಿನ ಆತ್ಮಹತ್ಯೆಗಳ ಸಂಖ್ಯೆಯನ್ನು ಪ್ರಕಟಿಸುವುದನ್ನು ನಿಲ್ಲಿಸಿದೆ. ಅಕಿಗಹರದ ಆತ್ಮಹತ್ಯೆಯ ಭೀಕರತೆಯ ಬಗ್ಗೆ ಬಿಬಿಸಿ ಮತ್ತು ನ್ಯಾಷನಲ್ ಜಿಯೊಗ್ರಾಫಿಕ್‌ ಮಾಧ್ಯಮಗಳು ಸವಿವರ ವರದಿಗಳನ್ನು ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.