ADVERTISEMENT

'ಬಾಲಿ ಪಾಸ್' ಹಿಮದ ಮೇಲೆ ರೋಚಕ ನಡಿಗೆ

ಪ್ರಜಾವಾಣಿ ವಿಶೇಷ
Published 24 ಅಕ್ಟೋಬರ್ 2019, 6:37 IST
Last Updated 24 ಅಕ್ಟೋಬರ್ 2019, 6:37 IST
ಹಿಮರಾಶಿಯ ಒಡಲಿನಲ್ಲಿ...
ಹಿಮರಾಶಿಯ ಒಡಲಿನಲ್ಲಿ...   

ಹಿಮಾಲಯದ ಪರ್ವತ ಶ್ರೇಣಿಗಳಲ್ಲಿರುವ ಬಾಲಿ ಪಾಸ್‌, ಉತ್ತರಾಖಂಡದ ಯಮುನೋತ್ರಿಯನ್ನು ಸಂಪರ್ಕಿಸುವ ಚಾರಣ ಮಾರ್ಗ. ಇಲ್ಲಿ ಹಿಮದ ಹಾದಿಯಲ್ಲಿ ಹೆಜ್ಜೆ ಹಾಕಬೇಕು. ಹಗ್ಗ ಹಿಡಿದುಕೊಂಡು ನದಿ ದಾಟಬೇಕು. ಇದೊಂದು ರೀತಿಯ ಸಾಹಸದ ಜತೆಗೆ, ವಿಶೇಷ ಅನುಭವಗಳನ್ನು ಕಟ್ಟಿಕೊಡುವ ನಡಿಗೆ.

ಈ ವರ್ಷ ಸ್ವಲ್ಪ ಕಷ್ಟಕರ ಹಾಗೂ ಹೆಚ್ಚು ಜನ ಚಾರಣ ಮಾಡದಂತಹ ಸ್ಥಳದಲ್ಲಿ ಟ್ರೆಕ್ಕಿಂಗ್ ಮಾಡಬೇಕೆಂದು ನಿರ್ಧರಿಸಿದ್ದೆವು. ಅದರಂತೆ ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ, ಹಿಮಾಲಯದ ಬಾಲಿ ಪಾಸ್ ಬಗ್ಗೆ ಮಾಹಿತಿ ಸಿಕ್ಕಿತು. ಉತ್ತರಾಖಂಡದ ಯಮುನೋತ್ರಿಯನ್ನು ಸಂಪರ್ಕಿಸುವ ಈ ಸ್ಥಳದಲ್ಲಿ ಚಾರಣ ಆಯೋಜಿಸುವ ಸಂಸ್ಥೆಗಳ ಬಗ್ಗೆ ಹುಡುಕಾಟ ನಡೆಸಿದೆವು. ಆಗ ಸಿಕ್ಕಿದ್ದೇ ‘ಬಿಕತ್ ಅಡ್ವೆಂಚರ್ಸ್’ ಸಂಸ್ಥೆ. ಚಾರಣದ ವಿವರ ಕುರಿತು ಸಂಸ್ಥೆಯೊಂದಿಗೆ ಮಾತುಕತೆ ನಡೆಸಿದೆವು. ಅವರ ನಿಯಮಗಳೆಲ್ಲ ಒಪ್ಪಿಗೆಯಾಯಿತು. ಮೇ ತಿಂಗಳಲ್ಲಿ ಚಾರಣಕ್ಕೆ ಹೆಸರು ನೋಂದಾಯಿಸಿದೆವು. ಪೂರ್ವಭಾವಿಯಾಗಿ ದೂರದ ನಡಿಗೆ ಹಾಗೂ ಓಟ, ಉಸಿರಾಟದ ಅಭ್ಯಾಸ ಮಾಡುತ್ತಿದ್ದೆವು. ಇವೆಲ್ಲದರ ಜತೆಗೆ ವೈದ್ಯರಿಂದ ಆರೋಗ್ಯ ದೃಢೀಕರಣ ಪತ್ರವನ್ನೂ ಪಡೆದುಕೊಂಡೆವು.

ಈ ಚಾರಣದ ತಂಡದಲ್ಲಿದ್ದವರು ಏಳು ಮಂದಿ. ಎಲ್ಲರೂ ಡೆಹ್ರಾಡೂನ್‌ನಲ್ಲಿ ಸೇರಿದೆವು. ಇಲ್ಲಿಂದ ಚಾರಣದ ಸಂಪೂರ್ಣ ವ್ಯವಸ್ಥೆ ಸಂಸ್ಥೆಯ ಜವಾಬ್ದಾರಿ. ಡೆಹ್ರಾಡೂನ್‌ನಿಂದ ಸುಮಾರು 200 ಕಿ.ಮೀ ದೂರದ ಸಾಂಕ್ರಿ ಎಂಬ ಸ್ಥಳಕ್ಕೆ ಸುಮಾರು ಎಂಟು ಗಂಟೆಗಳ ರಸ್ತೆ ಪ್ರಯಾಣ. ಸಂಸ್ಥೆಯ ಅತಿಥಿಗೃಹದಲ್ಲಿ ರಾತ್ರಿ ಉಳಿದೆವು. ಇದು ಹಿಮಾಲಯದ ಗುಡ್ಡಗಾಡು ಪ್ರದೇಶದ ಟಿಪಿಕಲ್ ಹಳ್ಳಿಯ ಮರದ ಮನೆ. ವ್ಯವಸ್ಥೆ ಚೆನ್ನಾಗಿತ್ತು. ಸಾಂಕ್ರಿಯಿಂದ ಮರುದಿನ ಬೆಳಿಗ್ಗೆ ಸುಮಾರು 12 ಕಿ.ಮೀ ದೂರದ ತಾಲುಕಾ ಎಂಬ ಗ್ರಾಮಕ್ಕೆ ಜೀಪ್‌ನಲ್ಲಿ ಹೊರಟೆವು. ಕಲ್ಲು ಮಣ್ಣಿನ ಕಚ್ಚಾ ರಸ್ತೆಯಲ್ಲಿ ಒಂದು ಗಂಟೆ ಪ್ರಯಾಣ ಅದು.

ADVERTISEMENT

ಇದು ನಮ್ಮ ಚಾರಣ ಆರಂಭವಾಗುವ ಸ್ಥಳ. ಇದು ಸಮುದ್ರ ಮಟ್ಟದಿಂದ ಸುಮಾರು 2017 ಮೀ ಎತ್ತರದಲ್ಲಿದೆ. ಮೊದಲ ದಿನವೇ ಸುಮಾರು 12 ಕಿ.ಮೀ ಚಾರಣ. ಸಣ್ಣ ಕಾಡುಗಳಲ್ಲಿ ಸೀಮಾ ಎಂಬ ಜಾಗದವರೆಗೆ ಹೆಜ್ಜೆ ಹಾಕಿದೆವು. ದಾರಿಯಲ್ಲಿ ಮಳೆರಾಯನ ದರ್ಶನವಾಯಿತು. ತೋನ್ಸ್ ನದಿಯ ತೀರದಲ್ಲಿ ನಮ್ಮ ಮೊದಲ ಶಿಬಿರ (ಟೆಂಟ್ ವಾಸ). ರಾತ್ರಿ ಆಕಾಶ ಶುಭ್ರವಾಗಿದ್ದುದರಿಂದ ನಕ್ಷತ್ರಲೋಕವೇ ನಮ್ಮ ಕಣ್ಣೆದುರಿಗಿತ್ತು. ಜೊತೆಯಲ್ಲಿ ನದಿಯ ನೀರಿನ ಜುಳುಜುಳು ನಿನಾದಾ.. ಅಬ್ಬಾ! ಅದೊಂದು ಅದ್ಭುತ ರಾತ್ರಿ.

ಸುಂದರ ನೀಲಿ ಚೆಲುವೆ

ಚಾರಣದ ಎರಡನೆಯ ದಿನ ಬೆಳಿಗ್ಗೆ ಯೋಗ, ಪ್ರಾಣಾಯಾಮ ಮುಗಿಸಿ ಸೀಮಾದಿಂದ 8 ಕಿ.ಮೀ ಹುಲ್ಲುಗಾವಲುಗಳಲ್ಲಿ ಚಾರಣ. ದಾರಿಯುದ್ದಕ್ಕೂ ಕುರಿಗಳ ಮಂದೆ, ವಿಶೇಷವಾದ ಬಣ್ಣಗಳ ಹೂವುಗಳು (ಬೋಡೋಡೆನ್ಡ್ರೋನ್ ಹೂವು) ಕಂಡವು. ‘ಈ ಹೂವು ಎತ್ತರ ಪ್ರದೇಶದಲ್ಲಿ ಅರಳಿದಾಗ ಹಿಮದಂತೆ ಬಿಳಿಯಾಗಿ ವಿಷವಾಗುತ್ತದೆ’ ಎಂದು ವಿವರಿಸಿದರು ನಮ್ಮ ಗೈಡ್‌. ಆದರೆ, ಆ ಹೂವುಗಳು ನೇರಳೆ, ನೀಲಿ, ಕೆಂಪು ಬಣ್ಣಗಳಲ್ಲಿ ಅರಳಿದ್ದವು. ಆ ದಿನದ ನಮ್ಮ ಶಿಬಿರ ದೆಬ್‍ಶುಬುಗ್ಯಾಲ್‍ನಲ್ಲಿ.

ಮುಂದಿನ ಚಾರಣ, ಸುಪಿನ್ ನದಿಯ ದಡದಲ್ಲಿ. ನದಿಯಲ್ಲಿ ನೀರು ರಭಸದಿಂದ ಹರಿಯುತ್ತಿತ್ತು. ನಾವು ನದಿ ದಾಟಲು ರಿವರ್ಸ್ ಝಿಪ್ ಲೈನಿಂಗ್ (ಅಂದರೆ ಹಗ್ಗದಲ್ಲಿ ತೂಗಾಡುತ್ತಾ ನದಿ ದಾಟುವುದು) ಮಾಡಿದೆವು. ಈ ಮಧ್ಯೆ ಮಳೆ ಪ್ರಾರಂಭವಾಗಿತ್ತು. ರೈನ್‌ಕೋಟ್ ಧರಿಸಿದ್ದರೂ ಮೈಯೆಲ್ಲಾ ಒದ್ದೆ. ಚಳಿಯಲ್ಲಿ ನಡೆಯುವ ಅನುಭವವೇ ವಿಶಿಷ್ಟ ಎನಿಸಿತ್ತು. ಆಗಷ್ಟೇ ಸುರಿದಿದ್ದ ಹಿಮದ ಮೇಲೆ ಹೆಜ್ಜೆ ಹಾಕುವುದೂ ಒಂಥರ ಮಜವಾಗಿತ್ತು. ಆ ದಿನದ ರುಯನ್‍ಸರಾ ತಾಲ್ ತಲುಪಿದಾಗ ಸಂಜೆ ನಾಲ್ಕುವರೆ. ಶಿಬಿರದ ಸುತ್ತಲೂ ಪರ್ವತ ಶಿಖರಗಳ ಸಾಲು. ಅವುಗಳ ನಡುವೆ ಕಂಡ ಸೂರ್ಯಾಸ್ತ ನಯನ ಮನೋಹರ. ರಾತ್ರಿ ಆಕಾಶ ಶುಭ್ರವಾಗಿದ್ದು ಚಂದ್ರ ನಕ್ಷತ್ರಗಳು ಬೆಳಗುತ್ತಿದ್ದು ಒಂದು ಅನೂಹ್ಯ ಲೋಕವನ್ನು ಸೃಷ್ಟಿ ಮಾಡಿದ ಹಾಗಿತ್ತು. ಜೊತೆಗೆ ಚಳಿಯೂ ಜೋರಾಗಿತ್ತು.

ಹಾಲ್ನೋರೆಯ ನದಿ ದಾಟಲು ರಿವರ್ಸ್‌ ಝಿಪ್‌ ಲೈನಿಂಗ್‌ ಸಾಹಸ

ಮರುದಿನ ಏಳು ಕಿ.ಮೀ ಚಾರಣ. ನಾವು 1200ಮೀ ಗಳಷ್ಟು ಎತ್ತರಕ್ಕೆ ಏರಿ ಕ್ಯಾಂಪ್‌ ಮಾಡಬೇಕಿತ್ತು. ಅಲ್ಲದೆ ದಿನಪೂರ್ತಿ ಹಿಮದಲ್ಲೇ ನಡೆಯಬೇಕಿತ್ತು. ಇದೇ ಸಂದರ್ಭಕ್ಕಾಗಿ ಕಾಯುತ್ತಿದ್ದ ನಾವು ಉತ್ಸಾಹದಿಂದಲೇ ಹೆಜ್ಜೆ ಹಾಕಿದೆವು. ಕೆಲವು ಕಡೆ ಹಿಮದ ಹಾದಿಯ ಅಗಲ ತುಂಬಾ ಕಡಿಮೆ ಇತ್ತು. ಎಚ್ಚರಿಕೆಯಿಂದ ನಡೆಯಬೇಕಿತ್ತು. ರಸ್ತೆಯ ಎರಡು ಬದಿಯೂ ಪ್ರಪಾತ. ಸ್ವಲ್ಪ ಹೆಜ್ಜೆ ತಪ್ಪಿದರೂ ಪ್ರಪಾತದಲ್ಲಿ ಬೀಳುತ್ತಿದ್ದೆವು. ಕೆಲವು ಕಡೆ ಹೆಜ್ಜೆ ಹಾಕುವಾಗ ಹಿಮದಲ್ಲಿ ಮಂಡಿಯವರೆಗೂ ಕಾಲು ಹೂತುಕೊಳ್ಳುವಂತಿತ್ತು. ನಮ್ಮ ಬೆನ್ನ ಹಿಂದೆಯೇ ಸ್ವರ್ಗಾರೋಹಣ ಪರ್ವತ ಕಾಣುತ್ತಿತ್ತು. ನಾವು ಶೂ ಮೇಲೆ ಮೈಕ್ರೊ ಸ್ಪೈಕ್ಸ್ ಧರಿಸಿದ್ದರಿಂದ ಹಿಮದ ಮೇಲೆ ಜಾರದಂತೆ ನಡೆಯಲು ಸಾಧ್ಯವಾಯಿತು.

ರಾತ್ರಿ ನಮ್ಮ ಬಿಡಾರದ ಮೇಲೆ ಹಿಮ ಬೀಳುವ ಹಾಗೂ ಗಾಳಿ ಬೀಸುವ ಶಬ್ದ. ಟೆಂಟ್ ಮೇಲೆ ಸುರಿಯುತ್ತಿದ್ದ ಹಿಮವನ್ನು ಮಲಗಿಕೊಂಡೇ ಕೊಡವಿ ಬೀಳಿಸುತ್ತಿದ್ದೆವು. ಇಲ್ಲದಿದ್ದರೆ ಟೆಂಟ್ ಮೈಮೇಲೆ ಬಿದ್ದು ನಾವು ಹಿಮದಲ್ಲಿ ಹೂತು ಹೋಗುವ ಸಂಭವವಿರುತ್ತದೆ. ಏಳೆಂಟು ಅಡಿ ಎತ್ತರವಿದ್ದ ಹಿಮದ ಬಂಡೆಯ ಮೇಲೆ ನಮ್ಮ ಟೆಂಟ್ ಇತ್ತು. ನಮ್ಮ ಮೈ ಶಾಖಕ್ಕೆ ಹಿಮ ಕರಗಿ ನಾವು ಮಲಗಿದಲ್ಲೇ ಹೂತುಹೋಗುತ್ತೀವೇನೋ ಎಂದು ಭಯವಾಗುತ್ತಿತ್ತು. ಟೆಂಟ್ ಒಳಗೇ ಸೀಮೆಎಣ್ಣೆ ಸ್ಟವ್‍ನಲ್ಲಿ ಹಿಮ ಕರಗಿಸಿ ಅದೇ ನೀರನ್ನು ಕುಡಿದು ಅದರಲ್ಲೇ ಅಡುಗೆ ಮಾಡಿ, ಊಟ ಮಾಡಿದೆವು. ಎಲ್ಲಾ ಸೀಮೆಎಣ್ಣೆ ವಾಸನೆ.

ಐದನೇ ದಿನ ಮುಂಜಾನೆ ನಾಲ್ಕುವರೆಗೆ ಹೆಡ್‌ಲೈಟ್ ಧರಿಸಿ ಚಾರಣ ಆರಂಭ. ದಾರಿಯುದ್ದಕ್ಕೂ ಹಿಮಪಾತ. ಅದರಲ್ಲೇ ಬಾಲಿ ಪಾಸ್‍ನ ತುತ್ತತುದಿ(4950 ಮೀ) ದಾಟಬೇಕಿತ್ತು. ತುಂಬಾ ಕಷ್ಟಕರ ಹಾದಿ. ನಮ್ಮ ಗೈಡ್‌ನ ಎಚ್ಚರಿಕೆ ಹಾಗೂ ಸ್ಫೂರ್ತಿಯ ಮಾತುಗಳು ಹಾದಿಯನ್ನು ಸುಗಮಗೊಳಿಸಿತ್ತು. ಅಂತೂ ಇಂತೂ 11 ಗಂಟೆಗೆ ನಮ್ಮ ಗುರಿ ತಲುಪಿದೆವು. ವಾತಾವರಣ ಅನಾನುಕೂಲವಾಗಿದ್ದರೂ ಗುರಿ ಮುಟ್ಟಿದ ಸಂಭ್ರಮದಲ್ಲಿ ಮನಸ್ಸು ಕುಣಿದಾಡುತ್ತಿತ್ತು.

ಇಲ್ಲಿಂದ ಸ್ವರ್ಗಾರೋಹಣ ಪರ್ವತ, ಯಮುನೋತ್ರಿ ಕಣಿವೆಯ ಭಾಗ. ಹಿಮಾಲಯ ಪರ್ವತಗಳ ಸಾಲು ಅದ್ಭುತವಾಗಿ ಕಾಣುತ್ತಿತ್ತು. ನಾವೀಗ ಸಮುದ್ರಮಟ್ಟದಿಂದ ಸುಮಾರು 4950 ಮೀ(16240 ಅಡಿ) ಎತ್ತರದಲ್ಲಿದ್ದೆವು. ಸಂಜೆಯೊಳಗೆ ಇಲ್ಲಿಂದ ಇಳಿದು ಲೋವರ್ ದಾಮಿನಿಗೆ (3415ಮೀ) ಸೇರಬೇಕಿತ್ತು. ಹೀಗಾಗಿ ಹೆಚ್ಚು ಸಮಯ ತುದಿಯಲ್ಲಿ ನಿಲ್ಲಲಿಲ್ಲ. ಇಳಿಯುವಾಗ ಕಾಲು ಜಾರುತ್ತಿತ್ತು. ಕೆಲವು ಕಡೆಗಳಲ್ಲಿ ಕುಳಿತು ಜಾರುಬಂಡೆಯಲ್ಲಿ ಜಾರುವಂತೆ ಜಾರಿದೆವು.

ಆಬ್ಬಾ! ಎಂತಹ ರೋಮಾಂಚನ ಗಳಿಗೆ. ಸುತ್ತಲೂ ಹಿಮದ ರಾಶಿ. ಏಕಾಂಗಿಯಾಗಿ ಜಾರುವಾಗ ಮೇಲೆ ನಿಂತವರಿಗೆ ನಾವೊಂದು ಚುಕ್ಕಿಯಂತೆ ಕಾಣುತ್ತಿದ್ದೆವು. ಹೀಗೆ ವೇಗವಾಗಿ ಸಾವಿರಾರು ಮೀಟರ್ ಕೆಳಗಿಳಿಯುವ ಭರದಲ್ಲಿ ಮಧ್ಯಾಹ್ನ ಊಟ ಮಾಡಲು ಸಾಧ್ಯವಾಗಲಿಲ್ಲ. ಕೊನೆಗೆ ಆ ಊಟವನ್ನೇ ಬುತ್ತಿ ಮಾಡಿಕೊಂಡು ಹೊರಟೆವು. ಸಂಜೆ ಏಳುಗಂಟೆಗೆ ಲೋವರ್ ದಾಮಿನಿ ತಲುಪಿದೆವು. ಅಲ್ಲಿ ಟೆಂಟ್ ಹಾಕಲು ಸಮತಟ್ಟಾದ ಜಾಗವಿರಲಿಲ್ಲ. ಅಂಕುಡೊಂಕಿನ ನೆಲದಲ್ಲೇ ಕುಳಿತು, ತಂದಿದ್ದ ಬುತ್ತಿ ಬಿಚ್ಚಿ, ರಾತ್ರಿ 11 ಗಂಟೆಗೆ ಊಟ ಮಾಡಿ ಮಲಗಿದೆವು. ಬಹಳ ಆಯಾಸವಾಗಿದ್ದುದರಿಂದ ಚೆನ್ನಾಗಿ ನಿದ್ದೆ ಮಾಡಿದೆವು.

ಬೆಳಿಗ್ಗೆ ಒಂಬತ್ತು ಗಂಟೆಗೆ ಎದ್ದು ಸುಮಾರು 9 ಕಿ.ಮೀ ದೂರದ ಜಾನ್ಕೀಚಟ್ಟಿಗೆ ಹೊರಟೆವು. ಜಾನ್ಕೀಚಟ್ಟಿಗೆ ಬರುವ ದಾರಿಯಲ್ಲಿ ಯಮುನೋತ್ರಿಯನ್ನು ನೋಡಿದೆವು. ಅಲ್ಲಿವರೆಗೂ ನಮ್ಮ ಚಾರಣದ ಜತೆಗಿದ್ದ ಪ್ರಶಾಂತವಾದ ವಾತಾವರಣ, ಜನಜಂಗುಳಿಯಲ್ಲಿ ಕಳೆದುಹೋಯಿತು. ಅರ್ಧಗಂಟೆಯಲ್ಲಿ ಜಾನ್ಕೀಚಟ್ಟಿಯ ಹೋಟೆಲ್‍ಗೆ ತಲುಪಿದೆವು. ಅಲ್ಲಿಂದ ಚಾರಣ ಸಂಸ್ಥೆಯವರು ಡೆಹ್ರಾಡೂನ್‍ಗೆ ತಲುಪಿಸಿದ ನಂತರ ನಾವೆಲ್ಲಾ ನಮ್ಮ ನಮ್ಮ ಊರಿಗೆ ಮರೆಯಲಾಗದ ಅದ್ಭುತ ನೆನಪುಗಳ ಅನುಭವಗಳ ಮೂಟೆಯನ್ನು ಹೊತ್ತು ಪ್ರಯಾಣ ಮಾಡಿದೆವು.

ಹಿಮದ ದಾರಿಯಲ್ಲಿ ನಡುವೆ ಮೂಡಿದ ಹೆಜ್ಜೆ ಗುರುತು –ಚಿತ್ರಗಳು:ಬಿ. ಪ್ರದ್ಯುಮ್ನ ಅರಸ, ಕೆ. ಸುನಾದ ಹೆಬ್ಬಾರ್

ಕೆಲವೊಂದು ಎಚ್ಚರಿಕೆ..

* ನಮ್ಮ ಚಾರಣ ಯಶಸ್ವಿಗೆ ಚಾರಣ ನಿರ್ವಾಹಕ ಅಸ್ಸಾಂನ ಗೌತಮ್‌ ಮಾರ್ತಾಂಡ, ಸ್ಥಳೀಯ ಮಾರ್ಗದರ್ಶಕ ಗುಲಾಬ್ ಅವರ ಮಾರ್ಗದರ್ಶನವೇ ಕಾರಣ. ಹವಾಮಾನ ವೈಪರಿತ್ಯದಲ್ಲೂ ಅವರು ಕೈಗೊಂಡ ನಿರ್ಧಾರ ನಮ್ಮಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುತ್ತಿತ್ತು.

* ಇಂತಹ ಚಾರಣಗಳನ್ನು ಕೈಗೊಳ್ಳುವಾಗ ಒಂದಷ್ಟು ಎಚ್ಚರಿಕೆ ಅಗತ್ಯ. ಬೆಚ್ಚಗಿನ ಉಡುಪುಗಳು, ಉತ್ತಮ ಆರೋಗ್ಯ, ಕನಿಷ್ಟ ಹತ್ತು ಕಿ.ಮೀ ಸಾಧಾರಣ ರಸ್ತೆಯಲ್ಲಿ ವಿರಮಿಸದೇ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಬಿಸ್ಕತ್ತು, ಒಣಹಣ್ಣುಗಳನ್ನು ನಮ್ಮೊಂದಿಗೆ ಕೊಂಡೊಯ್ಯಬೇಕು.

* ಸಂಸ್ಥೆಯವರು ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ತಂದಿದ್ದರೂ ನಮಗೆ ಅವಶ್ಯಕವಾದ ಔಷಧಿಗಳನ್ನು ಕಡ್ಡಾಯವಾಗಿ ಇಟ್ಟುಕೊಂಡಿರಬೇಕು. ಪ್ರಕೃತಿಯ ಸೌಂದರ್ಯ ನೋಡಿ ಆಸ್ವಾದಿಸುವ ಹಾಗೆ, ಅದರಿಂದ ಉಂಟಾಗುವ ಸಮಸ್ಯೆಯನ್ನು ಜಾಣ್ಮೆಯಿಂದ ಎದುರಿಸುವ ಸ್ಥೈರ್ಯ ಬೆಳೆಸಿಕೊಳ್ಳಬೇಕು.

ನಿರೂಪಣೆ: ಬಿ. ಶೋಭಾ ಅರಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.