ADVERTISEMENT

ಪ್ರವಾಸೋದ್ಯಮ ಅಭಿವೃದ್ಧಿಗೆ ದೊರಕುವುದೇ ಅನುದಾನ

ಪ್ರಗತಿ ಕಾಣದ ಜಿಲ್ಲೆಯ ಐತಿಹಾಸಿಕ ತಾಣಗಳು

ಚಂದ್ರಕಾಂತ ಮಸಾನಿ
Published 6 ಮಾರ್ಚ್ 2021, 19:31 IST
Last Updated 6 ಮಾರ್ಚ್ 2021, 19:31 IST
ಬೀದರ್‌ ಕೋಟೆ
ಬೀದರ್‌ ಕೋಟೆ   

ಬೀದರ್: ರಾಜ್ಯದ ಮುಕುಟ ಮಣಿ ಬೀದರ್‌ ಜಿಲ್ಲೆಯಲ್ಲಿ ಲೆಕ್ಕವಿಲ್ಲದಷ್ಟು ಐತಿಹಾಸಿಕ ಸ್ಮಾರಕಗಳು, ಕೋಟೆ ಕೊತ್ತಲಗಳು ಹಾಗೂ ಪವಿತ್ರ ಯಾತ್ರಾ ಸ್ಥಳಗಳು ಇವೆ. ಜಿಲ್ಲೆಯ ಒಂದು ಬದಿಗೆ ಮಹಾರಾಷ್ಟ್ರ, ಇನ್ನೊಂದು ಬದಿಗೆ ತೆಲಂಗಾಣ ಇದೆ. ಜಿಲ್ಲೆಗೆ ನೆರೆಯ ರಾಜ್ಯಗಳಿಂದಲೇ ಅತಿ ಹೆಚ್ಚು ಪ್ರವಾಸಿಗರು ಬರುತ್ತಾರೆ. ಜಿಲ್ಲೆಯ ಪ್ರವಾಸೋದ್ಯಮಕ್ಕೆ ರಾಜ್ಯ ಸರ್ಕಾರ ಈ ಬಾರಿಯಾದರೂ ಬಜೆಟ್‌ನಲ್ಲಿ ಅನುದಾನ ಒದಗಿಸಿದರೆ ಜಿಲ್ಲೆಯ ಅಭಿವೃದ್ಧಿಗೆ ನೆರವಾಗಲಿದೆ.

ಜಿಲ್ಲಾಧಿಕಾರಿಯಾಗಿದ್ದ ಹರ್ಷಗುಪ್ತ ಅವರು ವರ್ಗವಾಗಿ ಹೋದ ನಂತರ ಜಿಲ್ಲೆಗೆ ಬಂದ ಅಧಿಕಾರಿಗಳು ಪ್ರವಾಸೋದ್ಯಮ ಅಭಿವೃದ್ಧಿಗೆ ಆಸಕ್ತಿ ನೀಡಲಿಲ್ಲ. ಜಿಲ್ಲಾಧಿಕಾರಿಯಾಗಿದ್ದ ಅನುರಾಗ ತಿವಾರಿ ಮಾತ್ರ ಉದ್ಯಮಿಗಳು, ಪಾರಂಪರಿಕ ಮನೆಗಳ ಮಾಲೀಕರು, ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಸಾಮಾಜಿಕ ಕಾರ್ಯಕರ್ತರೊಂದಿಗೆ ಅನೇಕ ಸಭೆಗಳನ್ನು ನಡೆಸಿ ಸರ್ಕಾರಕ್ಕೆ ಪ್ರಸ್ತಾವಗಳನ್ನು ಕಳಿಸಿದ್ದರು. ಆದರೆ, ಸರ್ಕಾರ ಬಜೆಟ್‌ನಲ್ಲಿ ಅನುದಾನ ಒದಗಿಸಲಿಲ್ಲ.

ತಿವಾರಿ ಅವರ ನಂತರ ಬಂದ ಜಿಲ್ಲಾಧಿಕಾರಿಗಳು ಪ್ರವಾಸೋದ್ಯಮದ ಅಭಿವೃದ್ಧಿಗೆ ಎಳ್ಳಷ್ಟು ಆಸಕ್ತಿ ತೋರಿಸಿಲ್ಲ. ಹೈದರಾಬಾದ್, ಮುಂಬೈ, ಪುಣೆ ಹಾಗೂ ಲಾತೂರ್‌ನಲ್ಲಿ ಹೋಟೆಲ್‌ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದವರು ಲಾಕ್‌ಡೌನ್‌ ನಂತರ ಜಿಲ್ಲೆಗೆ ಮರಳಿದ್ದಾರೆ. ಪ್ರವಾಸಿ ತಾಣಗಳಲ್ಲಿ ಫುಡ್‌ ಪಾರ್ಕ್‌ ನಿರ್ಮಿಸಿಕೊಟ್ಟರೆ ವಲಸೆ ಕಾರ್ಮಿಕರ ಬದುಕು ಹಸನಾಗಲಿದೆ. ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದೆ ಎನ್ನುವುದು ಹಲವರ ಅಭಿಪ್ರಾಯವಾಗಿದೆ.

ADVERTISEMENT

ಅನುದಾನದ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಪುರಾತನ ಭೂಕಾಲುವೆ ಅಭಿವೃದ್ಧಿ ಕಾರ್ಯ ನನೆಗುದಿಗೆ ಬಿದ್ದಿದೆ. ನಗರದಲ್ಲಿರುವ ಪ್ರಮುಖ ದರ್ವಾಜಾಗಳ ಮುಂಭಾಗದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು. ಕೋಟೆ ಆವರಣದಿಂದ ಚೌಬಾರಾ ವರೆಗೆ ಪಾರಂಪರಿಕ ರಸ್ತೆ ನಿರ್ಮಾಣ ಮಾಡಬೇಕು. ಕೋಟೆಯಲ್ಲಿ ಧ್ವನಿ ಬೆಳಕಿನ ವ್ಯವಸ್ಥೆ ಮಾಡಬೇಕು ಎನ್ನುವ ಪ್ರಸ್ತಾವ ಮೂಲೆ ಗುಂಪಾಗಿವೆ. ಕಡತಗಳು ದೂಳು ತಿನ್ನುತ್ತಿವೆ.

ಹಿಂದಿನ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಂಡೆಪ್ಪ ಕಾಶೆಂಪೂರ್‌ ಅವರು ಬೀದರ್‌ನಲ್ಲಿ ಕೃಷಿ ಉತ್ಪನ್ನಗಳ ಕ್ಲಸ್ಟ್‌ರ್ ಆರಂಭಿಸುವುದಾಗಿ ಹೇಳಿದ್ದರು. ಬಜೆಟ್‌ನಲ್ಲೂ ಘೋಷಣೆ ಮಾಡಲಾಗಿತ್ತು. ಆದರೆ, ಅದು ಇಂದಿಗೂ ಆರಂಭವಾಗಿಲ್ಲ. ಹತ್ತು ವರ್ಷಗಳ ಅವಧಿಯಲ್ಲಿ ಬೀದರ್‌ ಜಿಲ್ಲೆಗೆ ದೊಡ್ಡ ಯೋಜನೆಗಳು ಬಂದಿಲ್ಲ. ಬಜೆಟ್ ಮಂಡನೆ ಪೂರ್ವದಲ್ಲಿ ಜಿಲ್ಲೆಯ ಜನರ ನಿರೀಕ್ಷೆಗಳು ಗರಿಬಿಚ್ಚಿಕೊಳ್ಳುತ್ತವೆ. ಬಜೆಟ್ ನಂತರ ಮತ್ತೆ ನಿರಾಸೆ ಕಾದಿರುತ್ತದೆ.

‘ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳು ಇವೆ. ರಾಜ್ಯ ಸರ್ಕಾರ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಮಗ್ರವಾದ ಯೋಜನೆಯೊಂದನ್ನು ರೂಪಿಸಿ ಬಜೆಟ್‌ನಲ್ಲಿ ಅನುದಾನ ಒದಗಿಸಬೇಕು’ ಎನ್ನುತ್ತಾರೆ ಟೀಮ್‌ ಯುವಾದ ಸಂಚಾಲಕ ವಿನಯ ಮಾಳಗೆ.

‘ಬೀದರ್‌ನಲ್ಲಿ ಟೂರಿಸಂ ಕಾರಿಡಾರ್‌ ನಿರ್ಮಾಣ ಮಾಡಬೇಕು. ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಎಲ್ಲ ಬಗೆಯ ಸೌಲಭ್ಯಗಳು ದೊರೆಯುವಂತೆ ಮಾಡಬೇಕು. ಜಿಲ್ಲೆಯಲ್ಲಿ ಟ್ಯಾಕ್ಸಿ ಬಾಡಿಗೆ ಹೈದರಾಬಾದ್‌ನ ದುಪ್ಪಟ್ಟು ಇದೆ. ಟ್ಯಾಕ್ಸಿಗೆ ಫಿಕ್ಸ್‌ ದರ ನಿಗದಿಪಡಿಸಬೇಕು. ಟ್ಯಾಕ್ಸಿ ಪ್ರೀಪೇಡ್‌ ಸೆಂಟರ್‌ಗಳನ್ನು ಸ್ಥಾಪನೆ ಮಾಡಬೇಕು’ ಎಂದು ನಗರಸಭೆ ಮಾಜಿ ಸದಸ್ಯ ನಬಿ ಖುರೇಶಿ ಒತ್ತಾಯಿಸುತ್ತಾರೆ.

‘ಸರ್ವಧರ್ಮ ಸದ್ಭಾವನೆಗೆ ಹೆಸರು ಪಡೆದ ಬೀದರ್‌ ನಲ್ಲಿ ಎಲ್ಲ ಧರ್ಮಗಳ ಪವಿತ್ರ ಕ್ಷೇತ್ರಗಳು ಇವೆ. ಇಲ್ಲಿಯ ಜನ ಎಲ್ಲ ಕ್ಷೇತ್ರಗಳಿಗೂ ಭೇಟಿಕೊಟ್ಟು ಭಕ್ತಿಭಾವ ತೋರುತ್ತಾರೆ. ಜಿಲ್ಲೆಯನ್ನು ಧಾರ್ಮಿಕ ಪ್ರವಾಸಿ ತಾಣವಾಗಿಯೂ ಅಭಿವೃದ್ಧಿ ಪಡಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ದತ್ತಾತ್ರಿ ಮೂಲಗೆ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.